'ನನ್ನ ವಿರುದ್ಧ FIR ಆಗಿಲ್ಲ, FSSAI ಅನುಮೋದನೆ ಹೇಗೆ ಕೊಡ್ತಾರೆ: ನಂದಿನಿ ಬ್ರ್ಯಾಂಡ್ ವಿಷಕಾರಿ ಎಂದ ವೈದ್ಯೆ ಕೊಟ್ಟ ಸ್ಪಷ್ಟನೆ ಹೀಗಿದೆ; Video
ವೈದ್ಯೆ ವಿರುದ್ಧ ಕರ್ನಾಟಕ ಹಾಲು ಉತ್ಪಾದಕರ ಮಹಾಮಡಳಿ(KMF) ಪೊಲೀಸ್ ದೂರು ನೀಡಿದೆ. ಈ ಹೇಳಿಕೆಗಳು ಆಧಾರರಹಿತ ಮತ್ತು ಮಾನನಷ್ಟಕರ ಎಂದು ಹೇಳಿರುವ ಕೆಎಂಎಫ್, ಎಫ್‌ಎಸ್‌ಎಸ್‌ಎಐ ಮಾನದಂಡಗಳನ್ನು ಕೆಎಂಎಫ್ ಅನುಸರಿಸುತ್ತದೆ ಮತ್ತು ಅದರ ಉತ್ಪನ್ನಗಳು ಸುರಕ್ಷಿತವಾಗಿವೆ ಎಂದು ಹೇಳಿದೆ.

ಬೆಂಗಳೂರು: ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಸಂಸ್ಥೆ ನಂದಿನಿ ಹಾಲಿನಿಂದ ತಯಾರಿಸುವ ಕೆಲವು ಉತ್ಪನ್ನಗಳು ವಿಷಕಾರಿ ಅವುಗಳನ್ನು ಮಕ್ಕಳಿಗೆ ತಿನ್ನಲು ಕೊಡಬೇಡಿ, ಅವು ಮುಂದಿನ ದಿನಗಳಲ್ಲಿ ಗಂಭೀರ ಕಾಯಿಲೆಗಳಿಗೆ, ಕ್ಯಾನ್ಸರ್ ಕೂಡ ಕಾರಣವಾಗುತ್ತವೆ, ಅವುಗಳಲ್ಲಿ ನೈಸರ್ಗಿಕ ಪದಾರ್ಥಗಳನ್ನು ಹೊಂದಿರುವುದಿಲ್ಲ ಎಂದು ಕೆಲವು ದಿನಗಳ ಹಿಂದೆ ಬೆಂಗಳೂರಿನ ಪ್ರಮುಖ ಆಸ್ಪತ್ರೆಯೊಂದರ ವೈದ್ಯೆ ಚರ್ಮರೋಗ ತಜ್ಞೆ ಡಾ.ಶರಣ್ಯಾ ಸಂತೋಷ್ ಪದ್ಮಾ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಅದು ವೈರಲ್ ಆಗಿದ್ದು ಪೊಲೀಸರು ಅವರಲ್ಲಿ ವಿವರಣೆ ಕೇಳಿದ್ದಾರೆ.
ವೈದ್ಯೆ ವಿರುದ್ಧ ಕರ್ನಾಟಕ ಹಾಲು ಉತ್ಪಾದಕರ ಮಹಾಮಡಳಿ(KMF) ಪೊಲೀಸ್ ದೂರು ದಾಖಲಿಸಿದೆ. ಈ ಹೇಳಿಕೆಗಳು ಆಧಾರರಹಿತ ಮತ್ತು ಮಾನನಷ್ಟಕರ ಎಂದು ಹೇಳಿರುವ ಕೆಎಂಎಫ್, ಎಫ್‌ಎಸ್‌ಎಸ್‌ಎಐ ಮಾನದಂಡಗಳನ್ನು ಕೆಎಂಎಫ್ ಅನುಸರಿಸುತ್ತದೆ ಮತ್ತು ಅದರ ಉತ್ಪನ್ನಗಳು ಸುರಕ್ಷಿತವಾಗಿವೆ ಎಂದು ಹೇಳಿದೆ. ಪೊಲೀಸರು ವೈದ್ಯೆ ಬಳಿ ವಿವರಣೆ ಕೇಳಿದ್ದಾರೆ.
ಏನಿದು ಆರೋಪ?
ವೈದ್ಯೆ ಡಾ. ಶರಣ್ಯ ಸಂತೋಷ್ ಪದ್ಮ ಅವರು ಫೆಬ್ರವರಿ 8 ರಂದು ತಮ್ಮ ಸೋಷಿಯಲ್ ಮೀಡಿಯಾ ರೀಲ್ಸ್ ಒಂದು ಅಪ್ ಲೋಡ್ ಮಾಡಿದ್ದರು. ಅದರಲ್ಲಿ ನಂದಿನಿ ಉತ್ಪನ್ನಗಳಾದ ಕ್ರೀಮ್ ಬನ್, ಸ್ಟ್ರಾಬೆರಿ ಫ್ಲೇವರ್ಡ್ ಮಿಲ್ಕ್ ಮತ್ತು ಪಾನೀಯಗಳ ಕುರಿತು ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು.
