ರಾಜ್ಯ

ದಿನಕ್ಕೊಂದು ಬಣ್ಣಬಣ್ಣದ 'ದುಬಾರಿ ಶಾಲು' ಹಾಕುವ ಸಿಎಂ ಡಿಕೆಶಿಗೆ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಶೂ-ಸಾಕ್ಸ್ ಕೊಡುವ ಮನಸ್ಸಿಲ್ಲ!

ದಿನಕ್ಕೊಂದು ಬಣ್ಣಬಣ್ಣದ ದುಬಾರಿ Louis Vuitton ಶಾಲು ಹಾಕುವ ಮುಖ್ಯಮಂತ್ರಿಗಳಿಗೆ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಶೂ-ಸಾಕ್ಸ್ ಕೊಡುವ ಮನಸ್ಸಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

ದಿನಕ್ಕೊಂದು ಬಣ್ಣಬಣ್ಣದ 'ದುಬಾರಿ ಶಾಲು' ಹಾಕುವ ಸಿಎಂ ಡಿಕೆಶಿಗೆ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಶೂ-ಸಾಕ್ಸ್ ಕೊಡುವ ಮನಸ್ಸಿಲ್ಲ!
ಸಿಎಂ ಡಿಕೆ ಶಿವಕುಮಾರ್ ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳಾದರೂ ಸರ್ಕಾರಿ ಶಾಲೆಯ ಮಕ್ಕಳಿಗೆ ಇನ್ನೂ ಶೂ- ಸಾಕ್ಸ್ ವಿತರಿಸಿಲ್ಲ. ಸಕ್ಕರೆ ಬೆಲೆ ಹೆಚ್ಚಾಗಿದೆ ಎಂಬ ನೆಪವೊಡ್ಡಿ ಕೆಲವೆಡೆ ರಾಗಿ ಗಂಜಿ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಈ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಿನಕ್ಕೊಂದು ಬಣ್ಣಬಣ್ಣದ ದುಬಾರಿ Louis Vuitton ಶಾಲು ಹಾಕುವ ಮುಖ್ಯಮಂತ್ರಿಗಳಿಗೆ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಶೂ-ಸಾಕ್ಸ್ ಕೊಡುವ ಮನಸ್ಸಿಲ್ಲ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ಲಕ್ಷಾಂತರ ರೂಪಾಯಿ ಮೌಲ್ಯದ Louis Vuitton ಬ್ರ್ಯಾಂಡ್ ಶಾಲು ಹೊದ್ದು ಮೆರೆಯುವ ನಿಮಗೆ, ಸರ್ಕಾರಿ ಶಾಲೆಯ ಬಡ ಮಕ್ಕಳು ಬರಿಗಾಲಿನಲ್ಲಿ ಶಾಲೆಗೆ ಹೋಗುತ್ತಿರುವುದು ಕಣ್ಣಿಗೆ ಕಾಣಿಸುತ್ತಿಲ್ಲವೇ? ಎಂದು ವಾಗ್ದಾಳಿ ನಡೆಸಿದ್ದಾರೆ.

ಶೈಕ್ಷಣಿಕ ವರ್ಷ ಆರಂಭವಾಗಿ 3 ತಿಂಗಳು ಕಳೆದರೂ ರಾಜ್ಯದ ಸರ್ಕಾರಿ ಶಾಲೆಯ ಮಕ್ಕಳಿಗೆ ಇದುವರೆಗೂ ಶೂ ಮತ್ತು ಸಾಕ್ಸ್ ವಿತರಿಸಿಲ್ಲ. 'ಸಕ್ಕರೆ ಬೆಲೆ ಹೆಚ್ಚಾಗಿದೆ' ಎಂಬ ಕ್ಷುಲ್ಲಕ ನೆಪವೊಡ್ಡಿ ಬಡ ಮಕ್ಕಳಿಗೆ ನೀಡುತ್ತಿದ್ದ ರಾಗಿ ಗಂಜಿಯನ್ನೂ ಕಸಿದುಕೊಂಡಿದ್ದೀರಿ. ಬಡ ಮಕ್ಕಳ ಹೊಟ್ಟೆಗೆ ಹೊಡೆದು, ಅವರ ಕಾಲಿಗೂ ಶೂ-ಸಾಕ್ಸ್ ಇಲ್ಲದಂತೆ ಮಾಡುವುದು ನಿಮ್ಮ ಗ್ಯಾರಂಟಿ ಸರ್ಕಾರದ ಸಾಧನೆಯೇ? ಎಂದು ಪ್ರಶ್ನಿಸಿದ್ದಾರೆ.

