ದಾಖಲೆ ಬೆಲೆಗೆ ಬ್ಯಾಡಗಿ ಮೆಣಸಿನಕಾಯಿ ಮಾರಾಟ: ಕ್ವಿಂಟಾಲ್ಗೆ 90,000 ರೂ ತಲುಪಿದ ದರ; ರೈತರು ಸಂತಸ, ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು!
ಇದಕ್ಕೂ ಮುನ್ನ ಲಕ್ಕುಂಡಿ ಗ್ರಾಮದ ರೈತರಿಗೆ ಫೆಬ್ರವರಿ 6ರಂದು ರೂ. 74,099 ದರ ಲಭಿಸಿತ್ತು. ಬ್ಯಾಡಗಿ ಮೆಣಸಿನಕಾಯಿ ಗದಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.

ಗದಗ/ವಿಜಯಪುರ: ರಾಜ್ಯದ ಕೃಷಿ ಕ್ಷೇತ್ರದಲ್ಲಿ ಈ ಬಾರಿ ಭಿನ್ನ ಚಿತ್ರಣ ಕಂಡುಬಂದಿದೆ. ಒಂದು ಕಡೆ ಬ್ಯಾಡಗಿ ಮೆಣಸಿನಕಾಯಿ ದರ ದಾಖಲೆ ಮಟ್ಟ ತಲುಪಿ ಒಂದು ವರ್ಗದ ರೈತರು ಸಂತಸದಲ್ಲಿದ್ದರೆ, ಮತ್ತೊಂದೆಡೆ ಈರುಳ್ಳಿ ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ರೋಣ ತಾಲೂಕಿನ ಸವಡಿ ಗ್ರಾಮದ ರೈತ ವಿಜಯಕುಮಾರ ಪ್ರಕಾಶ ಸಜ್ಜನರ ಅವರು ಬೆಳೆದ ಡಬ್ಬಿ ಹಾಗೂ ಕಡ್ಡಿ ಮೆಣಸಿನಕಾಯಿ ಪ್ರತಿ ಕ್ವಿಂಟಾಲ್ಗೆ ರೂ. 89,999 ರಂತೆ ಮಾರಾಟವಾಗಿದೆ. ಈ ಮೂಲಕ 23 ವರ್ಷದ ಪದವೀಧರ ಯುವ ರೈತ ಸಜ್ಜನರ ಮೊದಲ ಪ್ರಯತ್ನದಲ್ಲೇ ಭರ್ಜರಿ ಇಳುವರಿ ತೆಗೆದು ಸೈ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಲಕ್ಕುಂಡಿ ಗ್ರಾಮದ ರೈತರಿಗೆ ಫೆಬ್ರವರಿ 6ರಂದು ರೂ. 74,099 ದರ ಲಭಿಸಿತ್ತು. ಬ್ಯಾಡಗಿ ಮೆಣಸಿನಕಾಯಿ ಗದಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.
ಮುಂಬೈ, ಹೈದರಾಬಾದ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ವ್ಯಾಪಾರಿಗಳು ಬ್ಯಾಡಗಿ ಮೆಣಸಿನಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದು, ಮೆಣಸಿನಕಾಯಿ ಪುಡಿ ತಯಾರಿಕಾ ಕಂಪನಿಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ಈ ಮೆಣಸಿನಕಾಯಿ ದರ ಪ್ರತಿ ಕ್ವಿಂಟಾಲ್ಗೆ ರೂ. 35,000 ರಿಂದ 50,000 ನಡುವೆ ಇರುತ್ತದೆ. ಆದರೆ ಗುಣಮಟ್ಟ ಮತ್ತು ಬೇಡಿಕೆ ಹೆಚ್ಚಳದಿಂದ ಈ ಬಾರಿ ಇತಿಹಾಸದಲ್ಲೇ ಅತ್ಯಧಿಕ ದರ ದಾಖಲಾಗಿದೆ.
