ಆಳಂದ ದರ್ಗಾ ವಿವಾದ: ಶಿವಲಿಂಗ ಪೂಜೆಗೆ ಸುಪ್ರೀಂ ಕೋರ್ಟ್ ಅನುಮತಿ; ಸಮಿತಿಗೆ ಹಿನ್ನಡೆ!
ದರ್ಗಾ ಸಮಿತಿಯು ಹಿಂದೂ ಭಕ್ತರು ದರ್ಗಾ ಆವರಣದಲ್ಲಿ ಪೂಜೆ ಸಲ್ಲಿಸದಂತೆ ತಡೆಯುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

ಕಲಬುರಗಿ: ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿ ಇರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ದಿನ ಪೂಜೆ ಸಲ್ಲಿಸಲು ಅವಕಾಶ ನೀಡಿರುವ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು. ಫೆಬ್ರವರಿ 15ರಂದು 14 ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಿಂದೂ ಭಕ್ತರಿಗೆ ಅನುಮತಿ ನೀಡಲಾಗಿದೆ.
ದರ್ಗಾ ಸಮಿತಿಯು ಹಿಂದೂ ಭಕ್ತರು ದರ್ಗಾ ಆವರಣದಲ್ಲಿ ಪೂಜೆ ಸಲ್ಲಿಸದಂತೆ ತಡೆಯುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆದರೆ, ಆ ಸ್ಥಳದಲ್ಲಿ ಶತಮಾನಕ್ಕೂ ಹೆಚ್ಚು ಕಾಲದಿಂದ ಶಿವಲಿಂಗ ಅಸ್ತಿತ್ವದಲ್ಲಿದ್ದು, ಕಳೆದ ಎರಡು ವರ್ಷಗಳಿಂದ ಶಿವರಾತ್ರಿ ಪೂಜೆ ನಡೆಯುತ್ತಿದೆ ಎಂದು RTI ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ನ್ಯಾಯಾಲಯದಲ್ಲಿ ವಾದಿಸಿದ್ದರು.
ಹೈಕೋರ್ಟ್ ಪೀಠವು ಕೆಲ ದಿನಗಳ ಹಿಂದೆ ಸಿದ್ರಾಮಯ್ಯ ಹಿರೇಮಠ ಅವರಿಗೆ ಮಾತ್ರ ಪೂಜೆಗೆ ಅನುಮತಿ ನೀಡಿ, ಇತರರಿಗೆ ಅವಕಾಶ ನಿರಾಕರಿಸಿತ್ತು. ಇದಕ್ಕೆ ವಿರೋಧವಾಗಿ ದರ್ಗಾ ಸಮಿತಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎಸ್‌ಸಿ ಶರ್ಮಾ ಅವರಿದ್ದ ಪೀಠವು ಈ ಅರ್ಜಿಯನ್ನು ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ವಿಚಾರಣೆ ನಡೆಸಲು ನಿರಾಕರಿಸಿತು.
ನ್ಯಾಯಮೂರ್ತಿ ದತ್ತ ಅವರು, ಹೈಕೋರ್ಟ್ ಆದೇಶಗಳನ್ನು ಹೊರಡಿಸುತ್ತಿದೆ ಎಂಬ ಕಾರಣಕ್ಕೆ ಆರ್ಟಿಕಲ್ 32 ಅನ್ನು ಬಳಸಲಾಗುವುದಿಲ್ಲ. ಇದು ಅಖಿಲ ಭಾರತ ಮಟ್ಟದ ಸಮಸ್ಯೆಯಲ್ಲ. ಹೈಕೋರ್ಟ್ ಆದೇಶಗಳಿಂದ ತೊಂದರೆಯಾಗಿದ್ದರೆ, ಬಾಧಿತ ಪಕ್ಷವು ಮೇಲ್ಮನವಿ ಮೂಲಕ ಸೂಕ್ತ ಕಾನೂನು ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಪೂಜಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದ ಇತರ ಬಾಕಿ ಇರುವ ಪ್ರಕರಣಗಳೊಂದಿಗೆ ಈ ಅರ್ಜಿಯನ್ನು ಸೇರಿಸಬೇಕೆಂಬ ಮನವಿಯನ್ನೂ ನ್ಯಾಯಾಲಯವು ತಿರಸ್ಕರಿಸಿತು. ಅಂತಿಮವಾಗಿ, ಅರ್ಜಿಯನ್ನು ಹಿಂಪಡೆಯಲಾಗಿದೆ ಎಂಬ ಕಾರಣ ನೀಡಿ ಪೀಠವು ಅದನ್ನು ವಜಾಗೊಳಿಸಿತು.
