ರಾಜ್ಯ

ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ: ಜುಲೈ 8ರಂದು ನಗರದಾದ್ಯಂತ ಬಂದ್ ಗೆ ಬೀದಿಬದಿ ವ್ಯಾಪಾರಿಗಳ ಕರೆ

ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ ರಾಜ್ಯ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವಿರುದ್ಧ ಅಕ್ರಮ ತೆರವು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಆರೋಪಿಸಿದೆ.

ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ: ಜುಲೈ 8ರಂದು ನಗರದಾದ್ಯಂತ ಬಂದ್ ಗೆ ಬೀದಿಬದಿ ವ್ಯಾಪಾರಿಗಳ ಕರೆ
ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆಯ ವೇಳೆ ಬೀದಿ ವ್ಯಾಪಾರಿಯ ತಳ್ಳುಗಾಡಿಯನ್ನು ಪಾಲಿಕೆಯ ವಾಹನಕ್ಕೆ ಸಾಗಿಸುತ್ತಿರುವುದು
Published On :

ಬೆಂಗಳೂರು: ಬೀದಿ ವ್ಯಾಪಾರಿಗಳ ಸಂಘಟನೆಗಳು ನಗರಾದ್ಯಂತ ಬಂದ್ ಹಾಗೂ ಬೃಹತ್ ಪ್ರತಿಭಟನೆಗೆ ನಾಳೆ ಬುಧವಾರ ಕರೆ ನೀಡಿವೆ. ಈಗ ನಗರದಾದ್ಯಂತ ನಡೆಯುತ್ತಿರುವ ಪಾದಾಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಗಳು ಬೀದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ಕಾಯ್ದೆ, 2014 ನ್ನು ಉಲ್ಲಂಘಿಸುತ್ತಿವೆ ಎಂದು ಅವು ಆರೋಪಿಸಿವೆ.

ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ ರಾಜ್ಯ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವಿರುದ್ಧ ಅಕ್ರಮ ತೆರವು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಆರೋಪಿಸಿದೆ. ಕಾನೂನುಬದ್ಧ ಪ್ರಕ್ರಿಯೆ ಅನುಸರಿಸದೆ ವ್ಯಾಪಾರಿಗಳ ತಳ್ಳುಗಾಡಿಗಳು ಹಾಗೂ ಸರಕುಗಳನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಸಾವಿರಾರು ಬೀದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆ ಉಂಟುಮಾಡಲಾಗಿದೆ ಎಂದು ಸಮಿತಿ ದೂರಿದೆ.

ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳು ಸಾರ್ವಜನಿಕರಿಗೆ ಸುಗಮವಾಗಿರಬೇಕು ಎಂಬುದಕ್ಕೆ ನಾವು ವಿರೋಧಿಗಳಲ್ಲ. ಆದರೆ ಬೀದಿ ವ್ಯಾಪಾರವನ್ನು ನಿಯಂತ್ರಿಸಲು ಅನುಸರಿಸಬೇಕಾದ ಸ್ಪಷ್ಟ ವಿಧಾನವನ್ನು ಕಾಯ್ದೆ ತಿಳಿಸಿದೆ. ಆ ಕಾಯ್ದೆಯನ್ನು ಜಾರಿಗೊಳಿಸುವ ಬದಲು ಅಧಿಕಾರಿಗಳು ಕಾನೂನು ಪ್ರಕ್ರಿಯೆ ಪಾಲಿಸದೆ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಸ್. ಬಾಬು ಹೇಳಿದರು.

ನಗರದಲ್ಲಿ ಸುಮಾರು 1.5 ಲಕ್ಷ ಬೀದಿ ವ್ಯಾಪಾರಿಗಳು ಇದ್ದು, ಅವರು ಕಡಿಮೆ ಬೆಲೆಯ ವಸ್ತುಗಳು ಮತ್ತು ಸೇವೆಗಳನ್ನು ಒದಗಿಸುವುದರ ಜೊತೆಗೆ ಸ್ವಯಂ ಉದ್ಯೋಗದ ಮೂಲಕ ತಮ್ಮ ಕುಟುಂಬಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಸಮಿತಿ ತಿಳಿಸಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ಮೌಖಿಕ ನಿರ್ದೇಶನದ ನಂತರ ಅಧಿಕಾರಿಗಳು ಜೆಸಿಬಿ ಯಂತ್ರಗಳೊಂದಿಗೆ ಬಂದು ತಳ್ಳುಗಾಡಿಗಳನ್ನು ವಶಪಡಿಸಿಕೊಂಡು, ಸರಕುಗಳನ್ನು ಹಾನಿಗೊಳಿಸಿದ್ದಾರೆ ಎಂದು ಅದು ಆರೋಪಿಸಿದೆ.

