ರೋಗಿಗಳಿಗೆ ತೊಂದರೆಯಾಗದಂತೆ MRI, CT ಸ್ಕ್ಯಾನಿಂಗ್ ವ್ಯವಸ್ಥೆ, ಔಷಧಿ ಕೊರತೆ ಇಲ್ಲ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರಿನ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ MRI, CT ಸ್ಕ್ಯಾನಿಂಗ್ ವ್ಯವಸ್ಥೆ ಕೈಕೊಟ್ಟಿದ್ದು ರೋಗಿಗಳು ಪರದಾಡುವಂತಾಗಿದೆ.

ಬೆಂಗಳೂರು: ರೋಗಿಗಳಿಗೆ ತೊಂದರೆಯಾಗದಂತೆ MRI, CT ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ರಾಜ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ MRI, CT ಸ್ಕ್ಯಾನಿಂಗ್ ವ್ಯವಸ್ಥೆ ಕೈಕೊಟ್ಟಿದ್ದು ರೋಗಿಗಳು ಪರದಾಡುವಂತಾಗಿದೆ.
ಮಾಧ್ಯಮಗಳಲ್ಲಿ ಈ ಬಗ್ಗೆ ವ್ಯಾಪಕ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವ ದಿನೇಶ್ ಗುಂಡೂರಾವ್, 'ರೋಗಿಗಳಿಗೆ ತೊಂದರೆ ಆಗದಂತೆ ಎಂಆರ್‌ಐ (MRI) ಮತ್ತು ಸಿಟಿ ಸ್ಕ್ಯಾನಿಂಗ್ (CT Scanning) ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಈ ಪ್ರಕರಣವನ್ನು ವೈಭವೀಕರಿಸುವ ರೀತಿ ಆಗಿದೆ. 13 ಆಸ್ಪತ್ರೆಗಳಲ್ಲಿ ಇದು ಆಗಿದೆ. 13 ಕಡೆ ಈಗಾಗಲೇ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಪ್ರೊಸೆಸರ್ ಸಮಸ್ಯೆ ಇವತ್ತು ನಿವಾರಣೆ ಆಗುತ್ತದೆ. ಎಂಆರ್‌ಐ, ಸಿಟಿ ಸ್ಕ್ಯಾನ್‌ಗೆ ಅವಕಾಶ ಮಾಡಿಕೊಡುತ್ತಿದ್ದೇವೆ. ಸಾರ್ವಜನಿಕರಿಗೆ ಸಮಸ್ಯೆ ಆಗಲ್ಲ ಎಂದರು.
ಕೇಳಿದಷ್ಟು ಹಣ ಕೊಡಲಾಗಲ್ಲ
ಅಂತೆಯೇ ಕಂಪನಿಯವರು ಕೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ ಸಚಿವರು, 140 ಕೋಟಿ ಕೊಡಿ ಅಂತ ಕೇಳುತ್ತಿದ್ದಾರೆ. ಅದು ಕೊಡಲು ಆಗಲ್ಲ. ನಮ್ಮ ಪ್ರಕಾರ 10-15 ಕೋಟಿ ಕೊಡಬೇಕು ಅಷ್ಟೇ. ನ್ಯಾಯಯುತ ಹಣ ಕೊಡುತ್ತೇವೆ. ವಿಪಕ್ಷಗಳ ನಾಯಕರು ಖಾಸಗಿ ಕಂಪನಿಗೆ ಎಷ್ಟು ಬೇಕಾದರೂ ಹಣ ಕೊಡಿ ಅಂತ ಹೇಳೋದು ಸರಿಯಲ್ಲ. ವಿಪಕ್ಷ ನಾಯಕ ಅಶೋಕ್ ಯಾರ ಪರ ಇದ್ದಾರೆ. ಬಿಜೆಪಿ-ಜೆಡಿಎಸ್ ಯಾರ ಪರ ಇದ್ದಾರೆ ಅಂತ ತಿಳಿಸಲಿ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದರು.