ಕಳೆದ ಕೆಲವು ವರ್ಷಗಳಿಂದ ಆಳಂದ ದರ್ಗಾ ಆವರಣದಲ್ಲಿರುವ ಶಿವಲಿಂಗಕ್ಕೆ ಮಹಾ ಶಿವರಾತ್ರಿಯಂದು ಪೂಜೆ ಸಲ್ಲಿಸಲು ಹೈಕೋರ್ಟ್ ಸೀಮಿತ ಸಂಖ್ಯೆಯ ಭಕ್ತರಿಗೆ ಮತ್ತು ನಿರ್ದಿಷ್ಟ ಸಮಯದಲ್ಲಿ ಅನುಮತಿ ನೀಡುತ್ತಾ ಬಂದಿದೆ. ಈ ವರ್ಷವೂ ಫೆಬ್ರವರಿ 15ರಂದು ಶಿವರಾತ್ರಿ ಇರುವುದರಿಂದ, ಸುಪ್ರೀಂ ಕೋರ್ಟ್‌ನ ಈ ನಿರ್ಧಾರವು ಭಕ್ತರಿಗೆ ಪೂಜೆ ನಡೆಸಲು ಇದ್ದ ಕಾನೂನು ಅಡ್ಡಿಗಳನ್ನು ದೂರ ಮಾಡಿದೆ.
ನ್ಯಾಯಾಲಯದ ನಿರ್ದೇಶನದಂತೆ ಮುಸ್ಲಿಂ ಸಮುದಾಯವು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಬಹುದಾಗಿದ್ದು, ನಂತರ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಹಿಂದೂ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಏತನ್ಮಧ್ಯೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ದರ್ಗಾ ಸುತ್ತಮುತ್ತ ಶನಿವಾರ ಸಂಜೆ 6ರಿಂದ ಭಾನುವಾರ ಸಂಜೆ 6ರವರೆಗೆ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದ್ದು. ಅನುಮತಿ ಪಡೆದವರ ಹೊರತು ಇತರರಿಗೆ ಆವರಣದಲ್ಲಿ ಪ್ರವೇಶವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಲಾಡ್ಲೆ ಮಶಾಕ್ ದರ್ಗಾ 14ನೇ ಶತಮಾನದಲ್ಲಿ ಬದುಕಿದ್ದ ಸೂಫಿ ಸಂತ ಲಾಡ್ಲೆ ಮಶಾಕ್ ಅವರ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಇದೇ ಆವರಣದಲ್ಲಿ 15ನೇ ಶತಮಾನದಲ್ಲಿ ಬದುಕಿದ್ದ ಹಿಂದೂ ಸಂತ ರಾಘವ ಚೈತನ್ಯರ ಸಮಾಧಿಯೂ ಇದೆ. ಸಮಾಧಿಯ ಮೇಲೆ ಸ್ಥಾಪಿಸಲಾದ ಶಿವಲಿಂಗವು ‘ರಾಘವ ಚೈತನ್ಯ ಶಿವಲಿಂಗ’ ಎಂದು ಜನಪ್ರಿಯವಾಗಿದೆ.
13 ಜನಕ್ಕೆ ಹೈಕೋರ್ಟ್ ಅನುಮತಿ
ಕಲಬುರಗಿ ಅಳಂದದ ವಿವಾದಿತ ಲಾಡ್ಲೆಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹೈಕೋರ್ಟ್ ಮತ್ತೆ 13 ಜನಕ್ಕೆ ಅನುಮತಿ ನೀಡಿದೆ.
ಈ ಮೊದಲು ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ ಹಿರೇಮಠ್ ಜತೆಗೆ ಇಂದಿನ ಅರ್ಜಿಯಲ್ಲಿ ಹೆಸರಿದ್ದ 14 ಜನರ ಪೈಕಿ, 13 ಜನರಿಗೆ ಅವಕಾಶ ಕಲ್ಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



