ಗ್ಯಾರಂಟಿ ಯೋಜನೆ ನಮ್ಮ ವಾಗ್ದಾನ; ಹೊರೆಯಾದರೂ ಕೊಟ್ಟ ಮಾತಿನಂತೆ ಮುಂದುವರಿಯಬೇಕು: ಡಿ.ಕೆ ಸುರೇಶ್
ಗ್ಯಾರಂಟಿ ಯೋಜನೆ ಯಾರು ಅಸಹಾಯಕರು, ಜೀವನ ನಡೆಸಲು ಕಷ್ಟವಿದೆ, ಯಾರು ಬದುಕಲ್ಲಿ ಹೋರಾಟ ಮಾಡ್ತಿದ್ದಾರೆ, ಅಂಥವರಿಗೆ ಆ ಯೋಜನೆಗಳು ಇರುವಂಥದ್ದು. ಸಿರಿವಂತರು ತೆಗೆದುಕೊಳ್ತಿದ್ರೆ ತಪ್ಪು ಎಂದು ಕಿವಿಮಾತು ಹೇಳಿದ್ರು.

ಬೆಂಗಳೂರು: ಹೊರೆಯಾದರೂ ಕೂಡ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನ ಸರ್ಕಾರ ಈಡೇರಿಸಬೇಕು. ಇಲ್ಲದಿದ್ರೆ ಗ್ಯಾರಂಟಿ ಬಗ್ಗೆ ಹೇಳುವ ಮುಂಚಿತವಾಗಿ, ಮಾತು ಕೊಡುವುದಕ್ಕಿಂತ ಮುಂಚಿತವಾಗಿ ಚಿಂತನೆ ಮಾಡಬೇಕಾಗಿತ್ತು ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ ಆಗುತ್ತಿದೆ ಎಂದು ಹೇಳಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ನಮ್ಮ ವಾಗ್ದಾನ. ಕರ್ನಾಟಕದ ಜನರಿಗೆ ಕೊಟ್ಟ ವಾಗ್ದಾನ, ಆ ವಾಗ್ದಾನದಂತೆ ನಡೆಯಬೇಕು ಎಂದರು.
ಯಾರು ಚುನಾವಣೆ ಎದುರಿಸಿದ್ರೋ ಅವರೆಲ್ಲ ಜನರಿಗೆ ನಂಬಿಕೆ ಕೊಟ್ಟಿದ್ದಾರೆ. ಹೊರೆಯಾದರೂ ಆಗಲಿ, ಏನಾದರೂ ಆಗ್ಲಿ ಕೊಟ್ಟ ಮಾತನ್ನ ಈಡೇರಿಸಲೇಬೇಕು. ಹೊರೆ ಆಗುತ್ತೆ ಅನ್ನೋದಾದ್ರೆ ಗ್ಯಾರಂಟಿ ಬಗ್ಗೆ ಹೇಳುವ ಮುನ್ನ, ಮಾತು ಕೊಡೋದಕ್ಕಿಂತ ಮುಂಚಿತವಾಗಿ ಚಿಂತನೆ ಮಾಡಬೇಕಾಗಿತ್ತು. ಈಗ ಮಾತು ಕೊಟ್ಟಾಗಿದೆ, ಅದರಂತೆ ನಡೆದುಕೊಳ್ಳಬೇಕು. 5 ವರ್ಷಗಳ ಕಾಲ ಏನೇ ಕಷ್ಟ ಆದ್ರೂ ಆ ಗ್ಯಾರಂಟಿಗಳನ್ನ ರಾಜ್ಯದ ಜನರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಸಿರಿವಂತರು ಗ್ಯಾರಂಟಿ ತೆಗೆದುಕೊಳ್ತಿದ್ರೆ ಅದು ತಪ್ಪು ಎಂದು ಆಕ್ಷೇಪಿಸಿದರು. ಗ್ಯಾರಂಟಿ ಯೋಜನೆ ಯಾರು ಅಸಹಾಯಕರು, ಜೀವನ ನಡೆಸಲು ಕಷ್ಟವಿದೆ, ಯಾರು ಬದುಕಲ್ಲಿ ಹೋರಾಟ ಮಾಡ್ತಿದ್ದಾರೆ, ಅಂಥವರಿಗೆ ಆ ಯೋಜನೆಗಳು ಇರುವಂಥದ್ದು. ಸಿರಿವಂತರು ತೆಗೆದುಕೊಳ್ತಿದ್ರೆ ತಪ್ಪು ಎಂದು ಕಿವಿಮಾತು ಹೇಳಿದ್ರು.
ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ. ಹಣೆಬರಹ ಇಲ್ಲ ಎಂದರೆ ಯಾರೂ ಏನೂ ಮಾಡಲು ಆಗುವುದಿಲ್ಲ" ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ತಿಳಿಸಿದರು. ನೀವು ಶಸ್ತ್ರತ್ಯಾಗ ಮಾಡಿದ್ದೀರಾ ಎಂದು ಕೇಳಿದಾಗ, "ತ್ಯಾಗ ಮಾಡಲು ಶಸ್ತ್ರ ಇರಬೇಕಲ್ಲವೇ? ಶಸ್ತ್ರವೇ ಇಲ್ಲವಲ್ಲ. ಶಸ್ತ್ರ ಇದೆ ಎಂದು ನಾನು ಯಾವಾಗ ಹೇಳಿದ್ದೆ. ಶಸ್ತ್ರವೇ ಇಲ್ಲದಿದ್ದಾಗ ಶಸ್ತ್ರತ್ಯಾಗದ ಪ್ರಶ್ನೆಯೇ ಬಾರದು" ಎಂದು ಕೇಳಿದರು.