2024ರಲ್ಲಿ ಕೃಷ್ಣ ಡಯಾಗ್ನಸ್ಟಿಕ್ ಅವರು ಸ್ಕ್ಯಾನ್ ಸರಿಯಾಗಿ ಮಾಡುತ್ತಿಲ್ಲ ಎಂದು ಪತ್ತೆ ಹಚ್ಚಿದ್ದೆವು. ಹೀಗಾಗಿ ಹಿಂದಿನ ಸ್ಕ್ಯಾನ್ ಬಗ್ಗೆ ಮಾಹಿತಿ ಕೇಳಿದೆವು, ಅವರು ಕೊಟ್ಟಿಲ್ಲ, ಅದಕ್ಕೆ ನಿಂತಿದೆ. ದಿಟ್ಟ ಕ್ರಮ ತೆಗೆದುಕೊಂಡಿದ್ದೇವೆ. ಈಗ ಅವರು ಸ್ಥಗಿತ ಮಾಡಿದ್ದಾರೆ. ನಾವು ಅದನ್ನ ಎದುರಿಸುತ್ತೇವೆ.
ಈಗ ನಾವೇ ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ಮಿಷನ್‌ಗೆ ಟೆಂಡರ್ ಕರೆದಿದ್ದೇವೆ. ಅಂತಿಮ ಹಂತದಲ್ಲಿ ಇದ್ದೇವೆ ಸರ್ಕಾರದ ಹಣ ಪೋಲಾಗಬಾರದು. 2-3 ದಿನ ತೊಂದರೆ ಆಗಿದೆ. ಅದಕ್ಕೆ ಅಲ್ಲೋಲ ಕಲ್ಲೋಲ ಆಗಿದೆ ಅನ್ನೋದು ಬೇಡ. 13 ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆ ಆಗಿದೆ. ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದರು.
ಬ್ಲಾಕ್ ಮೇಲ್‌ಗೆ ನಾವು ಬಗ್ಗಲ್ಲ
ಕಂಪನಿ ಅವರು ಕೇಳಿದಷ್ಟು ಹಣ ಕೊಡಲು ಆಗಲ್ಲ. ಆ ಕಂಪನಿಯವರು ಏನು ಮಾಡುತ್ತಾರೆ ನೋಡೋಣ. ಹೊಂದಾಣಿಕೆ ಮಾಡಿಕೊಳ್ಳುತ್ತಾರಾ ಇಲ್ಲವಾ ನೋಡೋಣ. ಸ್ಥಗಿತ ಹಂತಕ್ಕೆ ಹೋಗಿದ್ದಾರೆ. ನಿಯಮ ಪಾಲನೆ ಆಗುತ್ತಿದೆಯಾ ಎಂದು ನಮ್ಮ ಇಲಾಖೆಯವರು ಎಲ್ಲಾ ಕಡೆ ಪರಿಶೀಲನೆ ಮಾಡುತ್ತಿದ್ದಾರೆ. ಜನರ ಪರವಾಗಿ ಕೆಲಸ ಮಾಡೋಕೆ ನಮ್ಮ ಇಲಾಖೆ ದಿಟ್ಟ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.
ಔಷಧಿ ಕೊರತೆ ಇಲ್ಲ
ಅಂತೆಯೇ ರಾಜ್ಯದಲ್ಲಿ ಔಷಧಿ ಕೊರತೆ ಇದೆ ಎಂಬ ವಿಪಕ್ಷ ನಾಯಕ ಅಶೋಕ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್ ಅವರು, 'ರಾಜ್ಯದಲ್ಲಿ ಔಷಧಿ ಕೊರತೆ ಇಲ್ಲ. ಹಣಕಾಸಿನ ಸಮಸ್ಯೆ ಪರಿಹಾರ ಮಾಡಿದ್ದೇವೆ. ಇದೊಂದು ದೊಡ್ಡ ವ್ಯವಸ್ಥೆ. ಕೆಲವು ಆಸ್ಪತ್ರೆಯಲ್ಲಿ ಈ ಸಮಸ್ಯೆ ಮೊದಲಿಂದಲೂ ಇದೆ. ಸಮಸ್ಯೆ ಇರೋ ಕಡೆ ಹಣಕಾಸಿನ ಕೊರತೆ ಆಗಿತ್ತು.
ಅದನ್ನ ಸರಿ ಮಾಡಿದ್ದೇವೆ. ಏಪ್ರಿಲ್ ತಿಂಗಳಿಂದ ಮತ್ತಷ್ಟು ಸುಧಾರಣೆ ಆಗಲಿದೆ. ಎಲ್ಲಾ ಆಸ್ಪತ್ರೆಗಳಿಗೆ ದುಡ್ಡು ಕೊಟ್ಟಿದ್ದೇವೆ. ಸ್ಥಳೀಯವಾಗಿ ಔಷಧಿ ಖರೀದಿಗೆ ಅನುಮತಿ ಕೊಡಲಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