ರೈತ ವಿಜಯಕುಮಾರ್ ಮಾತನಾಡಿ, “ನನ್ನ ಬೆಳೆ ಸಂಪೂರ್ಣ ಆರ್ಗ್ಯಾನಿಕ್ ಆಗಿದ್ದರಿಂದ ಉತ್ತಮ ದರ ಸಿಗುತ್ತದೆ ಎಂಬ ವಿಶ್ವಾಸ ಇತ್ತು. ರೈತರೆಲ್ಲಾ ಸಂತಸಗೊಂಡಿದ್ದು, ಶೀಘ್ರದಲ್ಲೇ ದರ ಒಂದು ಲಕ್ಷ ಮೀರಲಿದೆ ಎಂಬ ನಿರೀಕ್ಷೆ ಇದೆ,” ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ಇದಕ್ಕೆ ವಿರುದ್ಧವಾಗಿ ವಿಜಯಪುರ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗಾರರು ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ.
ಈರುಳ್ಳಿ ಬೆಲೆ ಪ್ರತಿ ಕ್ವಿಂಟಾಲ್ಗೆ ರೂ. 800ರಷ್ಟಕ್ಕೆ ಕುಸಿದಿದ್ದು, ಉತ್ಪಾದನಾ ವೆಚ್ಚವನ್ನೂ ತೀರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ಮುಂಗಾರು ಅವಧಿಯಲ್ಲಿ ಅತಿಯಾದ ಮಳೆ ಮತ್ತು ಪ್ರವಾಹದಿಂದ ಸುಮಾರು 80% ಬೆಳೆ ಹಾನಿಯಾಗಿದ್ದು, ಅಂದಾಜು 31,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ.
ಚಿತ್ತದುರ್ಗದ ನಂತರ ವಿಜಯಪುರ ಜಿಲ್ಲೆ ರಾಜ್ಯದ ಪ್ರಮುಖ ಈರುಳ್ಳಿ ಉತ್ಪಾದನಾ ಪ್ರದೇಶವಾಗಿದ್ದು, ಬಸವನಬಾಗೇವಾಡಿ ಮತ್ತು ಕೋಲಾರ ತಾಲ್ಲೂಕುಗಳಲ್ಲಿ ಹೆಚ್ಚಿನ ಕೃಷಿ ನಡೆಯುತ್ತಿದೆ. ರೈತರು ಬೆಲೆ ಏರಿಕೆಯ ನಿರೀಕ್ಷೆಯಲ್ಲಿದ್ದರೂ, ಮಾರುಕಟ್ಟೆ ಬೆಲೆ ಕುಸಿತದಿಂದ ಮತ್ತೆ ನಷ್ಟ ಎದುರಾಗಿದೆ.
ಅಂದಾಜಿನ ಪ್ರಕಾರ, ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಸುಮಾರು 31,000 ಹೆಕ್ಟೇರ್ ಈರುಳ್ಳಿ ಬೆಳೆ ಹಾನಿಯಾಗಿದೆ. ಚಳಿಗಾಲದಲ್ಲಿ, ಸುಮಾರು 23,000 ಹೆಕ್ಟೇರ್ ಕೃಷಿ ಮಾಡಲಾಗಿದ್ದು, ಬೇಸಿಗೆ ಬೆಳೆಗೆ ಸುಮಾರು 25,000 ಹೆಕ್ಟೇರ್ನಲ್ಲಿ ಬಿತ್ತನೆ ಮಾಡುವ ನಿರೀಕ್ಷೆಯಿದೆ.
ಕೃಷಿ ಉತ್ಪನ್ನಗಳ ಬೆಲೆಗಳಲ್ಲಿ ಭಾರೀ ವ್ಯತ್ಯಾಸ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಬೆಲೆ ಸ್ಥಿರತೆ, ಬೆಂಬಲ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆ ಸುಧಾರಣೆ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



