ಕರ್ನಾಟಕದಲ್ಲಿನ ರೈಲ್ವೆ ಯೋಜನೆಗಳಿಗೆ ಬಜೆಟ್ ನಲ್ಲಿ 7,748 ಕೋಟಿ ರೂ ನಿಗದಿ: ಅಶ್ವಿನಿ ವೈಷ್ಣವ್
ಬಜೆಟ್‌ನಲ್ಲಿ ಘೋಷಿಸಲಾದ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದರಾಬಾದ್ ಬುಲೆಟ್ ಟ್ರೈನ್ ಕಾರಿಡಾರ್‌ಗಳು ಬೆಂಗಳೂರಿನ ಜನರಿಗೆ ದೊಡ್ಡ ಬದಲಾವಣೆಯನ್ನು ತರಲಿವೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚಿಗೆ ಮಂಡಿಸಿದ 2026-27ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7,748 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ತಿಳಿಸಿದ್ದಾರೆ.
ವಿಡಿಯೋ ಸಂವಾದದಲ್ಲಿ ಮಾತನಾಡಿದ ಸಚಿವರು, ದೊಡ್ಡ ಪ್ರಮಾಣದ ಅನುದಾನ ಹಂಚಿಕೆಯು ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗಲಿದೆ. ರಾಜ್ಯದಲ್ಲಿ ಪ್ರಸ್ತುತ 52,950 ಕೋಟಿ ರೂ. ಮೌಲ್ಯದ ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.
ಹೊಸ ಟ್ರ್ಯಾಕ್ ನಿರ್ಮಾಣ, ಸಮಗ್ರವಾಗಿ ನಿಲ್ದಾಣದ ಪುನರಾಭಿವೃದ್ಧಿ ಮತ್ತಿತರ ಸುರಕ್ಷತಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಬಜೆಟ್‌ನಲ್ಲಿ ಘೋಷಿಸಲಾದ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದರಾಬಾದ್ ಬುಲೆಟ್ ಟ್ರೈನ್ ಕಾರಿಡಾರ್‌ಗಳು ಬೆಂಗಳೂರಿನ ಜನರಿಗೆ ದೊಡ್ಡ ಬದಲಾವಣೆಯನ್ನು ತರಲಿವೆ ಎಂದು ಹೇಳಿದರು.
ಈ ಕಾರಿಡಾರ್ ನಿಂದ ಬೆಂಗಳೂರು-ಚೆನ್ನೈ ನಡುವೆ ಕೇವಲ ಒಂದು ಗಂಟೆ 13 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ. ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಪ್ರಯಾಣದ ಅವಧಿ ಕೇವಲ ಎರಡು ಗಂಟೆ ಆಗಲಿದೆ.ಈ ಯೋಜನೆಯಿಂದ ಬೆಂಗಳೂರಿನಲ್ಲಿ ಉತ್ಪಾದನೆ, ವಿನ್ಯಾಸ ಮತ್ತು ಐಟಿ ಸೇವೆಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದು ಅವರು ತಿಳಿಸಿದರು.
ಅಮೃತ್ ಸ್ಟೇಷನ್ ಯೋಜನೆಯಡಿ, 2,110 ಕೋಟಿ ರೂ.ಗಳಲ್ಲಿ ರಾಜ್ಯದಲ್ಲಿ 61 ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಗೆ ಗುರುತಿಸಲಾಗಿದೆ. 5 ನಿಲ್ದಾಣಗಳಲ್ಲಿ ಬಾಗಲಕೋಟ, ಧಾರವಾಡ, ಗದಗ, ಗೋಕಾಕ ರಸ್ತೆ ಮತ್ತು ಮುನಿರಾಬಾದ್ ಪುನರ್ ಅಭಿವೃದ್ಧಿ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿದ್ದು, ಬಾದಾಮಿ, ಅಳ್ನಾವರ, ಕೊಪ್ಪಳ ಮತ್ತು ಬಂಟ್ವಾಳ ರೈಲು ನಿಲ್ದಾಣಗಳು ಉದ್ಘಾಟನೆಗೆ ಸಜ್ಜಾಗಿವೆ ಎಂದು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2026: ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರು ಉಪನಗರ ರೈಲು ಯೋಜನೆಗೆ 500 ಕೋಟಿ ರೂ ಘೋಷಣೆ
2014 ರಿಂದ ರಾಜ್ಯದಲ್ಲಿ ಸುಮಾರು 1,750 ಕಿಮೀ ಹೊಸ ರೈಲು ಹಳಿಗಳನ್ನು ನಿರ್ಮಿಸಲಾಗಿದೆ. 3,368 ಮಾರ್ಗ ಕಿಲೋಮೀಟರ್ (97%) ರೈಲ್ವೆ ಮಾರ್ಗವನ್ನು ವಿದ್ಯುದೀಕರಣಗೊಳಿಸಲಾಗಿದೆ. ಜೊತೆಗೆ 707 ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. 138 ಕಿಮೀ ಮಾರ್ಗದ KSR ಬೆಂಗಳೂರು-ಮೈಸೂರು ವಿಭಾಗವು 72.76 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಸಿಗ್ನಲ್‌ಗಳನ್ನು ಪಡೆಯಲಿದೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ 3,085 ಕೋಟಿ ರೂ. ಮತ್ತು ಜೋಡಿ ಹಳಿಗಳ ನಿರ್ಮಾಣಕ್ಕೆ 1,534 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


