ರಾಜ್ಯ

ಕೆನಡಾದಲ್ಲಿ ಚಂದನ್ ಕುಮಾರ್ ಹತ್ಯೆ: ವಿದೇಶಾಂಗ ಇಲಾಖೆ ಸಹಕಾರ ಕೋರಲಾಗಿದ್ದು, ಶೀಘ್ರದಲ್ಲೇ ಪಾರ್ಥೀವ ಶರೀರ ಭಾರತಕ್ಕೆ; ಸಚಿವ ಪರಮೇಶ್ವರ್

ಚಂದನ್ ಕುಮಾರ್ ವಿದೇಶದಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇದು ಅತ್ಯಂತ ದುರ್ಘಟನೆ. ಆರೋಪಿಗಳ ವಿರುದ್ಧ ಕೆನಡಾ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ಕೆನಡಾದಲ್ಲಿ ಚಂದನ್ ಕುಮಾರ್ ಹತ್ಯೆ: ವಿದೇಶಾಂಗ ಇಲಾಖೆ ಸಹಕಾರ ಕೋರಲಾಗಿದ್ದು, ಶೀಘ್ರದಲ್ಲೇ ಪಾರ್ಥೀವ ಶರೀರ ಭಾರತಕ್ಕೆ; ಸಚಿವ ಪರಮೇಶ್ವರ್
ಡಾ. ಜಿ. ಪರಮೇಶ್ವರ್ — online desk
Published On :

ಬೆಂಗಳೂರು: ಕೆನಡಾದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಒಳಗಾಗಿ ಮೃತಪಟ್ಟಿರುವ ನೆಲಮಂಗಲ ಮೂಲದ ಚಂದನ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಆದಷ್ಟು ಶೀಘ್ರ ಭಾರತಕ್ಕೆ ತರಲು ವಿದೇಶಾಂಗ ಸಚಿವಾಲಯದ ಸಹಕಾರ ಕೋರಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ.

ನೆಲಮಂಗದಲ್ಲಿರುವ ಚಂದನ್ ಕುಮಾರ್ ಅವರ ಮನೆಗೆ ಭೇಟಿ ನೀಡಿದ ಪರಮೇಶ್ವರ್ ಅವರು, ಪೋಷಕರಿಗೆ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದನ್ ಕುಮಾರ್ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮದ ನಿವಾಸಿಯಾಗಿದ್ದು, ನಿವೃತ್ತ ಶಿಕ್ಷಕ ನಂದಕುಮಾರ್ ಅವರ ಏಕೈಕ ಪುತ್ರರಾಗಿದ್ದರು. ಪ್ರತಿಭಾನ್ವಿತ ವ್ಯಕ್ತಿ ವಿದೇಶಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾಗ ಹತ್ಯೆಯಾಗಿರುವುದು ನೋವಿನ ವಿಚಾರ ಎಂದು ಹೇಳಿದರು.

ಚಂದನ್ ಕುಮಾರ್ ವಿದೇಶದಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇದು ಅತ್ಯಂತ ದುರ್ಘಟನೆ. ಆರೋಪಿಗಳ ವಿರುದ್ಧ ಕೆನಡಾ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕೊಲೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಪುತ್ರನ ಹತ್ಯೆಯಿಂದ ಪೋಷಕರು ಆಘಾತಕ್ಕೊಳಗಾಗಿದ್ದು, ಮೃತದೇಹವನ್ನು ಶೀಘ್ರ ಭಾರತಕ್ಕೆ ತರಲು ಮನವಿ ಮಾಡಿದ್ದಾರೆ.

ಪಾರ್ಥೀವ ಶರೀರವನ್ನು ಆದಷ್ಟು ಶೀಘ್ರ ಭಾರತಕ್ಕೆ ತರಲು ರಾಜ್ಯ ಪೊಲೀಸ್ ಇಲಾಖೆಯ ಮೂಲಕ ಕೇಂದ್ರ ವಿದೇಶಾಂಗ ಸಚಿವಾಲಯದ ಸಹಕಾರ ಕೋರಲಾಗಿದೆ ಎಂದು ತಿಳಿಸಿದರು.

ಈ ಕುರಿತು ಕರ್ನಾಟಕ ಸರ್ಕಾರ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಮೃತದೇಹವನ್ನು ವಾಪಸ್ ತರಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಎಲ್ಲ ಕನ್ನಡಿಗರ ಸುರಕ್ಷತೆಗೆ ಸರ್ಕಾರವು ಕಟಿಬದ್ಧ

ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಸಚಿವರು, ಚಂದನ್ ಕುಮಾರ್ ಹತ್ಯೆ ಘಟನೆಯಿಂದ ಕೆನಾಡದಲ್ಲಿ ನೆಲೆಸಿರುವ ಕನ್ನಡಿಗರು ಆತಂಕ ಪಡುವುದು ಬೇಡ. ಎಲ್ಲ ಕನ್ನಡಿಗರ ಸುರಕ್ಷತೆಗೆ ಕರ್ನಾಟಕ ಸರ್ಕಾರವು ಕಟಿಬದ್ಧವಾಗಿದೆ ಎಂದು ಹೇಳಿದ್ದರು.

ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಬೆಂಗಳೂರಿನ ನೆಲಮಂಗಲ ಮೂಲದ ಚಂದನ್ ಕುಮಾರ್ ಅವರು ಗುಂಡಿನ ದಾಳಿಯಲ್ಲಿ ಹತ್ಯೆಗೀಡಾಗಿರುವ ಸುದ್ದಿ ಮನಸ್ಸಿಗೆ ಅತೀವ ನೋವನ್ನುಂಟು ಮಾಡಿದೆ. ಮೃತರಿಗೆ ಭಾವಪೂರ್ಣ ನಮನಗಳು. ಭಗವಂತನು ಮೃತರ ಆತ್ಮಕ್ಕೆ ಚಿರ ಶಾಂತಿ ಕರುಣಿಸಲಿ. ಕುಟುಂಬ ವರ್ಗದವರಿಗೆ ಈ ನೋವನ್ನು ಅರಗಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದರು.

ಮೃತರ ಪಾರ್ಥೀವ ಶರೀರವನ್ನು ಆದಷ್ಟು ಶೀಘ್ರ ಭಾರತಕ್ಕೆ ತರಲು ರಾಜ್ಯ ಪೊಲೀಸ್ ಇಲಾಖೆಯ ಮೂಲಕ ಕೇಂದ್ರ ವಿದೇಶಾಂಗ ಸಚಿವಾಲಯದ ಸಹಕಾರ ಕೋರಲಾಗಿದೆ. ಕರ್ನಾಟಕದಲ್ಲಿ ನೆಲೆಸಿರುವ ದುಃಖತಪ್ತ ಕುಟುಂಬದವರಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಚಂದನ್ ಕುಮಾರ್ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ, ನ್ಯಾಯ ಒದಗಿಸುವಂತೆ ಕೇಂದ್ರ ವಿದೇಶಾಂಗ ಸಚಿವಾಲಯದ‌ ಮೂಲಕ ಕೆನಡಾ ಸರ್ಕಾರವನ್ನು ಒತ್ತಾಯಿಸುತ್ತೇನೆ. ಈ ಘಟನೆಯಿಂದ ಕೆನಾಡದಲ್ಲಿ ನೆಲೆಸಿರುವ ಕನ್ನಡಿಗರು ಆತಂಕ ಪಡುವುದು ಬೇಡ. ಎಲ್ಲ ಕನ್ನಡಿಗರ ಸುರಕ್ಷತೆಗೆ ನಮಮ ಸರ್ಕಾರ ಬದ್ಧ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.