ಹಿಂದೂ ಮನೆ ಮೇಲೆ ನಿರಂತರ ಕಲ್ಲು ತೂರಾಟ: ಚಿಕ್ಕಮಗಳೂರಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ, ಭದ್ರತೆ ಹೆಚ್ಚಳ
ಕಲ್ಲು ತೂರಾಟ ಹಿನ್ನೆಲೆ ಕೆಲ ಮುಸ್ಲಿಂ ಯುವಕರನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ವಿಜಯನಗರ ಬಡಾವಣೆಯ ತಿಲಕ್ ಪಾರ್ಕ್ ಸಮೀಪ ಮನೆಯೊಂದರ ಮೇಲೆ ಕಳೆದ ಒಂದು ವಾರದಿಂದ ಕಿಡಿಗೇಡಿಗಳು ರಾತ್ರಿ ವೇಳೆ ನಿರಂತರ ಕಲ್ಲುತೂರಾಟ ನಡೆಸಿದ್ದು, ಘಟನೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಘಟನೆ ಬೆನ್ನಲ್ಲೇ ಕೆಲ ಮುಸ್ಲಿಂ ಯುವಕರನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಸೋಮವಾರ ರಾತ್ರಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಮತ್ತೊಂದೆಡೆ, ಘರ್ಷಣೆ ವೇಳೆ ಇಬ್ಬರು ಮುಸ್ಲಿಂ ಯುವಕರು ಗಾಯಗೊಂಡಿದ್ದು, ಅವರನ್ನು ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಏತನ್ಮಧ್ಯೆ ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ ಎಂಬ ಆರೋಪವನ್ನು ಗಾಯಾಳುಗಳು ಮತ್ತು ಸಮುದಾಯದ ಮುಖಂಡರು ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ನಡುವೆ ಕಲ್ಲು ತೂರಾಟಕ್ಕೊಳಗಾದ ಮನೆಯ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಮನೆ ಮೇಲೆ ಕಲ್ಲು ಎಸೆಯಲಾಗುತ್ತಿದೆ. ನಾವು ಭಯದಲ್ಲಿ ಜೀವನ ನಡೆಸುವಂತಾಗಿದೆ ಎಂದು ಹೇಳಿದ್ದಾರೆ. ಸದ್ಯ ಪ್ರಕರಣದ ತನಿಖೆಯನ್ನು ಬಸವನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಕೈಗೊಂಡಿದ್ದಾರೆ.
ನಮ್ಮ ಮನೆಯ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಕಲ್ಲು ತೂರಾಟ ಮಾಡುತ್ತಿದ್ದಾರೆ. ಅವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾನು ಕೆಲಸಕ್ಕೆ ಹೋಗುತ್ತೇನೆ. ತಾಯಿ, ತಂಗಿ ಇಬ್ಬರೇ ಮನೆಯಲ್ಲಿ ಇರುತ್ತಾರೆ. ಮಧ್ಯಾಹ್ನ ರಾತ್ರಿ ವೇಳೆಯಲ್ಲಿ ಕಲ್ಲು ಎಸೆಯುತ್ತಾರೆ. ನಾವು ಪೊಲೀಸರಿಗೆ ದೂರು ನೀಡಿದ್ದೆವು.
ಸೋಮವಾರ ರಾತ್ರಿ ಕೂಡ ಮನೆಗೆ ಕಲ್ಲು ಎಸೆದಿದ್ದಾರೆ. ಅದನ್ನು ಹೊರಗೆ ಇದ್ದ ತಾಯಿ ಹಾಗೂ ತಂಗಿ ಪ್ರಶ್ನೆ ಮಾಡಿದ್ದಾರೆ. ಆಗ ಅವರ ಜೊತೆ ಯುವಕರು ಜಗಳ ಮಾಡಿದ್ದಾರೆ ಎಂದು ಮನೆ ಮಾಲೀಕ ಗಗನ್ ಎಂಬವರು ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕೆಲ ಮುಸ್ಲಿಂ ಯುವಕರನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.
ಎಸ್ಡಿಪಿಐ ಮುಖಂಡ ಮುನೀರ್ ಅವರು ಮಾತನಾಡಿ, ಮುಸ್ಲಿಂ ಯುವಕರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಸಂಬಂಧಪಟ್ಟವರ ವಿರುದ್ಧ ಕೇಸ್ ದಾಖಲಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದೇ ರೀತಿ ಹಿಂದೂ ಸಂಘಟನೆಗಳೂ ಕೂಡ ಮನೆ ಮೇಲೆ ಕಲ್ಲು ಎಸೆದವರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿವೆ.
ಇದರಿಂದಾಗಿ ಸ್ಥಳೀಯ ಪೊಲೀಸ್ ಠಾಣೆ ಎದುರು ಕೆಲಕಾಲ ಹೈಡ್ರಾಮಾವೇ ನಡೆದಿದೆ. ಎರಡೂ ಸಮುದಾಯದ ಯುವಕರು ಜಮಾವಣೆಗೊಂಡು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಸದ್ಯ ಎಂಎಸ್‌ಪಿ ಜಯಕುಮಾರ್ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಠಾಣೆ ಮತ್ತು ಆಸ್ಪತ್ರೆ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