ನಂದಿನಿ ಉತ್ಪನ್ನಗಳು ಟಾಕ್ಸಿಕ್ ಮತ್ತು ರಾಸಾಯನಿಕಗಳಿಂದ ಕೂಡಿದ್ದು, ಇವುಗಳ ಸೇವನೆಯಿಂದ ಆಟೋಇಮ್ಯೂನ್ ಕಾಯಿಲೆಗಳು ಬರುತ್ತವೆ.ದೀರ್ಘಕಾಲದ ಸೇವನೆಯಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಬರುವುದು ಖಂಡಿತ.ಸ್ಟ್ರಾಬೆರಿ ಹಾಲಿನಲ್ಲಿ ನೈಸರ್ಗಿಕ ಹಣ್ಣೇ ಇಲ್ಲ, ಕೇವಲ ಕೃತಕ ಬಣ್ಣ ಮತ್ತು ಪ್ರಿಸರ್ವೇಟಿವ್ಸ್ ಇದೆ. ಇದು ಆಹಾರವಲ್ಲ, ವಿಷ. ಸರ್ಕಾರ ಮತ್ತು ಕೆಎಂಎಫ್ ಲಾಭಕ್ಕಾಗಿ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ವೈದ್ಯೆ ಗಂಭೀರ ಆರೋಪ ಮಾಡಿದ್ದರು.
ವೈದ್ಯೆಯ ಈ ಹೇಳಿಕೆಯನ್ನು ಕರ್ನಾಟಕ ಹಾಲು ಮಹಾಮಂಡಳಿ (KMF) ತೀವ್ರವಾಗಿ ಖಂಡಿಸಿತ್ತು. "ನಂದಿನಿ ಉತ್ಪನ್ನಗಳು ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ (FSSAI) ನಿಗದಿಪಡಿಸಿರುವ ಎಲ್ಲಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆ. ಬಾಲ್ಯದಿಂದಲೇ ನಂದಿನಿಯೊಂದಿಗೆ ಬೆಳೆದಿರುವ ಕೋಟ್ಯಾಂತರ ಗ್ರಾಹಕರಲ್ಲಿ ಗೊಂದಲ ಮೂಡಿಸಲು ಈ ರೀತಿ ದುರುದ್ದೇಶಪೂರಿತ ಅಪಪ್ರಚಾರ ಮಾಡಲಾಗುತ್ತಿದೆ" ಎಂದು ಕೆಎಂಎಫ್ ತಿಳಿಸಿದೆ.
ಎಫ್ ಐಆರ್ ಆಗಿಲ್ಲ, ಪೊಲೀಸರು ವಿವರಣೆ ಕೇಳಿದ್ದಾರೆ
ನಾನು ಒಂದು ಸಂಸ್ಥೆಯ ವಿರುದ್ಧ ಆರೋಪ ಮಾಡಿದಾಗ ಈ ರೀತಿ ಇದು ವೈರಲ್ ಆಗುತ್ತದೆ, ಪೊಲೀಸ್ ದೂರು ಹೋಗುತ್ತದೆ ಎಂಬ ಅರಿವು ನನಗಿತ್ತು, ಬೆಂಗಳೂರಿನ ಮಲ್ಲೇಶ್ವರ ಠಾಣೆ ಪೊಲೀಸರಿಂದ ನನಗೆ ಫೋನ್ ಕರೆ ಬಂದಿತ್ತು, ನನ್ನ ವಿರುದ್ಧ ಎಫ್ ಐಆರ್ ಆಗಿಲ್ಲ, ನನ್ನ ವಿರುದ್ಧ ದೂರು ಹೋಗಿರುವುದು ನಿಜ, ಒಂದು ವೇಳೆ ಎಫ್ ಐಆರ್ ಆದರೂ ನಾನು ಹೆದರುವುದಿಲ್ಲ ಎಂದರು.
ನಾನು ಈ ಹೋರಾಟ ಮಾಡುತ್ತಿರುವುದು ಸಾರ್ವಜನಿಕರ ಮಕ್ಕಳ ಆರೋಗ್ಯದ ವಿಷಯಕ್ಕಾಗಿ. ನನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ. ಕಳೆದ ಎರಡು ವರ್ಷಗಳಲ್ಲಿ ನಾನು ನನ್ನ ಮಗನಿಗೆ ಔಷಧಿ ಕೊಟ್ಟಿಲ್ಲ, ಮಕ್ಕಳನ್ನು ನಾವು ಕೊಡುವ ಆಹಾರ ಪದ್ಧತಿ, ಜೀವನಶೈಲಿಯಿಂದ ಆರೋಗ್ಯವಾಗಿ ಸಾಕಬಹುದು. ಔಷಧಿಗಳನ್ನು ಹೆಚ್ಚೆಚ್ಚು ನೀಡಿದಷ್ಟೂ ಕರುಳಿನ ಆರೋಗ್ಯ ಹಾಳಾಗುತ್ತದೆ, ಆರೋಗ್ಯಕ್ಕೆ ಆಧಾರಸ್ತಂಭ ನಮ್ಮ ಆಹಾರ ಎಂದರು.
ಎಫ್ ಎಸ್ ಎಸ್ ಐಯಿಂದ ಅನುಮೋದನೆ ಸಿಕ್ಕಿದೆ ಎನ್ನುತ್ತಾರೆ. ಅವರಿಗೆ ಜೀರ್ಣಾಂಗದ ಆರೋಗ್ಯ ಎಂದರೇನು ಗೊತ್ತಿಲ್ಲ, ಕರುಳಿನ ಆರೋಗ್ಯ ಹೇಗೆ ಹಾಳಾಗುತ್ತದೆ, ಕಾಯಿಲೆಗಳು ಹೇಗೆ ಬರುತ್ತದೆ ಎಂದು ಗೊತ್ತಿಲ್ಲ. FSSAI ಅನುಮೋದನೆ ಆಗಿದೆ ಅಂದರೆ ಉತ್ತಮ ಆಹಾರ ಎಂದು ಭಾವಿಸಿಕೊಳ್ಳುತ್ತಾರೆ, ಅದಕ್ಕೆ ಅನುಮೋದನೆ ನೀಡುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



