ಕೈಕೊಟ್ಟ ಮುಂಗಾರು: 28 ಕೋಟಿ ರೂ ವೆಚ್ಚದಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್..!
KSNDMC ವರದಿ ಪ್ರಕಾರ, ಜೂನ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಶೇ.42ರಷ್ಟು ಮಳೆ ಕೊರತೆ ದಾಖಲಾಗಿತ್ತು. ಜುಲೈ ಅಂತ್ಯದ ವೇಳೆಗೆ ಮಳೆ ಕೊರತೆ ಶೇ.29ರಷ್ಟಿತ್ತು.

ಬೆಂಗಳೂರು: ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ 60 ದಿನಗಳ ಕಾಲ 28 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ (Cloud Seeding) ಕಾರ್ಯಾಚರಣೆ ನಡೆಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕಾವೇರಿ ನೀರಾವರಿ ನಿಗಮದ ಮೇಲ್ವಿಚಾರಣೆಯಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆ ನಡೆಯಲಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ವೈಜ್ಞಾನಿಕ ಹಾಗೂ ತಾಂತ್ರಿಕ ನೆರವು ನೀಡಲಿದೆ.
ಕಡಿಮೆ ಮಳೆಯ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದ ಸಭೆಗಳಲ್ಲಿ ಜನಪ್ರತಿನಿಧಿಗಳು ಮನವಿ ಮಾಡಿದ್ದರು. ಇದರ ಆಧಾರದ ಮೇಲೆ ಮೆಸರ್ಸ್ ಕ್ಯಾಥಿ ಕ್ಲೈಮೇಟ್ ಮಾರ್ಪಾಡಿಫಿಕೇಶನ್ ಕನ್ಸಲ್ಟೆಂಟ್ಸ್ ಎಲ್‌ಎಲ್‌ಪಿ (ಕೆಸಿಎಂಸಿ) ಆಗಸ್ಟ್ 13ರಂದು ಪ್ರಸ್ತಾವನೆ ಸಲ್ಲಿಸಿತ್ತು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದೆ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ‘ವರ್ಷಧಾರೆ’ ಮೋಡ ಬಿತ್ತನೆ ಯೋಜನೆ ಹಾಗೂ ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಉಷ್ಣವಲಯ ಹವಾಮಾನಶಾಸ್ತ್ರ ಸಂಸ್ಥೆ (IITM) ಕೈಗೊಂಡಿದ್ದ CAIPEEX (Cloud Aerosol Interaction and Precipitation Enhancement Experiment) ಯೋಜನೆಯ ಫಲಿತಾಂಶಗಳನ್ನು ಆಧರಿಸಿ KSNDMC ‘ಕರ್ನಾಟಕ ತುರ್ತು ಮೋಡ ಬಿತ್ತನೆ ಕಾರ್ಯಕ್ರಮ-2026’ ರೂಪಿಸಿದೆ.
ಕಾರ್ಯಾಚರಣೆಗೆ DGCA ಅನುಮೋದಿತ ಮೋಡ ಬಿತ್ತನೆ ವಿಮಾನ, ಭಾರತೀಯ ಹವಾಮಾನ ಇಲಾಖೆ (IMD)ಯ ಹವಾಮಾನ ರಾಡಾರ್‌ಗಳು ಹಾಗೂ KSNDMCಯ ಹವಾಮಾನ ವೀಕ್ಷಣಾ ಜಾಲವನ್ನು ಬಳಸಿಕೊಳ್ಳಲಾಗುತ್ತದೆ.
KSNDMC ವರದಿ ಪ್ರಕಾರ, ಜೂನ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಶೇ.42ರಷ್ಟು ಮಳೆ ಕೊರತೆ ದಾಖಲಾಗಿತ್ತು. ಜುಲೈ ಅಂತ್ಯದ ವೇಳೆಗೆ ಮಳೆ ಕೊರತೆ ಶೇ.29ರಷ್ಟಿತ್ತು.
ರಾಜ್ಯದ ಒಟ್ಟು 31 ಜಿಲ್ಲೆಗಳ ಪೈಕಿ 27 ಜಿಲ್ಲೆಗಳ 178 ತಾಲೂಕುಗಳಲ್ಲಿ ಮಳೆ ಕೊರತೆ ಎದುರಾಗಿದೆ ಎಂದು ವರದಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



