ರಾಜ್ಯ

KPSC ನೇಮಕಾತಿ ಹಗರಣ: ಎಸ್‌ಐಟಿ ರಚನೆಗೆ ಸುಪ್ರೀಂ ಕೋರ್ಟ್ ತಡೆ; ಸಮರ್ಥ ಅಧಿಕಾರಿಗಳ ಪಟ್ಟಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ

ಜೈಲು ಮತ್ತು ತಿದ್ದುಪಡಿ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ಎಸ್ಐಟಿ ರಚಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

KPSC ನೇಮಕಾತಿ ಹಗರಣ: ಎಸ್‌ಐಟಿ ರಚನೆಗೆ ಸುಪ್ರೀಂ ಕೋರ್ಟ್ ತಡೆ; ಸಮರ್ಥ ಅಧಿಕಾರಿಗಳ ಪಟ್ಟಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ
ಸುಪ್ರೀಂ ಕೋರ್ಟ್ — Online Desk
Published On :

ನವದೆಹಲಿ: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣದ ತನಿಖೆಗಾಗಿ ಕರ್ನಾಟಕ ಹೈಕೋರ್ಟ್ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿ ಆದೇಶ ಹೊರಡಿಸಿತ್ತು. ಇದೀಗ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.

ಜೈಲು ಮತ್ತು ತಿದ್ದುಪಡಿ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ಎಸ್ಐಟಿ ರಚಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾದ ದಿನದಿಂದಲೂ ಸಿಐಡಿ ಅಧಿಕಾರಿಗಳು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ.

ಕೆಲವು ಅಭ್ಯರ್ಥಿಗಳು ಸಿಬಿಐ ತನಿಖೆಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅನಿರೀಕ್ಷಿತವಾಗಿ ಎಸ್‌ಐಟಿ ರಚನೆಗೆ ಆದೇಶಿಸಿದೆ. ಹೈಕೋರ್ಟ್ ಸೂಚಿಸಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಈ ಹಿಂದೆ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಿಬಿಐ ವಿಚಾರಣೆ ಎದುರಿಸಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿ, ಅಧಿಕಾರಿಯ ಮೇಲಿರುವ ಆರೋಪಗಳ ಕುರಿತ ದಾಖಲೆಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅಭ್ಯರ್ಥಿಗಳ ಪರ ವಕೀಲರು, “ಹೈಕೋರ್ಟ್ ಇಡೀ ರಾಜ್ಯದ ಅರ್ಹ ಅಧಿಕಾರಿಗಳನ್ನು ಪರಿಶೀಲಿಸಿ ಸಮರ್ಥ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಿದೆ. ಹೀಗಿರುವಾಗ ಸರ್ಕಾರಕ್ಕೆ ಈ ತನಿಖೆಗೆ ಹಿಂಜರಿಕೆ ಏಕೆ? ಸರ್ಕಾರಕ್ಕೆ ತಮಗೆ ಬೇಕಾದ ಅಧಿಕಾರಿಗಳನ್ನೇ ನೇಮಿಸಬೇಕೆಂಬ ಉದ್ದೇಶವಿದೆಯೇ? ಅಧಿಕಾರಿಗಳ ಮೇಲೆ ಆಕ್ಷೇಪವಿದ್ದರೆ ಹೈಕೋರ್ಟ್‌ಗೆ ಹೋಗಬೇಕಿತ್ತು” ಎಂದು ಬಲವಾಗಿ ವಾದಿಸಿದರು.

ವಾದ, ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ, ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿದೆ. ಅಲ್ಲದೆ ಅಧಿಕಾರಿಯ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿದೆ ಮತ್ತು ಎಸ್‌ಐಟಿ ರಚನೆಗೆ ಸರ್ಕಾರಕ್ಕೆ ಸಮ್ಮತವಿರುವ ಇತರ ಸಮರ್ಥ ಅಧಿಕಾರಿಗಳ ಪಟ್ಟಿಯನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.