ಮಕ್ಕಳನ್ನು ವಾಷಿಂಗ್ ಮೆಷಿನ್ ನಲ್ಲಿಟ್ಟು ಕ್ರೌರ್ಯ: Capgemini ಡೇ-ಕೇರ್ ಕೇಂದ್ರ ತಾತ್ಕಾಲಿಕ ಬಂದ್, ತನಿಖೆ ಆರಂಭ
ಸಾಮಾಜಿಕ ಜಾಲತಾಣಗಳಲ್ಲಿ ಡೇ-ಕೇರ್ ಕೇಂದ್ರದಲ್ಲಿ ಪುಟ್ಟ ಮಕ್ಕಳಿಗೆ ಕಿರುಕುಳ ನೀಡುತ್ತಿರುವ ದೃಶ್ಯಗಳಿರುವ ವಿಡಿಯೊಗಳು ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು: ಮಕ್ಕಳ ಮೇಲಿನ ದೌರ್ಜನ್ಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐಟಿ ಕಂಪನಿ ಕ್ಯಾಪ್‌ಜೆಮಿನಿ ಬೆಂಗಳೂರಿನ ತನ್ನ ಕ್ಯಾಂಪಸ್‌ನಲ್ಲಿದ್ದ ಡೇ-ಕೇರ್ (ಶಿಶು ಆರೈಕೆ) ಕೇಂದ್ರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಡೇಕೇರ್ ಸಿಬ್ಬಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಡೇ-ಕೇರ್ ಕೇಂದ್ರದಲ್ಲಿ ಪುಟ್ಟ ಮಕ್ಕಳಿಗೆ ಕಿರುಕುಳ ನೀಡುತ್ತಿರುವ ದೃಶ್ಯಗಳಿರುವ ವಿಡಿಯೊಗಳು ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬ್ರೂಕ್‌ಫೀಲ್ಡ್‌ನ ಎಚ್‌ಎಎಲ್ ಕ್ಯಾಂಪಸ್‌ನಲ್ಲಿರುವ ಕ್ಯಾಪ್‌ಜೆಮಿನಿ ಡೇ-ಕೇರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಐವರು ಮಹಿಳಾ ಸಿಬ್ಬಂದಿಯ ವಿರುದ್ಧ ಜುವೆನೈಲ್ ಜಸ್ಟಿಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸಂಬಂಧಿತ ವಿಧಿಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ಮುಂದುವರೆದಿದ್ದು, ಇನ್ನೂ ಯಾರನ್ನೂ ಬಂಂಧನಕ್ಕೊಳಪಡಿಸಿಲ್ ಎಂದು ಪೊಲೀಸರು ಹೇಳಿದ್ದಾರೆ.
ದೂರುದಾರರು ನೀಡಿರುವ ಮಾಹಿತಿಯಂತೆ, ಡೇ-ಕೇರ್ ಕೇಂದ್ರದೊಳಗೆ ಚಿತ್ರೀಕರಿಸಲಾಗಿದೆ ಎನ್ನಲಾದ ವಿಡಿಯೊಗಳಲ್ಲಿ ಎರಡುರಿಂದ ಮೂರು ವರ್ಷದ ಮಕ್ಕಳ ಮೇಲೆ ಸಿಬ್ಬಂದಿ ದೈಹಿಕ ಕಿರುಕುಳ ನೀಡುತ್ತಿರುವ ದೃಶ್ಯಗಳು ಕಂಡುಬಂದಿವೆ.
ಕೆಲವು ಮಾಧ್ಯಮ ವರದಿಗಳ ಪ್ರಕಾರ, ಮಕ್ಕಳನ್ನು ಬಾತ್‌ರೂಮ್‌ನಲ್ಲಿ ಕೂಡಿ ಹಾಕುವುದು, ಮುಂಭಾಗದಿಂದ ಬಾಗಿಲು ತೆರೆದಿರುವ ವಾಷಿಂಗ್ ಮಷಿನ್ ಒಳಗೆ ಇರಿಸುವುದು, ಶೌಚಾಲಯದ ಸೀಟಿನ ಮೇಲೆ ಕುಳ್ಳಿರಿಸಿ ಅಳುತ್ತಿದ್ದರೂ ಟಾಯ್ಲೆಟ್ ಜೆಟ್‌ನಿಂದ ನೀರು ಸಿಂಪಡಿಸುವಂತಹ ಅಮಾನವೀಯ ಕೃತ್ಯಗಳು ವಿಡಿಯೊಗಳಲ್ಲಿ ದಾಖಲಾಗಿವೆ ಎನ್ನಲಾಗಿದೆ. ಆದರೆ, ಈ ವಿಡಿಯೊಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಡಿಜಿಟಲ್ ಸಾಕ್ಷ್ಯಗಳನ್ನು ಕೂಡ ಸಂಗ್ರಹಿಸುತ್ತಿದ್ದಾರೆ.
ಈ ಘಟನೆ ಉದ್ಯೋಗ ಸ್ಥಳಗಳಲ್ಲಿರುವ ಮಕ್ಕಳ ಆರೈಕೆ ಕೇಂದ್ರಗಳ ಸುರಕ್ಷತೆ ಹಾಗೂ ಮೇಲ್ವಿಚಾರಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಡೇ-ಕೇರ್ ಕೇಂದ್ರದ ಕಾರ್ಯವೈಖರಿ ಹಾಗೂ ಈ ಘಟನೆಗಳಿಗೆ ಕಾರಣವಾದ ಸಂದರ್ಭಗಳ ಕುರಿತು ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ, ಕ್ಯಾಪ್‌ಜೆಮಿನಿ ಗುರುವಾರ ಪ್ರಕಟಣೆ ಹೊರಡಿಸಿ, "ನಮ್ಮ ಉದ್ಯೋಗಿಗಳು ಹಾಗೂ ಅವರ ಕುಟುಂಬಗಳ ಆರೋಗ್ಯ, ಸುರಕ್ಷತೆ ಮತ್ತು ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆ. ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಸತ್ಯಾಂಶ ಹೊರಬರಲು ನೆರವಾಗುತ್ತಿದ್ದೇವೆ. ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನ ಕ್ಯಾಂಪಸ್‌ನ ಡೇ-ಕೇರ್ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ" ಎಂದು ತಿಳಿಸಿದೆ.
ಆದರೆ, ಆರೋಪಗಳ ಕುರಿತು ಕಂಪನಿ ಇದುವರೆಗೆ ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ. ವಾಟ್ಸಾಪ್ ಮೂಲಕ ವಿಡಿಯೊಗಳು ಹರಿದಾಡಿದ ಬಳಿಕ ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಉದ್ಯೋಗಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಮಕ್ಕಳ ಸಹಾಯವಾಣಿ (ಚೈಲ್ಡ್ ಹೆಲ್ಪ್‌ಲೈನ್) ಮತ್ತು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ತನಿಖೆ ಆರಂಭವಾಗಿದ್ದು, ಆರೋಪಿತ ಸಿಬ್ಬಂದಿಯನ್ನು ವಿಚಾರಣೆ ನಡೆಸುವ ಜೊತೆಗೆ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುವ ಕಾರ್ಯ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



