News wrap 05-02-2026 | ಕೋಲಾರ: ಮರು ಮತ ಎಣಿಕೆಯಲ್ಲಿ ಹಾಲಿ ಶಾಸಕ ನಂಜೇಗೌಡ ಗೆ ಗೆಲುವು; ಕರ್ನಾಟಕಕ್ಕೆ ಮತ್ತೊಂದು ಹೈ ಸ್ಪೀಡ್ ರೈಲು ಕಾರಿಡಾರ್; ಅಧಿಕಾರಿಗಳಿಗೆ ಲಂಚ ಕೊಡಲು ಹಣವಿಲ್ಲ; ಬೆಳೆದ ಮೂಲಂಗಿ ತಂದ ರೈತ!

1. ಕೋಲಾರ: ಮರು ಮತ ಎಣಿಕೆಯಲ್ಲಿ ಹಾಲಿ ಶಾಸಕ ನಂಜೇಗೌಡ ಗೆ ಗೆಲುವು
ತೀವ್ರ ಕುತೂಹಲ ಕೆರಳಿಸಿದ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಪ್ರಕ್ರಿಯೆಯಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಗೆಲುವು ಸಾಧಿಸಿದ್ದಾರೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ನಂಜೇಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಬಿಜೆಪಿಯ ಪ್ರತಿಸ್ಪರ್ಧಿ ಅಭ್ಯರ್ಥಿ ಕೆ.ಎಸ್. ಮಂಜುನಾಥ ಗೌಡ ಅವರಿಗಿಂತ 250 ಹೆಚ್ಚಿನ ಮತಗಳನ್ನು ಪಡೆದಿರುವುದಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದ್ದು, ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಂಜೇಗೌಡ ಕೇವಲ 248 ಮತಗಳಿಂದ ಗೆಲುವು ಸಾಧಿಸಿದ್ದರು. ನಂತರ ಮಂಜುನಾಥ ಗೌಡ ನ್ಯಾಯಾಲಯದಲ್ಲಿ ತಕಾರರು ಅರ್ಜಿ ಸಲ್ಲಿಸಿದ್ದರು. ಮತಗಳ ಮರು ಎಣಿಕೆ ಮತ್ತು ಫಲಿತಾಂಶಗಳನ್ನು ಹೊಸದಾಗಿ ಘೋಷಿಸಲು ಹೈಕೋರ್ಟ್ ಆದೇಶಿಸಿತ್ತು. 2025ರ ನವೆಂಬರ್ 11 ರಂದು ಸುಪ್ರೀಂಕೋರ್ಟ್ ಸೂಚನೆಯಂತೆ ಈ ಕ್ಷೇತ್ರದ ಮರು ಮತ ಎಣಿಕೆ ನಡೆದಿತ್ತು. ಇಂದು ಕಕ್ಷಿದಾರರ ಸಮ್ಮುಖದಲ್ಲಿ ಮುಚ್ಚಿದ ಲಕೋಟೆ ತೆರೆದು ಮರು ಎಣಿಕೆ ಮಾಡಿದ ಬಳಿಕವೂ ನಂಜೇಗೌಡ ಅವರೇ ಗೆದ್ದಿದ್ದಾರೆ ಎಂದು ಕೋರ್ಟ್ ಹೇಳಿದೆ.
2. ಕರ್ನಾಟಕಕ್ಕೆ ಮತ್ತೊಂದು ಹೈ ಸ್ಪೀಡ್ ರೈಲು ಕಾರಿಡಾರ್
ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ದೇಶದಲ್ಲಿ ಒಟ್ಟು 7 ಹೈ ಸ್ಪೀಡ್ ರೈಲು ಕಾರಿಡಾರ್ ಘೋಷಿಸಿರುವ ಕೇಂದ್ರ ಸರ್ಕಾರದಿಂದ ಇದೀಗ ಕರ್ನಾಟಕಕ್ಕೆ ಮತ್ತೊಂದು ಹೈಸ್ಪೀಡ್ ರೈಲು ಕಾರಿಡಾರ್ ಕೊಡುಗೆಯ ಸೂಚನೆ ಸಿಕ್ಕಿದೆ. 'ಬೆಂಗಳೂರು ಮತ್ತು ಪುಣೆ' ನಡುವೆ ಮತ್ತೊಂದು ಹೈ ಸ್ಪೀಡ್ ರೈಲು ಕಾರಿಡಾರ್ ಗೆ ಚಿಂತನೆ ನಡೆದಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣನ್ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಂಗಳೂರು ಮತ್ತು ಪುಣೆ ನಡುವೆ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣಕ್ಕಾಗಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ರೈಲ್ವೆ ಸಚಿವರು ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ ಎಂದು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಪ್ರಲ್ಹಾದ್ ಜೋಷಿ ತಿಳಿಸಿದ್ದಾರೆ. ಈ ರೈಲು ಕಾರಿಡಾರ್ ನಿರ್ಮಾಣದಿಂದ ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಚಿತ್ರ ದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಅನುಕೂಲವಾಗುತ್ತದೆ.
