ಮನೆ ಮುಂದೆ ನಿಲ್ಲಿಸೋ ವಾಹನಗಳಿಗೆ ಪಾರ್ಕಿಂಗ್ ಶುಲ್ಕ: ರಾಮಲಿಂಗಾರೆಡ್ಡಿ ತೀವ್ರ ಆಕ್ಷೇಪ; CM ಡಿಕೆಶಿಗೆ ಪತ್ರ
ವರ್ಷಕ್ಕೆ 15,000 ರಿಂದ 25,000 ರೂ.ಗಳವರೆಗೆ ಪಾರ್ಕಿಂಗ್ ಶುಲ್ಕವಿಧಿಸುವ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ರಾಮಲಿಂಗಾ ರೆಡ್ಡಿ ಅವರು ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ಮನೆ ಮುಂದೆ ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ ವಿಧಿಸುವ ಪ್ರಸ್ತಾವಕ್ಕೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ವರ್ಷಕ್ಕೆ 15,000 ರಿಂದ 25,000 ರೂ.ಗಳವರೆಗೆ ಪಾರ್ಕಿಂಗ್ ಶುಲ್ಕವಿಧಿಸುವ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ರಾಮಲಿಂಗಾ ರೆಡ್ಡಿ ಅವರು ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಇದು ಮಧ್ಯಮ ವರ್ಗದ ಮತ್ತು ಸಾಮಾನ್ಯ ಕುಟುಂಬಗಳಿಗೆ ಆರ್ಥಿಕ ಹೊರೆಯಾಗುತ್ತದೆ ಎಂದು ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.
ಆಗಸ್ಟ್ 24 ರಂದು ಬರೆದ ಪತ್ರದಲ್ಲಿ, ರಾಮಲಿಂಗಾ ರೆಡ್ಡಿ ಅವರು, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ಸಂಚಾರ ಸಮಸ್ಯೆಗಳ ನಡುವೆ ರಸ್ತೆಬದಿಯ ಪಾರ್ಕಿಂಗ್ ಅನ್ನು ನಿಯಂತ್ರಿಸುವ ಅಗತ್ಯವನ್ನು ಒಪ್ಪಿಕೊಂಡಿದ್ದಾರೆ. ಆದರೆ ಸಾಮಾನ್ಯ ನಾಗರಿಕರ ಆರ್ಥಿಕ ಪರಿಸ್ಥಿತಿಯನ್ನು ಕೂಡ ಪರಿಗಣಿಸುವುದು ಅಗತ್ಯ ಎಂದು ಹೇಳಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಜಿಎಸ್‌ಟಿ ಹಾಗೂ ಟೋಲ್‌ಗಳ ಮೇಲಿನ ಹೆಚ್ಚಿದ ವೆಚ್ಚಗಳಿಂದಾಗಿ ಮಧ್ಯಮ ವರ್ಗ ಮತ್ತು ಸಾಮಾನ್ಯ ಕುಟುಂಬಗಳು ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಿದರೆ ಜನರಿಗೆ ಮತ್ತಷ್ಟು ಹೊರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೊಡ್ಡ ನಿವೇಶನ ಅಥವಾ ಸ್ವಂತ ಮನೆ ಹೊಂದಿರುವ ಕೆಲವರಿಗೆ ತಮ್ಮ ವಾಹನಗಳನ್ನು ಮನೆಯ ಆವರಣದಲ್ಲೇ ನಿಲ್ಲಿಸಲು ಸಾಧ್ಯವಾಗಬಹುದು. ಬಹುತೇಕ ಮಧ್ಯಮ ವರ್ಗದ ಕುಟುಂಬಗಳು ಸೀಮಿತ ಜಾಗದ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದು, ವಾಹನ ನಿಲ್ಲಿಸಲು ಆವರಣದೊಳಗೆ ಸ್ಥಳಾವಕಾಶದ ಕೊರತೆ ಇರುತ್ತದೆ. ಹೊಸ ಕಟ್ಟಡ ನಿರ್ಮಾಣದ ನಿಯಮಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಒತ್ತು ನೀಡಿರುವುದು ಸ್ವಾಗತಾರ್ಹ. ಹಳೆಯ ಕಟ್ಟಡ, ವಸತಿ ಪ್ರದೇಶಗಳಲ್ಲಿ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದು ಕಷ್ಟ. ಅನೇಕ ಕುಟುಂಬಗಳು ಈಗಾಗಲೇ ಮನೆ ಸಾಲ, ವಾಹನ ಸಾಲ, ಮಕ್ಕಳ ಶಿಕ್ಷಣ, ಆರೋಗ್ಯ, ದೈನಂದಿನ ವೆಚ್ಚಗಳನ್ನು ನಿರ್ವಹಿಸಲು ಕಷ್ಟಪಡುತ್ತಿವೆ ಎಂದು ಸಚಿವರು ಸಿಎಂ ಗಮನ ಸೆಳೆದಿದ್ದಾರೆ.
ಅಕ್ರಮ ಮತ್ತು ದೀರ್ಘಾವಧಿಯ ರಸ್ತೆ ಬದಿ ಪಾರ್ಕಿಂಗ್ ನಿಯಂತ್ರಿಸಬೇಕು. ಮನೆ ಆವರಣದಲ್ಲಿ ವಾಹನ ನಿಲ್ಲಿಸಲು ಜಾಗ ಇಲ್ಲದ ಸಾಮಾನ್ಯ ಕುಟುಂಬಗಳಿಗೆ ವಿನಾಯಿತಿ ನೀಡಬೇಕು. ಈ ಬಗ್ಗೆ ಬೆಂಗಳೂರು ನಗರದ ಶಾಸಕರು, ಸಂಘ- ಸಂಸ್ಥೆಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