ತಾಳ್ಮೆಯ ಅಸ್ತ್ರ ಇದೆ ಎಂದಿದ್ದೀರಿ ಎಂದಾಗ, "ಈಗಲೂ ತಾಳ್ಮೆ ಇರಲಿ ಎಂದು ಹೇಳುತ್ತಿದ್ದೇನೆ" ಎಂದರು. ಶಸ್ತ್ರ, ತಂತ್ರ, ಯುದ್ಧ ಇಲ್ಲದೇ ಬಗೆಹರಿಯುವುದೇ ಎಂದಾಗ, "ಇದು ರಾಜಕಾರಣ. ಇಲ್ಲಿ ಶಸ್ತ್ರ ಹಾಗೂ ಅಸ್ತ್ರ ಬೇಕಾಗಿಲ್ಲ" ಎಂದರು.
ಶಾಸಕರು ದೆಹಲಿಗೆ ತೆರಳಿ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಕೇಳುವ ಬಗ್ಗೆ ಪ್ರಶ್ನಿಸಿದಾಗ, "ಶಾಸಕರು ದೆಹಲಿಗೆ ಹೋಗುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಶಾಸಕರನ್ನೇ ಕೇಳಿ" ಎಂದರು.
ಭೋಜನಕೂಟ ಸೇರಿದ ಶಾಸಕರು ನಾಯಕತ್ವದ ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎಂದಾಗ, "ನಾನು ಊರಲ್ಲಿ ಇರಲಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ, ಯಾವ ಹೇಳಿಕೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಪಕ್ಷ ಅದನ್ನು ಗಮನಿಸಲಿದೆ" ಎಂದು ತಿಳಿಸಿದರು.
ಹೀಗೆ ಆದರೆ 2028ರ ಚುನಾವಣೆ ಪಕ್ಷಕ್ಕೆ ಕಷ್ಟವಾಗಲಿದೆ ಎಂದಾಗ, "ಚುನಾವಣೆಗೆ ಸ್ಪರ್ಧಿಸುವವರಿಗೆ ಕಷ್ಟವಾಗಬಹುದು. ನನಗೆ ಕಷ್ಟ ಆಗುವುದಿಲ್ಲ. ಈ ಬಗ್ಗೆ ನಾನೇಗೆ ಹೇಳಲಿ" ಎಂದು ತಿಳಿಸಿದರು.
ಶಾಸಕರ ಆಗ್ರಹದಲ್ಲಿ ನ್ಯಾಯ ಇದೆ ಅಲ್ಲವೇ ಎಂದು ಕೇಳಿದಾಗ, "ಶಾಸಕರ ವಿಚಾರಧಾರೆ ಅವರಿಗೆ ಹಾಗೂ ಸಂಬಂಧಿಸಿದ್ದೇ ಹೊರತು, ನನಗಲ್ಲ. ಪಕ್ಷ ಅವರ ವಿಚಾರಗಳನ್ನು ಗಮನಿಸಲಿದೆ. ನಾವು ಆ ವಿಚಾರದಲ್ಲಿ ಹೇಳಲು ಬರುವುದಿಲ್ಲ" ಎಂದರು.
ಶಿವಕುಮಾರ್ ಅವರು ಪಕ್ಷ ನನ್ನನ್ನು ಗಮನಿಸಲಿದೆ ಎಂದು ಹೇಳುತ್ತಲೇ ಇದ್ದಾರೆ ಎಂದಾಗ, "ಎಲ್ಲದಕ್ಕೂ ತಾಳ್ಮೆ ಇರಲಿ" ಎಂದರು. ಸಿದ್ದರಾಮಯ್ಯ ಅವರನ್ನು ಬದಲಿಸುವುದಾದರೆ ದಲಿತ ಸಿಎಂ ಮಾಡಬೇಕು ಎಂಬ ಹೆಚ್.ಸಿ ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಎಲ್ಲರಿಗೂ ಆಸೆ ಇದೆ. ಇದರಲ್ಲಿ ತಪ್ಪೇನಿಲ್ಲ" ಎಂದರು.
ನಿಮ್ಮ ಸಹೋದರರನ್ನು ಸಿಎಂ ಹುದ್ದೆಯಲ್ಲಿ ಕೂರಿಸಲು ನಿಮ್ಮ ಪ್ರಯತ್ನ ಹೇಗಿದೆ, ನಿಮ್ಮ ಬಳಿ ಶಾಸಕರ ಸಂಖ್ಯೆ ಹೆಚ್ಚಾಗಿದೆಯೇ ಎಂದು ಕೇಳಿದಾಗ, "ನನಗೆ ಆ ಬಗ್ಗೆ ಗೊತ್ತಿಲ್ಲ. ಶಾಸಕರ ವಿಚಾರ ಬಿಟ್ಟು ಬಮೂಲ್ ವಿಚಾರ ಏನಾದರೂ ಇದ್ದರೆ ಕೇಳಿ, ಪ್ರತಿಕ್ರಿಯೆ ನೀಡುವೆ' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




