Hanur ಶೂಟೌಟ್ ಕೇಸ್: ಇಬ್ಬರ ಮೇಲೆ ಬಹಳ ಹತ್ತಿರದಿಂದ ಗುಂಡು ಹಾರಿಸಿರುವುದು ದೃಢ; ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಹಿರಂಗ...!
ಘಟನೆಯಲ್ಲಿ ಮೃತಪಟ್ಟ ಮೂವರ ಪೈಕಿ ಕನಿಷ್ಠ ಇಬ್ಬರ ಮೇಲೆ ಅತ್ಯಂತ ಹತ್ತಿರದಿಂದ (Close range) ಗುಂಡು ಹಾರಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ (Autopsy) ವರದಿ ಬಹಿರಂಗಪಡಿಸಿದೆ.

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.
ಘಟನೆಯಲ್ಲಿ ಮೃತಪಟ್ಟ ಮೂವರ ಪೈಕಿ ಕನಿಷ್ಠ ಇಬ್ಬರ ಮೇಲೆ ಅತ್ಯಂತ ಹತ್ತಿರದಿಂದ (Close range) ಗುಂಡು ಹಾರಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ (Autopsy) ವರದಿ ಬಹಿರಂಗಪಡಿಸಿದೆ.
ಈ ವರದಿಯು ಅರಣ್ಯ ಇಲಾಖೆಯ ಆರಂಭಿಕ ಹೇಳಿಕೆಗಳನ್ನು ಸಂಪೂರ್ಣವಾಗಿ ಸುಳ್ಳಾಗಿಸಿದ್ದು, ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಮರಣೋತ್ತರ ಪರೀಕ್ಷೆಯ ಪ್ರಕಾರ, ಮೃತಪಟ್ಟ ಮೂವರಲ್ಲಿ ಸೆಬಾಸ್ಟಿಯನ್ ಡೇವಿಡ್ ಕುಮಾರ್ (36) ಮತ್ತು ಆಂಥೋನಿಸ್ವಾಮಿ ಪಿ. (50) ಅವರಿಗೆ ಹತ್ತಿರದಿಂದ ಶಾಟ್‌ಗನ್‌ನಿಂದ ಗುಂಡು ಹಾರಿಸಲಾಗಿತ್ತು. ಇಬ್ಬರೂ ಗಾಯಗಳಿಂದ ಉಂಟಾದ ಅತಿಯಾದ ರಕ್ತಸ್ರಾವ ಮತ್ತು ಆಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಸೆಬಾಸ್ಟಿಯನ್, ಆಂಥೋನಿಸ್ವಾಮಿ ಹಾಗೂ ಜಾನ್ ರೋಸ್ ಪೀಟರ್ (42) ಎಂಬ ಮೂವರನ್ನು ಆಗಸ್ಟ್ 15ರಂದು ಕರ್ನಾಟಕ-ತಮಿಳುನಾಡು ಗಡಿ ಸಮೀಪದ ಕಾವೇರಿ ವನ್ಯಜೀವಿ ಧಾಮದೊಳಗೆ ಅರಣ್ಯ ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇವರೊಂದಿಗೆ ಇದ್ದ ಎನ್ನಲಾದ ಮತ್ತೊಬ್ಬ ವ್ಯಕ್ತಿ ಮಹಿಮಾ ದಾಸ್ ಸ್ಥಳದಿಂದ ಪರಾರಿಯಾಗಿದ್ದ.
ಈ ನಾಲ್ವರು ಶಸ್ತ್ರಾಸ್ತ್ರಗಳೊಂದಿಗೆ ಕಾಡಿನೊಳಗೆ ಪ್ರವೇಶಿಸಿ ಜಿಂಕೆಯನ್ನು ಬೇಟೆಯಾಡಿದ್ದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಸಿದ್ದರು.
ಅವರನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಶರಣಾಗುವಂತೆ ಸೂಚಿಸಿದಾಗ, ಅವರು ಪ್ರತಿಯಾಗಿ ಗುಂಡು ಹಾರಿಸಿದರು. ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದು, ಪರಿಣಾಮ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು.
ಆದರೆ, ಇದೀಗ ಬಹಿರಂಗವಾಗಿರುವ ಮರಣೋತ್ತರ ಪರೀಕ್ಷೆ ವರದಿಗಳು ಅರಣ್ಯ ಇಲಾಖೆಯ ಈ ಹೇಳಿಕೆಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಸೆಬಾಸ್ಟಿಯನ್ ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲಿ, ಅವರ ಎದೆಯ ಮುಂಭಾಗದಲ್ಲಿ ಗುಂಡಿನಿಂದ ಆಳವಾಗಿ ಗಾಯವಾಗಿದ್ದು, ಇದರಿಂದ ಪಕ್ಕೆಲುಬುಗಳು ಮುರಿದಿವೆ ಎಂದು ಉಲ್ಲೇಖಿಸಲಾಗಿದೆ. ಈ ಗಾಯವು ಹತ್ತಿರದಿಂದ ಹಾರಿಸಲಾದ ಗುಂಡಿನಿಂದ ಉಂಟಾಗಿದೆ ಎಂದು ವರದಿ ತಿಳಿಸಿದೆ.
ಆಂಥೋನಿಸ್ವಾಮಿ ಅವರ ಮರಣೋತ್ತರ ಪರೀಕ್ಷೆಯಲ್ಲೂ ಹೊಟ್ಟೆಯ ಒಳಭಾಗದವರೆಗೆ ಗುಂಡು ತಲುಪಿ ಗಾಯವಾಗಿದೆ ಎಂದು ತಿಳಿಸಲಾಗಿದೆ.
ಇನ್ನು ಜಾನ್ ಪೀಟರ್ ಅವರ ಸಿಟಿ ಸ್ಕ್ಯಾನ್‌ನಲ್ಲಿ ಹಲವು ಸಣ್ಣ ಗಾಯಗಳು ಕಂಡುಬಂದಿದ್ದು, ಅವು ಗುಂಡಿನ ದಾಳಿಯಿಂದ ಉಂಟಾದ ಗಾಯಗಳಿಗೆ ಹೊಂದಿಕೆಯಾಗುತ್ತವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮೂವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಈ ಗುಂಡಿನ ದಾಳಿ ಪ್ರಕರಣ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಪ್ರತಿಕ್ರಿಯೆಗಳಿಗೆ ಕಾರಣವಾಗಿದ್ದು, ಇದೀಗ ಮರಣೋತ್ತರ ಪರೀಕ್ಷೆ ವರದಿಯಲ್ಲಿರುವ ಅಂಶಗಳು ಪ್ರಕರಣದ ತನಿಖೆಯ ಕುರಿತು ಮತ್ತಷ್ಟು ಚರ್ಚೆಗೆ ಕಾರಣವಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