ಸಾವಿರಾರು ಬಡ ಕುಟುಂಬಗಳು ಸಂಪೂರ್ಣವಾಗಿ ಬೀದಿ ವ್ಯಾಪಾರವನ್ನೇ ಜೀವನೋಪಾಯವಾಗಿ ಅವಲಂಬಿಸಿವೆ. ಯಾವುದೇ ಮುನ್ಸೂಚನೆ ನೀಡದೆ ಒಂದೇ ರಾತ್ರಿ ಅವರನ್ನು ತೆರವುಗೊಳಿಸಿರುವುದರಿಂದ ಅನೇಕ ವ್ಯಾಪಾರಿಗಳು ಆದಾಯವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ನಗರದ ಸುಮಾರು 80,000 ಬೀದಿ ವ್ಯಾಪಾರಿಗಳು ಪಿಎಂ ಸ್ವನಿಧಿ (PM SVANidhi) ಯೋಜನೆಯಡಿ ಸಾಲ ಪಡೆದಿದ್ದಾರೆ ಎಂದು ಸಮಿತಿ ತಿಳಿಸಿದೆ. 2024ರ ಅಕ್ಟೋಬರ್‌ನಿಂದ 2025ರ ಫೆಬ್ರವರಿವರೆಗೆ ನಡೆದ ಸಮೀಕ್ಷೆಯಲ್ಲಿ ಕೇವಲ ಸುಮಾರು 34,000 ವ್ಯಾಪಾರಿಗಳನ್ನು ಮಾತ್ರ ಗುರುತಿಸಲಾಗಿದ್ದು, ಅನೇಕರು ಅಧಿಕೃತ ದಾಖಲೆಗಳಿಂದ ಹೊರಗುಳಿದಿದ್ದಾರೆ. ಅಲ್ಲದೆ, ಅರ್ಹರಾದ ಎಲ್ಲ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳನ್ನು ಇನ್ನೂ ವಿತರಿಸಿಲ್ಲ ಎಂದು ಸಮಿತಿ ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ, ತೆರವುಗೊಳಿಸಲಾದ ಎಲ್ಲ ಬೀದಿ ವ್ಯಾಪಾರಿಗಳನ್ನು ಕೂಡಲೇ ಅವರ ಮೂಲ ವ್ಯಾಪಾರ ಸ್ಥಳಗಳಿಗೆ ಮರುಸ್ಥಾಪಿಸಬೇಕು ಎಂದು ಸಮಿತಿ ಆಗ್ರಹಿಸಿದೆ. ಅದು ಸಾಧ್ಯವಾಗದಿದ್ದರೆ, ಟೌನ್ ವೆಂಡಿಂಗ್ ಸಮಿತಿಗಳು ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ರಸ್ತೆ ಬದಿಗಳಲ್ಲಿ ತಾತ್ಕಾಲಿಕವಾಗಿ ವ್ಯಾಪಾರ ನಡೆಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದೆ.

ಇದರ ಜೊತೆಗೆ, ವಶಪಡಿಸಿಕೊಂಡಿರುವ ಎಲ್ಲಾ ಸರಕುಗಳು ಮತ್ತು ತಳ್ಳುಗಾಡಿಗಳನ್ನು ಹಿಂತಿರುಗಿಸುವುದು, ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೊಳಿಸುವುದು, ಎಲ್ಲ ಬೀದಿ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸುವುದು, ಅರ್ಹರಿಗೆ ಗುರುತಿನ ಚೀಟಿಗಳನ್ನು ವಿತರಿಸುವುದು, ಹೊಸದಾಗಿ ರಚನೆಯಾದ ಮಹಾನಗರ ಪಾಲಿಕೆಗಳಲ್ಲಿ ಟೌನ್ ವೆಂಡಿಂಗ್ ಸಮಿತಿಗಳನ್ನು ರಚಿಸಿ ಬಲಪಡಿಸುವುದು ಹಾಗೂ ಪಾದಚಾರಿಗಳು ಮತ್ತು ಬೀದಿ ವ್ಯಾಪಾರಿಗಳಿಬ್ಬರಿಗೂ ಅನುಕೂಲವಾಗುವಂತೆ ಪಾದಚಾರಿ ಮಾರ್ಗಗಳನ್ನು ಅಗಲಗೊಳಿಸುವಂತೆ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.