ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ: ಸ್ನೇಹಿತರ ವಿರುದ್ಧವೇ ಹನಿಟ್ಯ್ರಾಪ್ ಆರೋಪಿ ಯುವತಿ ದೂರು!
ಈ ಹಿಂದೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಫೆ.21ರಂದು ಇದೇ ಯುವತಿ ವಿರುದ್ಧ ಹನಿಟ್ರ್ಯಾಪ್ ಕೇಸ್ ದಾಖಲಾಗಿತ್ತು.

ಬೆಂಗಳೂರು: ಬೆಂಗಳೂರಿನ 19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿ ಹಾಗೂ ಹನಿಟ್ಯ್ರಾಪ್ ಪ್ರಕರಣದ ಆರೋಪಿ ಯುವತಿ ತನ್ನದೇ ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರದ ದೂರು ನೀಡಿದ್ದಾರೆ.
ಹೌದು.. ಈ ಹಿಂದೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಫೆ.21ರಂದು ಇದೇ ಯುವತಿ ವಿರುದ್ಧ ಹನಿಟ್ರ್ಯಾಪ್ ಕೇಸ್ ದಾಖಲಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಯುವತಿ ತನ್ನದೇ ಸ್ನೇಹಿತರ ವಿರುದ್ಧ ಗ್ಯಾಂಗ್ ರೇಪ್ ದೂರು ದಾಖಲಿಸಿದ್ದಾಳೆ.
ಬೆಂಗಳೂರಿನ ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಗೆ ಗುಲಾಬಿ ಬಣ್ಣದ ಟ್ಯಾಬ್ಲೆಟ್ ನೀಡಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ.
ಯುವತಿ ತನ್ನ ಮೇಲೆ ಗ್ಯಾಂಗ್ರೇಪ್ ನಡೆದಿದೆ ಎಂದು ಆರೋಪಿಸಿ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪಾರ್ಟಿಯೊಂದಕ್ಕೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಸಂತ್ರಸ್ತೆ ದೂರಿದ್ದು, ಈ ಸಂಬಂಧ ನಿಖಿಲ್ ಮತ್ತು ಡಿಕ್ಸನ್ ಸಾಂಡ್ರಾ ಎಂಬ ಇಬ್ಬರ ವಿರುದ್ಧ ಫೆ.22ರಂದು ಎಫ್ಐಆರ್ ದಾಖಲಾಗಿದೆ.
ಯುವತಿ ಆರೋಪವೇನು?
2026ರ ಜನವರಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಡಿಕ್ಸನ್ ಸಾಂಡ್ರಾ ಎಂಬಾತನ ಪರಿಚಯವಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರೂ ಹಲವು ಬಾರಿ ಭೇಟಿ ಆಗಿದ್ದೆವು. ಫೆಬ್ರವರಿ 14ರಂದು ಕರೆ ಮಾಡಿದ್ದ ಡಿಕ್ಸನ್, ಜಕ್ಕೂರಿನಲ್ಲಿರುವ ವಿಲ್ಲಾವೊಂದಕ್ಕೆ ಪಾರ್ಟಿಗೆ ಬರುವಂತೆ ಕರೆದಿದ್ದ. ಹೀಗಾಗಿ ಗೆಳತಿಯ ಜೊತೆ ತಾನು ಮಧ್ಯರಾತ್ರಿ ಸುಮಾರು 1.15ಕ್ಕೆ ವಿಲ್ಲಾಗೆ ತೆರಳಿದ್ದು, ಈ ವೇಳೆ ಡಿಕ್ಸನ್ ಆತನ ಗೆಳೆಯ ಎಂದು ನಿಖಿಲ್ ಎಂಬಾತನನ್ನು ಪರಿಚಯಿಸಿದ್ದ.
ಪಾರ್ಟಿ ನಡುವೆ ಡಿಕ್ಸನ್ ಮತ್ತು ನಿಖಿಲ್ ಸೇರಿ ಬಲವಂತವಾಗಿ ಮಾತ್ರೆಯನ್ನು ತಿನ್ನಿಸಿದ್ದಾರೆ. ಈ ವೇಳೆ ಕಣ್ಣುಗಳು ಮಂಜಾಗಿ ನಾನು ಪ್ರಜ್ಞಾಹೀನಳಾದೆ. ಕೂಡಲೇ ಡಿಕ್ಸನ್ ರೂಮಿಗೆ ಕರೆದೊಯ್ದು ತನ್ನ ಮಲಗಿಸಿದ್ದ. ನನಗೆ ಎಚ್ಚರ ಆದಾಗ ನನ್ನ ದೇಹದ ಮೇಲೆ ಅರ್ಧಂಬರ್ಧ ಬಟ್ಟೆ ಇರುವುದರ ಜೊತೆಗೆ ಪಕ್ಕದಲ್ಲಿ ನಿಖಿಲ್ ಇರುವುದನ್ನು ಕಂಡು ಶಾಕ್ ಆದೆ ಎಂದು ಹೇಳಿದ್ದಾರೆ.
ಡಿಕ್ಸನ್ ನಿಂದಲೂ ದೌರ್ಜನ್ಯ
ನಿಖಿಲ್ ಬಳಿಕ ಡಿಕ್ಸನ್ ಕೂಡ ತನ್ನ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದೆ ಎಂದು ಯುವತಿ ಹೇಳಿದ್ದು, ಮೊದಲೇ ಗಾಬರಿಗೊಂಡಿದ್ದ ತಾನು ಡಿಕ್ಸನ್ ಬಗ್ಗೆ ಕೇಳಿದಾಗ ಹೊರಗಿನಿಂದ ಬಂದ ಆತ ತನ್ನ ಬಟ್ಟೆಯನ್ನು ಕಿತ್ತೆಸೆದಿದ್ದು, ಇಬ್ಬರೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.
ಈ ವೇಳೆ ತಾನು ಜೋರಾಗಿ ಕಿರುಚಾಡಿದ ಪರಿಣಾಮ ನನ್ನನ್ನು ರೂಮ್ನಲ್ಲಿ ಲಾಕ್ ಮಾಡಲಾಗಿತ್ತು. ಬಳಿಕ ಮರುದಿನ ಮಧ್ಯಾಹ್ನದ ವೇಳೆಗೆ ಆರೋಪಿಗಳು ರೂಮ್ ಬಾಗಿಲು ತೆರೆದಿದ್ದು, ರಾತ್ರಿ ನಡೆದ ವಿಚಾರವನ್ನು ಯಾರಿಗಾದರೂ ಅಥವಾ ಪೊಲೀಸರಿಗೆ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು ಎಂದು ಯುವತಿ ಆರೋಪಿಸಿದ್ದಾಳೆ.
ತನಿಖೆ ಆರಂಭ
ಸಂತ್ರಸ್ತೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ನಿಖಿಲ್ ಹಾಸನ ಜಿಲ್ಲೆಯ ಸಕಲೇಶಪುರ ಮೂಲದವನು ಎಂದು ತಿಳಿದು ಬಂದಿದೆ. ಈ ವಿಚಾರವನ್ನು ಆಕೆ ತನ್ನ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



