ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ: ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ಅವಧಿ ಜುಲೈ8 ರವರೆಗೆ ವಿಸ್ತರಣೆ!
ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್‌ಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸುವ ಕಾಲಾವಕಾಶವನ್ನು ಜುಲೈ 8ರ ಸಂಜೆ 4 ಗಂಟೆಯವರೆಗೆ ವಿಸ್ತರಿಸಲಾಗಿದೆ

ಬೆಂಗಳೂರು: ರಾಜ್ಯದಲ್ಲಿ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (CPC) ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕವನ್ನು ಪಾವತಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ವಿಸ್ತರಿಸಿ KEA ಆದೇಶ ಹೊರಡಿಸಿದೆ.
ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಮಾಹಿತಿ ನೀಡಿದ್ದು, ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್‌ಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸುವ ಕಾಲಾವಕಾಶವನ್ನು ಜುಲೈ 8ರ ಸಂಜೆ 4 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. ತಾಂತ್ರಿಕ ತೊಂದರೆಗಳು ಅಥವಾ ಇನ್ನಿತರ ಕಾರಣಗಳಿಂದಾಗಿ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಇದು ಕೊನೆಯ ಅವಕಾಶವಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಈಗಾಗಲೇ ಅರ್ಜಿ ಸಲ್ಲಿಸಿರುವ ಅಥವಾ ಹೊಸದಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಮ್ಮ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು KEA ವಿಶೇಷ ಅವಕಾಶವನ್ನು ಕಲ್ಪಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ, ಜುಲೈ 10 ರಿಂದ ಜುಲೈ 13ರ ವರೆಗೆ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಯಲ್ಲಿನ ಮಾಹಿತಿಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಸಮಯಾವಕಾಶ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ರಾಧಿಕಾರವು ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಯ ಪ್ರಕಾರ, ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 3 ಕಡೆಯ ದಿನವಾಗಿತ್ತು. ಹಾಗೂ ಆನ್‌ಲೈನ್ ಅಥವಾ ಚಲನ್ ಮೂಲಕ ಬ್ಯಾಂಕ್‌ಗಳಲ್ಲಿ ಶುಲ್ಕ ಪಾವತಿಸಲು ಜುಲೈ 4 ಅನ್ನು ಕಡೆಯ ದಿನಾಂಕ ಎಂದು ನಿಗದಿಗೊಳಿಸಲಾಗಿತ್ತು. ಆದರೆ, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಈಗ ಈ ಅವಧಿಯನ್ನು ವಿಸ್ತರಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆ ಕ್ಷಣದವರೆಗೂ ಕಾಯದೆ, ಅಭ್ಯರ್ಥಿಗಳು ನಿಗದಿತ ಅವಧಿಯ ಒಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸಿ ಶುಲ್ಕ ಪಾವತಿಯನ್ನು ಪೂರ್ಣಗೊಳಿಸಬೇಕು ಎಂದು ಹೆಚ್. ಪ್ರಸನ್ನ ಅವರು ಸಲಹೆ ನೀಡಿದ್ದಾರೆ. ಜುಲೈ 8ರ ಸಂಜೆ 4 ಗಂಟೆಯ ನಂತರ ಯಾವುದೇ ಕಾರಣಕ್ಕೂ ಲಿಂಕ್ ಸಕ್ರಿಯವಾಗಿರುವುದಿಲ್ಲ ಮತ್ತು ಮತ್ತೊಮ್ಮೆ ಅವಧಿ ವಿಸ್ತರಣೆ ಮಾಡುವ ಸಾಧ್ಯತೆ ಇರುವುದಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