ಐಷಾರಾಮಿ ರಾಜಕಾರಣ, ಬಡ ಮಕ್ಕಳ ಶೋಷಣೆ: ಮುಖ್ಯಮಂತ್ರಿಗಳು ಮತ್ತು ಸಚಿವರು ಕುಮಾರಕೃಪಾ ನವೀಕರಣ, ಡಿನ್ನರ್ ಪಾರ್ಟಿಗಳಿಗೆ ಕೋಟಿ ಕೋಟಿ ಹಣವಿದೆ. ಆದರೆ, ಬಡ ಕುಟುಂಬಗಳ ಮಕ್ಕಳಿಗೆ ಒಂದು ಜೋಡಿ ಶೂ, ಸಾಕ್ಸ್ ಕೊಡಲು ಸರ್ಕಾರದ ಬಳಿ ಅನುದಾನವಿಲ್ಲವೇ?ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಮರೀಚಿಕೆಯಾದ ಮೂಲಸೌಕರ್ಯ: ಶಾಲೆಯಲ್ಲಿ ಶಿಕ್ಷಕರಿಲ್ಲ (61,000 ಹುದ್ದೆಗಳು ಖಾಲಿ), ಕುಡಿಯಲು ನೀರಿಲ್ಲ, ಶೌಚಾಲಯಗಳಿಲ್ಲ, ಈಗ ಕೊನೆಗೆ ಕಾಲಿಗೆ ಶೂ-ಸಾಕ್ಸ್ ಹಾಗೂ ನೀಡುತ್ತಿದ್ದ ರಾಗಿ ಗಂಜಿಯನ್ನೂ ಬಂದ್ ಮಾಡಿದ್ದೀರಿ. ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿ ಖಾಸಗಿ ಶಿಕ್ಷಣ ಮಾಫಿಯಾಗೆ ಅನುಕೂಲ ಮಾಡಿಕೊಡುವುದೇ ನಿಮ್ಮ ಸರ್ಕಾರದ ರಹಸ್ಯ ಅಜೆಂಡಾನಾ? ಬ್ರ್ಯಾಂಡೆಡ್ ಶಾಲು ಹೊದ್ದು ಮೆರೆಯುವ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಈ ಐಷಾರಾಮಿ ಉಡುಪುಗಳ ಹಿಂದೆ ಬಡ ಮಕ್ಕಳ ಕಣ್ಣೀರು ಮತ್ತು ಹಸಿವು ಅಡಗಿದೆ ಎಂದಿದ್ದಾರೆ.

ತಕ್ಷಣವೇ ಜಾಗೃತರಾಗಿ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೂ-ಸಾಕ್ಸ್ ವಿತರಿಸಿ ಮತ್ತು ರಾಗಿ ಗಂಜಿ ಯೋಜನೆಯನ್ನು ಪುನರಾರಂಭಿಸಿ. ಇಲ್ಲವಾದರೆ, ಬರಿಗಾಲಿನಲ್ಲಿ ಶಾಲೆಗೆ ಹೋಗುತ್ತಿರುವ ಲಕ್ಷಾಂತರ ಬಡ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಒಗ್ಗೂಡಿಸಿ, ನಿಮ್ಮ ನಾಲಾಯಕ್ ಸರ್ಕಾರದ ವಿರುದ್ಧ ಬಿಜಿಪಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.