ತಿಂಡಿ ಹಣದ ವಿಚಾರಕ್ಕೆ ಜಗಳ, ಕಳ್ಳತನ ಆರೋಪ; ಇಬ್ಬರು ಬಾಲಕರಿಗೆ ಪೈಪ್‌ನಿಂದ ಹೊಡೆದ ಅಂಗಡಿ ಮಾಲೀಕ, ಬಂಧನ!
ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಮಲಘಾಣ ಗ್ರಾಮದಲ್ಲಿ ಆಗಸ್ಟ್ 28ರಂದು ಈ ಘಟನೆ ನಡೆದಿದೆ. ಬಂಧಿತ ಅಂಗಡಿ ಮಾಲೀಕನನ್ನು ಅಶೋಕ್ ಮನೋಹರ್ ಪತ್ತಾರ್ ಎಂದು ಗುರುತಿಸಲಾಗಿದೆ.
ವಿಜಯಪುರ: ತಿಂಡಿ ಖರೀದಿಸುವ ವಿಚಾರದಲ್ಲಿ ಹಣ ಪಾವತಿ ಕುರಿತು ನಡೆದ ಜಗಳದ ಬಳಿಕ ಇಬ್ಬರು ಅಪ್ರಾಪ್ತ ಬಾಲಕರ ಮೇಲೆ ಅಂಗಡಿಯಲ್ಲಿದ್ದ ಪೈಪ್‌ನಿಂದ ಹಲ್ಲೆ ನಡೆಸಿದ ಆರೋಪದಡಿ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಮಲಘಾಣ ಗ್ರಾಮದಲ್ಲಿ ಆಗಸ್ಟ್ 28ರಂದು ಈ ಘಟನೆ ನಡೆದಿದೆ. ಬಂಧಿತ ಅಂಗಡಿ ಮಾಲೀಕನನ್ನು ಅಶೋಕ್ ಮನೋಹರ್ ಪತ್ತಾರ್ ಎಂದು ಗುರುತಿಸಲಾಗಿದೆ.
ಅಂಗಡಿ ಮಾಲೀಕ ಇಬ್ಬರು ಬಾಲಕರಿಗೆ ಪೈಪ್‌ನಿಂದ ಹೊಡೆಯುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬೂಸ್ಟ್ ಪ್ಯಾಕೆಟ್‌ನಿಂದ ಶುರುವಾಯ್ತು ಜಗಳ
ಪೊಲೀಸರ ಪ್ರಕಾರ, ಹಲ್ಲೆಗೊಳಗಾದ ಬಾಲಕರ ಪೈಕಿ ಒಬ್ಬನ ತಂದೆ ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರಿನ ಪ್ರಕಾರ, 11 ವರ್ಷದ ಬಾಲಕ ಹಾಗೂ ಆತನ 14 ವರ್ಷದ ಸ್ನೇಹಿತ ಆಗಸ್ಟ್ 28ರಂದು ಗ್ರಾಮದಲ್ಲಿರುವ ಅಂಗಡಿಯೊಂದಕ್ಕೆ ತಿಂಡಿ ಖರೀದಿಸಲು ತೆರಳಿದ್ದರು.
ಬಾಲಕರು ಮೊದಲು ಒಂದು ಬೂಸ್ಟ್ ಪ್ಯಾಕೆಟ್ ತೆಗೆದುಕೊಂಡು, ಇನ್ನೂ ಕೆಲವು ವಸ್ತುಗಳನ್ನು ಖರೀದಿಸಿದ ಬಳಿಕ ಎಲ್ಲದಕ್ಕೂ ಒಟ್ಟಿಗೆ ಹಣ ಪಾವತಿಸಿವುದಾಗಿ ಹೇಳಿದರು. ಆದರೆ, ಇದಕ್ಕೆ ಅಂಗಡಿ ಮಾಲೀಕ ಆಕ್ಷೇಪ ವ್ಯಕ್ತಪಡಿಸಿ ಬಾಲಕರನ್ನು ನಿಂದಿಸಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೈಪ್‌ನಿಂದ ಕಾಲು, ತೊಡೆ, ಬೆನ್ನಿಗೆ ಹೊಡೆತ
ವಾಗ್ವಾದದ ವೇಳೆ ಅಂಗಡಿಯಲ್ಲಿದ್ದ ಪೈಪ್ ತೆಗೆದುಕೊಂಡ ಅಂಗಡಿ ಮಾಲೀಕ ಅಶೋಕ್, ಇಬ್ಬರು ಬಾಲಕರ ಕಾಲು, ತೊಡೆ ಮತ್ತು ಬೆನ್ನಿನ ಮೇಲೆ ಪೈಪ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಹಲ್ಲೆ ಮಾಡಬೇಡಿ ಎಂದು ಬಾಲಕರು ಮನವಿ ಮಾಡಿದರೂ ಆತ ಹೊಡೆಯುವುದನ್ನು ನಿಲ್ಲಿಸಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಂತರ ಇಬ್ಬರೂ ಬಾಲಕರು ಅಂಗಡಿಯಿಂದ ಹೊರಗೆ ಓಡಿ ಹೋಗಿ ನಡೆದ ಘಟನೆಯನ್ನು ತಮ್ಮ ಕುಟುಂಬದವರಿಗೆ ತಿಳಿಸಿದ್ದಾರೆ.
ನೋವು ಹೆಚ್ಚಾದ ಬಳಿಕ ಆಸ್ಪತ್ರೆಗೆ ದಾಖಲು
ಮೊದಲಿಗೆ ಬಾಲಕರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗಿತ್ತು. ಆದರೆ ಗಾಯಗಳ ನೋವು ಕಡಿಮೆಯಾಗದೆ ಮುಂದುವರಿದ ಹಿನ್ನೆಲೆಯಲ್ಲಿ ಆಗಸ್ಟ್ 30ರಂದು ಇಬ್ಬರನ್ನೂ ಸಿಂದಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಂಗಡಿಗೆ ಮತ್ತೆ ಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಶೋಕ್ ಬಾಲಕರಿಗೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಎಫ್‌ಐಆರ್‌ನಲ್ಲಿ ದಾಖಲಾಗಿದೆ.
ಹಲವು ಸೆಕ್ಷನ್‌ಗಳಡಿ ಪ್ರಕರಣ
ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಆಲಮೇಲ ಪೊಲೀಸ್ ಠಾಣೆಯಲ್ಲಿ ಅಂಗಡಿಕಾರನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಸೆಕ್ಷನ್ 115(2) (ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು), 118(1) (ಅಪಾಯಕಾರಿ ಆಯುಧ ಅಥವಾ ವಿಧಾನ ಬಳಸಿ ಗಾಯಗೊಳಿಸುವುದು), 118(2) (ಅಪಾಯಕಾರಿ ವಿಧಾನದಿಂದ ಗಂಭೀರ ಗಾಯಗೊಳಿಸುವುದು), 352 (ಶಾಂತಿ ಭಂಗಕ್ಕೆ ಪ್ರಚೋದಿಸುವ ಉದ್ದೇಶದೊಂದಿಗೆ ಉದ್ದೇಶಪೂರ್ವಕ ಅವಮಾನ) ಹಾಗೂ 351(2) (ಕ್ರಿಮಿನಲ್ ಬೆದರಿಕೆ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ ಮತ್ತು ದೂರು ಆಧರಿಸಿ ತನಿಖೆ ಮುಂದುವರಿದಿದ್ದು, ಆರೋಪಿ ಅಶೋಕ್ ಮನೋಹರ್ ಪತ್ತಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


