ಮುಚ್ಚೋ ಸ್ಥಿತಿಗೆ ಸರ್ಕಾರಿ ಶಾಲೆ; ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ!
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಅಧಿಕಾರ, ಕುರ್ಚಿ ಕಿತ್ತಾಟದಲ್ಲೇ ಕಾಲ ಕಳೆದಿದೆ. ಪರಿಣಾಮ ಆಡಳಿತಯಂತ್ರ ಸಂಪೂರ್ಣ ಸ್ತಬ್ಧಗೊಂಡಂತಿದ್ದು, ಶಿಕ್ಷಣ ಕ್ಷೇತ್ರದ ಮೇಲೂ ನೇರ ದುಷ್ಪರಿಣಾಮ ಬೀರಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: "ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಆಸರೆಯಾಗಿದ್ದ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ತರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಾತ್ಮಕ ದಿವಾಳಿತನ ಪ್ರದರ್ಶಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಅಧಿಕಾರ, ಕುರ್ಚಿ ಕಿತ್ತಾಟದಲ್ಲೇ ಕಾಲ ಕಳೆದಿದೆ. ಪರಿಣಾಮ ಆಡಳಿತಯಂತ್ರ ಸಂಪೂರ್ಣ ಸ್ತಬ್ಧಗೊಂಡಂತಿದ್ದು, ಶಿಕ್ಷಣ ಕ್ಷೇತ್ರದ ಮೇಲೂ ನೇರ ದುಷ್ಪರಿಣಾಮ ಬೀರಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಸಹಸ್ರಾರು ಸರ್ಕಾರಿ ಶಾಲೆಗಳಲ್ಲಿ ಇಂದು ಮಕ್ಕಳ ದಾಖಲಾತಿ ಭಾರೀ ಕುಸಿದಿದೆ. UDISE+ ವರದಿಯೇ ಇದನ್ನು ಬಹಿರಂಗಪಡಿಸಿದ್ದು, ಪ್ರತಿ ವರ್ಷವೂ ಮಕ್ಕಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಲೇ ಇದೆ ಎಂದು ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 2.12 ಲಕ್ಷ ಮಕ್ಕಳು ಸರ್ಕಾರಿ ಶಾಲೆ ತೊರೆದಿರುವುದು ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಗೆ ಕೈಗನ್ನಡಿ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಬದಲು ಮುಚ್ಚುವಂಥ ಸ್ಥಿತಿಗೆ ತಂದಿರುವುದೇ ಈ ಸರ್ಕಾರದ ಮಹತ್ಸಾಧನೆ ಎಂದು ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆ ಯಾವಾಗೆಷ್ಟು ಕುಸಿತ?: 2023-24ರಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ 1,19,26,303 ಇದ್ದರೆ, 2024-25ರಲ್ಲಿ ಅದು 1,17,80,251ಕ್ಕೆ ಇಳಿದು 1,46,052 ವಿದ್ಯಾರ್ಥಿಗಳ ಕುಸಿತ ದಾಖಲಾಗಿದೆ. 2025-26ರಲ್ಲಿ ಮತ್ತಷ್ಟು 66,037 ವಿದ್ಯಾರ್ಥಿಗಳು ಕಡಿಮೆಯಾಗಿದ್ದು, ಒಟ್ಟು ದಾಖಲಾತಿ 1,17,14,214ಕ್ಕೆ ತಲುಪಿದೆ. ಶಾಲೆಗಳ ಸಬಲೀಕರಣ ಮಾಡಬೇಕಾದ ಸರ್ಕಾರ, ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದಿದ್ದಾರೆ.
ಒಂದೆಡೆ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ʼಡ್ರಗ್ಸ್ ಹಬ್' ಆಗಿ ಮಾರ್ಪಡುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆ. ಅಮಾಯಕ ಯುವ ಪೀಳಿಗೆ ಇಂದು ದಾರಿ ತಪ್ಪುತ್ತಿದ್ದು, ಡ್ರಗ್ಸ್ ಜಾಲ ಹಾಗೂ ಸಮಾಜವಿರೋಧಿ ಚಟುವಟಿಕೆಯತ್ತ ಮುಖ ಮಾಡುತ್ತಿದ್ದಾರೆ. ಸಮಾಜದ, ವಿದ್ಯಾರ್ಥಿಗಳ ಹಿತ ಕಾಪಾಡಬೇಕಿದ್ದ ಸರ್ಕಾರ ಅದನ್ನೆಲ್ಲ ಮರೆತು ಒಳಜಗಳ, ಕುರ್ಚಿ ಕಿತ್ತಾಟ ಮತ್ತು ಅಧಿಕಾರದ ಅಮಲಿನಲ್ಲಿ ಮುಳುಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹರಿಹಾಯ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



