ರಾಜ್ಯ

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಫಾರ್ಮಸಿ ಮಾಲೀಕನ ಹತ್ಯೆ; 'ಪ್ರತೀಕಾರದ' ಕೃತ್ಯ ಶಂಕೆ

ದಾಳಿಯಲ್ಲಿ ಸುಹೇಲ್‌ಗೆ ಗಂಭೀರ ಗಾಯಗಳಾಗಿದ್ದು, ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಂತಕರು ದಾಳಿ ನಡೆಸಿದ ಬಳಿಕ ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಫಾರ್ಮಸಿ ಮಾಲೀಕನ ಹತ್ಯೆ; 'ಪ್ರತೀಕಾರದ' ಕೃತ್ಯ ಶಂಕೆ
Published On :

ಬೆಂಗಳೂರು: ನಗರದ ಮಡಿವಾಳ ಅಂಡರ್‌ಪಾಸ್‌ ಸಮೀಪ ಶನಿವಾರ ರಾತ್ರಿ 35 ವರ್ಷದ ಮೆಡಿಕಲ್‌ ಸ್ಟೋರ್‌ ಮಾಲೀಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಹಿಂದೆ ಭಾಗಿಯಾಗಿದ್ದ ಕೊಲೆ ಪ್ರಕರಣಕ್ಕೆ ಪ್ರತೀಕಾರವಾಗಿ ಈ ಕೃತ್ಯ ನಡೆದಿರಬಹುದು ಎಂದು ಮೃತನ ಸಹೋದರರು ಪೊಲೀಸರು ಶಂಕಿಸಿದ್ದಾರೆ.

ಮೃತರನ್ನು ಮಂಗಮ್ಮನಪಾಳ್ಯದ ನಿವಾಸಿ ಸುಹೇಲ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ರಾತ್ರಿ 10ರ ಸುಮಾರಿಗೆ ಸುಹೇಲ್‌ ಮಡಿವಾಳದಿಂದ ಕೋರಮಂಗಲದತ್ತ ತೆರಳುತ್ತಿದ್ದಾಗ, ಸಂಚಾರ ದಟ್ಟಣೆಯ ನಡುವೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಆತನನ್ನು ಅಡ್ಡಗಟ್ಟಿ ಕತ್ತಿಗಳಿಂದ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯಲ್ಲಿ ಸುಹೇಲ್‌ಗೆ ಗಂಭೀರ ಗಾಯಗಳಾಗಿದ್ದು, ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಂತಕರು ದಾಳಿ ನಡೆಸಿದ ಬಳಿಕ ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 13ರಂದು ಬಂಡೇಪಾಳ್ಯದಲ್ಲಿ ಶಬ್ಬೀರ್ ಎಂಬ ರೌಡಿಶೀಟರ್‌ ಹತ್ಯೆಯಾಗಿದ್ದ ಪ್ರಕರಣಕ್ಕೂ ಈ ಕೊಲೆಗೂ ಸಂಬಂಧವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶಬ್ಬೀರ್‌ನನ್ನು ಸುಹೇಲ್‌ ಸಹೋದರರಾದ ಕಲೀಂ (28ವ) ಮತ್ತು ನಜೀರ್ (26ವ) ಹಾಗೂ ಮತ್ತೊಬ್ಬ ಸಹಚರ ಹತ್ಯೆ ಮಾಡಿದ್ದರು ಎನ್ನಲಾಗಿದೆ. ಶಬ್ಬೀರ್‌ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಸುಹೇಲ್‌ನನ್ನು ಗುರಿಯಾಗಿಸಿಕೊಂಡಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಆದರೆ, ಸುಹೇಲ್‌ ವಿರುದ್ಧ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ ಮತ್ತು ಶಬ್ಬೀರ್‌ ಹತ್ಯೆ ಪ್ರಕರಣದಲ್ಲಿ ಅವರು ನೇರವಾಗಿ ಭಾಗಿಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಹೋದರರ ಕಾರಣಕ್ಕಾಗಿ ಸುಹೇಲ್‌ನನ್ನು ಗುರಿಯಾಗಿಸಲಾಗಿತ್ತೇ ಎಂಬ ಅಂಶವೂ ತನಿಖೆಯಲ್ಲಿದೆ.

ಮಡಿವಾಳ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಬಿ. ಸತೀಶ್‌ , ಹತ್ಯೆಯನ್ನು ಪೂರ್ವಯೋಜಿತವಾಗಿ ನಡೆಸಿರುವ ಸಾಧ್ಯತೆಯಿದೆ. ದಾಳಿ ನಡೆಸುವ ಮುನ್ನ ಆರೋಪಿಗಳು ಸುಹೇಲ್‌ನ ಚಲನವಲನಗಳನ್ನು ಗಮನಿಸುತ್ತಿದ್ದರೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಅಂಗಡಿ ಮುಚ್ಚಿದ ಬಳಿಕ ರಾತ್ರಿ 10ರ ಸುಮಾರಿಗೆ ಸುಹೇಲ್‌ ಬೈಕ್‌ನಲ್ಲಿ ತೆರಳುತ್ತಿದ್ದಾಗ ದಾಳಿ ನಡೆದಿದೆ ಎಂದು ತಿಳಿಸಿದ್ದಾರೆ.

ಘಟನೆ ಬಳಿಕ ತಮಿಳುನಾಡಿನಲ್ಲಿ ಅಡಗಿರುವ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಡಿಸಿಪಿ ಸುಜಿತಾ, ಸಿಸಿಬಿ ಡಿಸಿಪಿ ಹರಿಬಾಬು ಹಾಗೂ ಜಂಟಿ ಪೊಲೀಸ್‌ ಆಯುಕ್ತ ರಮೇಶ್‌ ಬನೋತ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆಯ ಪ್ರಗತಿಯನ್ನು ಪರಿಶೀಲಿಸಿದರು.

ಪೊಲೀಸರು ಘಟನಾ ಪ್ರದೇಶದ ಸಿಸಿಟಿವಿ ದೃಶ್ಯಗಳು ಮತ್ತು ಡಿವಿಆರ್‌ಗಳನ್ನು ವಶಕ್ಕೆ ಪಡೆದು, ಹತ್ಯೆಗೂ ಮುನ್ನ ಹಾಗೂ ಬಳಿಕ ಆರೋಪಿಗಳ ಚಲನವಲನಗಳನ್ನು ಪರಿಶೀಲಿಸುತ್ತಿದ್ದಾರೆ.

ಬೊಮ್ಮನಹಳ್ಳಿಯಲ್ಲಿ ಸುಹೇಲ್‌ ಅವರ ಮೆಡಿಕಲ್‌ ಸ್ಟೋರ್‌ ಇದ್ದರೂ ಅವರು ಮಡಿವಾಳದತ್ತ ಏಕೆ ತೆರಳಿದ್ದರು, ಹತ್ಯೆಗೂ ಮುನ್ನ ಅವರನ್ನು ಯಾರು ಸಂಪರ್ಕಿಸಿದ್ದರು ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಅವರ ಮೊಬೈಲ್‌ ಕರೆ ದಾಖಲೆಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ಹತ್ಯೆಯ ಉದ್ದೇಶ ಮತ್ತು ಆರೋಪಿಗಳ ಗುರುತನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.