ನನ್ನ ಮಗನಿಗೆ ವಾಚ್ ಮನ್ ಕೆಲಸ: ತಂದೆ ಕಳೆದುಕೊಂಡ ಕುಟುಂಬಕ್ಕೆ ಇದೇನಾ ಸಿಗಬೇಕಾದ ನ್ಯಾಯ?; ಮೃತ ಚಂದ್ರಶೇಖರ್ ಪತ್ನಿ
ನನ್ನ ಪತಿಯ ಸಾವು ರಾಜಕೀಯ ಪಕ್ಷಕ್ಕೆ ಲಾಭವಾಗಿದೆ. ಆದರೆ ಆ ಸಾವಿನಿಂದ ನಮ್ಮ ಕುಟುಂಬಕ್ಕೆ ಏನು ಸಿಕ್ಕಿದೆ? ಇಂದಿಗೂ ನಮ್ಮ ಬದುಕು ಅದೇ ನೋವಿನಲ್ಲಿದೆ. ನಾಗೇಂದ್ರ ಅವರು ಮತ್ತೆ ಸಚಿವರಾಗುವ ಮೊದಲು ನಮ್ಮ ಸಮಸ್ಯೆ ಬಗೆಹರಿಸಬಹುದಿತ್ತು.

ಶಿವಮೊಗ್ಗ: ನನ್ನ ಮಗನಿಗೆ ಒಳ್ಳೆಯ ಕೆಲಸ ಸಿಗಬಹುದು, ನಮ್ಮ ಕುಟುಂಬಕ್ಕೆ ಒಂದು ಆಸರೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಮಗನಿಗೆ ವಾಚ್‌ಮನ್ ಕೆಲಸ ನೀಡಲಾಗಿದೆ. ಒಬ್ಬ ತಂದೆಯನ್ನು ಕಳೆದುಕೊಂಡ ಕುಟುಂಬಕ್ಕೆ ಇದೇನಾ ಸಿಗಬೇಕಾದ ನ್ಯಾಯ? ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ದಿವಂಗತ ಚಂದ್ರಶೇಖರ್ ಅವರ ಪತ್ನಿ ಕವಿತಾ ಕಣ್ಣೀರಿನಿಂದ ನೋವು ತೋಡಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅವರ ರಾಜೀನಾಮೆ ಬಗ್ಗೆ ನಾನೇನು ಹೆಚ್ಚಿಗೆ ಹೇಳುವುದಿಲ್ಲ. ಆದರೆ ನನ್ನ ಪತಿ ಮೃತಪಟ್ಟ ಬಳಿಕ ನಮ್ಮ ಕುಟುಂಬಕ್ಕೆ ಸಿಗಬೇಕಾಗಿದ್ದ ಕಾನೂನುಬದ್ಧ ಪರಿಹಾರಕ್ಕಾಗಿ ನಾವು ಇನ್ನೂ ಅಲೆದಾಡುತ್ತಿದ್ದೇವೆ. ಬೆಂಗಳೂರಿಗೆ ಎಷ್ಟೋ ಬಾರಿ ಹೋಗಿ ಬಂದಿದ್ದೇವೆ. ಅಧಿಕಾರಿಗಳ ಕಚೇರಿಗಳ ಬಾಗಿಲು ತಟ್ಟಿದ್ದೇವೆ. ಆದರೂ ನಮ್ಮ ನೋವನ್ನು ಕೇಳುವವರು ಯಾರೂ ಇಲ್ಲ ಎಂದು ಅಳಲು ತೋಡಿಕೊಂಡರು.
ಇಂದು ಸಚಿವರಾಗುತ್ತಾರೆ, ನಾಳೆ ರಾಜೀನಾಮೆ ಕೊಡುತ್ತಾರೆ. ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಬಿ.ನಾಗೇಂದ್ರ ಅವರು ಮತ್ತೊಮ್ಮೆ ಸಚಿವರಾದಾಗಲಾದರೂ ನಮಗೆ ನ್ಯಾಯ ಸಿಗಬಹುದು ಎಂಬ ಸಣ್ಣ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಯೂ ಹುಸಿಯಾಗಿದೆ, ಅವರ ರಾಜೀನಾಮೆ ನಮಗೆ ಸಮಾಧಾನವನ್ನೂ ತಂದಿಲ್ಲ, ಸಂತೋಷವನ್ನೂ ತಂದಿಲ್ಲ. ಏಕೆಂದರೆ ನಮಗೆ ಬೇಕಾಗಿರುವುದು ರಾಜಕೀಯವಲ್ಲ, ನಮ್ಮ ಕುಟುಂಬಕ್ಕೆ ಸಿಗಬೇಕಾದ ನ್ಯಾಯ ಮತ್ತು ಪರಿಹಾರ ಎಂದು ಕವಿತಾ ಹೇಳಿದರು.
ನನ್ನ ಪತಿಯ ಸಾವು ರಾಜಕೀಯ ಪಕ್ಷಕ್ಕೆ ಲಾಭವಾಗಿದೆ. ಆದರೆ ಆ ಸಾವಿನಿಂದ ನಮ್ಮ ಕುಟುಂಬಕ್ಕೆ ಏನು ಸಿಕ್ಕಿದೆ? ಇಂದಿಗೂ ನಮ್ಮ ಬದುಕು ಅದೇ ನೋವಿನಲ್ಲಿದೆ. ನಾಗೇಂದ್ರ ಅವರು ಮತ್ತೆ ಸಚಿವರಾಗುವ ಮೊದಲು ನಮ್ಮ ಸಮಸ್ಯೆ ಬಗೆಹರಿಸಬಹುದಿತ್ತು. ನಮ್ಮ ಕುಟುಂಬಕ್ಕೆ ಸಿಗಬೇಕಾದ ಪರಿಹಾರ ಕೊಡಿಸಿ, ಬಳಿಕ ಅವರು ಅಧಿಕಾರ ಸ್ವೀಕರಿಸಿದ್ದರೆ ನಮಗೂ ನೆಮ್ಮದಿ ಸಿಗುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಚಂದ್ರಶೇಖರ್ ಅವರ ಪಿಎಫ್ ಹಣ, ಗ್ರ್ಯಾಚುಟಿ ಸೇರಿದಂತೆ ಕುಟುಂಬಕ್ಕೆ ಬರಬೇಕಾದ ಹಲವು ಮೊತ್ತಗಳು ಇನ್ನೂ ಬಂದಿಲ್ಲ. ಪತಿಯ ಅಗಲಿಕೆಯ ಬಳಿಕ ಕುಟುಂಬದ ಜವಾಬ್ದಾರಿ ಸಂಪೂರ್ಣವಾಗಿ ತಮ್ಮ ಹೆಗಲ ಮೇಲೆ ಬಿದ್ದಿದ್ದು, ಮಕ್ಕಳ ಭವಿಷ್ಯದ ಬಗ್ಗೆಯೂ ಆತಂಕ ಎದುರಾಗಿದೆ ಎಂದು ಕವಿತಾ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