3. ಅಧಿಕಾರಿಗಳಿಗೆ ಲಂಚ ಕೊಡಲು ಹಣವಿಲ್ಲ; ಬೆಳೆದ ಮೂಲಂಗಿ ತಂದ ರೈತ!
ತಮ್ಮ ಜಮೀನಿಗೆ ದಾರಿ ಮಾಡಿಕೊಡಲು ಸತಾಯಿಸಿದ ಅಧಿಕಾರಿಗಳ ವಿರುದ್ಧ ತುಮಕೂರು ಜಿಲ್ಲೆಯ ಮಧುಗಿರಿ ರೈತರೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಕೊಡಲು ನನ್ನ ಬಳಿ ಹಣ ಇಲ್ಲವೆಂದು ತಾವು ಬೆಳೆದ ಮೂಲಂಗಿಯನ್ನೇ ಅಧಿಕಾರಿಗಳಿಗೆ ಕೊಡಲು ರೈತರೊಬ್ಬರು ಮಧುಗಿರಿ ತಾಲೂಕು ಕಚೇರಿಗೆ ಬಂದ ಘಟನೆ ನಡೆದಿದೆ. ತಾಲೂಕು ಕಚೇರಿ ಎದುರು ರೈತ ಪ್ರಸನ್ನಕುಮಾರ್ ಎಂಬುವರು ತಮ್ಮ ದ್ವಿಚಕ್ರ ವಾಹನದಲ್ಲಿ ಮೂಲಂಗಿ ತರಕಾರಿಯನ್ನು ತರುವ ಮೂಲಕ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಕಾಶೆಯಲ್ಲಿ ನನ್ನ ಜಮೀನಿಗೆ ಹೋಗಲು ರಸ್ತೆ ಇದೆ. ಆದರೆ ಆ ರಸ್ತೆ ಒತ್ತುವರಿಯಾಗಿದೆ. ದಾರಿಯನ್ನು ತೆರವು ಮಾಡುವಂತೆ ಮನವಿ ಮಾಡಿದ್ದೆ. ಈವರೆಗೆ ಯಾರೂ ಬಂದಿಲ್ಲ. ಸ್ಥಳೀಯ ಅಧಿಕಾರಿಗಳು ದಿನ ಒಂದೊಂದು ಕಥೆ ಹೇಳಿ ಕೆಲಸ ಮಾಡುತ್ತಿಲ್ಲ ಎಂದು ರೈತ ಹೇಳಿದ್ದಾರೆ.
4. ನಜೀರ್ ಅಹ್ಮದ್ ವಿರುದ್ಧ 'ಅವಹೇಳನಕಾರಿ ಹೇಳಿಕೆ': ಬಿಜೆಪಿ ಎಂಎಲ್‌ಸಿ ಸಿಟಿ ರವಿ ಅಮಾನತು
ಕಾಂಗ್ರೆಸ್ ಸದಸ್ಯ ನಜೀರ್ ಅಹ್ಮದ್ ವಿರುದ್ಧ 'ಅವಹೇಳನಕಾರಿ ಹೇಳಿಕೆ' ನೀಡಿದ ಆರೋಪದ ಮೇಲೆ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದ ಕೊನೆಯ ದಿನದಂದು ಅಮಾನತುಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಹ್ಮದ್ ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಸಿಟಿ ರವಿ ಎರಡು ದಿನಗಳ ಹಿಂದೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು 'ಆಕ್ಷೇಪಾರ್ಹ' ಎಂದು ಪರಿಗಣಿಸಿದ ಪರಿಷತ್ತಿನ ಕಾಂಗ್ರೆಸ್ ಸದಸ್ಯರು, ಸಿಟಿ ರವಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಅಲ್ಲದೆ, ಸಭಾವತಿ ಬಸವರಾಜ ಹೊರಟ್ಟಿ ಅವರು ಸಹ ಸಿಟಿ ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
5. ರಾಜ್ಯಪಾಲರ ಸಹಿ ನಕಲು ಮಾಡಿ ವಂಚನೆ: ಪ್ರಕರಣ ದಾಖಲು
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಸಹಿಯನ್ನು ನಕಲು ಮಾಡಿ, ವಂಚಿಸುತ್ತಿದ್ದ ನಕಲಿ ಐಪಿಎಸ್, ಐಎಎಸ್ ಅಧಿಕಾರಿ ಎಚ್.ಎನ್. ಸುಜಯೇಂದ್ರ (45) ಎಂಬಾತನ ವಿರುದ್ಧ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ನೀಡಿದ ದೂರಿನನ್ವಯ ಸುಜಯೇಂದ್ರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ರಾಜ್ಯಪಾಲರ ಹೆಸರಿನ ಲೆಟರ್‌ಹೆಡ್ ಬಳಸಿರುವ ಸುಜಯೇಂದ್ರ, ರಾಜ್ಯಪಾಲರ ಸಹಿ ನಕಲು ಮಾಡಿ ವೆಲ್ಲೂರ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿ ಆದೇಶ ಹೊರಡಿಸಿದ್ದಾನೆ. ಈ ನಿಟ್ಟಿನಲ್ಲಿ ಸುಜಯೇಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರದೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


