ಸನ್ನಡತೆಗೆ ಮನ್ನಣೆ: ರಾಜ್ಯದಲ್ಲಿ 3.5 ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ರೌಡಿಶೀಟ್ ಕ್ಲೋಸ್!
2025ರಲ್ಲಿ 2,437 ಹೊಸ ರೌಡಿಶೀಟ್‌ಗಳು ತೆರೆಯಲ್ಪಟ್ಟಿದ್ದು, 6,426 ಕ್ಲೋಸ್ ಮಾಡಲಾಗಿದೆ. 2026ರ ಜುಲೈ 31ರವರೆಗೆ 1,627 ರೌಡಿಶೀಟ್‌ಗಳನ್ನು ತೆರೆಯಲಾಗಿದ್ದು, 1,954ನ್ನು ಕ್ಲೋಸ್ ಮಾಡಲಾಗಿದೆ.

ಮಂಗಳೂರು: ಕರ್ನಾಟಕದಲ್ಲಿ ರೌಡಿಶೀಟರ್‌ಗಳ ವಿರುದ್ಧದ ಪೊಲೀಸ್ ನಿಗಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ.
ಕಳೆದ ಮೂರೂವರೆ ವರ್ಷಗಳಲ್ಲಿ ಹೊಸದಾಗಿ ತೆರೆಯಲಾದ ರೌಡಿಶೀಟ್‌ಗಳಿಗಿಂತ ಎರಡು ಪಟ್ಟು ಹೆಚ್ಚು ರೌಡಿಶೀಟ್‌ಗಳನ್ನು ಮುಚ್ಚಲಾಗಿದ್ದು, ರಾಜ್ಯದಲ್ಲಿ ಸಕ್ರಿಯ ರೌಡಿಶೀಟರ್‌ಗಳ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ.
ವಿಧಾನಮಂಡಲ ಅಧಿವೇಶನದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿದ ಅಂಕಿ-ಅಂಶಗಳು ಈ ಮಾಹಿತಿಯನ್ನು ಬಹಿರಂಗಪಡಿಸಿವೆ.
ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳಿ ಅವರು ವಿಧಾನಮಂಡಲ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಅಂಕಿ-ಅಂಶಗಳು ತಿಳಿದುಬಂದಿದೆ.
2023ರಲ್ಲಿ 4,083 ರೌಡಿಶೀಟ್‌ಗಳನ್ನು ತೆರೆಯಲಾಗಿದ್ದರೆ, 11,676 ರೌಡಿಶೀಟ್‌ಗಳನ್ನು ಮುಚ್ಚಲಾಗಿದೆ. 2024ರಲ್ಲಿ ಹೊಸದಾಗಿ ತೆರೆಯಲಾದ ರೌಡಿಶೀಟ್‌ಗಳ ಸಂಖ್ಯೆ 2,518ಕ್ಕೆ ಇಳಿದಿದ್ದು, 5,243 ರೌಡಿಶೀಟ್‌ಗಳನ್ನು ಕ್ಲೋಸ್ ಮಾಡಲಾಗಿದೆ.
2025ರಲ್ಲಿ 2,437 ಹೊಸ ರೌಡಿಶೀಟ್‌ಗಳು ತೆರೆಯಲ್ಪಟ್ಟಿದ್ದು, 6,426 ಕ್ಲೋಸ್ ಮಾಡಲಾಗಿದೆ. 2026ರ ಜುಲೈ 31ರವರೆಗೆ 1,627 ರೌಡಿಶೀಟ್‌ಗಳನ್ನು ತೆರೆಯಲಾಗಿದ್ದು, 1,954ನ್ನು ಕ್ಲೋಸ್ ಮಾಡಲಾಗಿದೆ.
ರಾಜ್ಯದಲ್ಲಿ ಸಕ್ರಿಯ ರೌಡಿಶೀಟರ್‌ಗಳ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ. 2023ರಲ್ಲಿ 47,054 ಇದ್ದ ಸಕ್ರಿಯ ರೌಡಿಶೀಟರ್‌ಗಳ ಸಂಖ್ಯೆ 2024ರಲ್ಲಿ 42,715ಕ್ಕೆ, 2025ರಲ್ಲಿ 38,279ಕ್ಕೆ ಇಳಿದಿದ್ದು, 2026ರ ಜುಲೈ 31ರ ವೇಳೆಗೆ 37,243ಕ್ಕೆ ಕುಸಿದಿದೆ.
ಮುಂಚೂಣಿಯಲ್ಲಿ ಹುಬ್ಬಳ್ಳಿ-ಧಾರವಾಡ
ಪೊಲೀಸ್ ವ್ಯಾಪ್ತಿಗಳ ಪೈಕಿ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ರೌಡಿಶೀಟರ್‌ಗಳ ಸಂಖ್ಯೆಯಲ್ಲಿ ಅತಿ ದೊಡ್ಡ ಇಳಿಕೆ ದಾಖಲಾಗಿದೆ. 2023ರಲ್ಲಿ 2,281 ಇದ್ದ ಸಂಖ್ಯೆ 2026ರಲ್ಲಿ 763ಕ್ಕೆ ಇಳಿದಿದೆ.
ಕಲಬುರಗಿ ಗ್ರಾಮಾಂತರದಲ್ಲಿ 2,215ರಿಂದ 1,241ಕ್ಕೆ, ಮಂಡ್ಯದಲ್ಲಿ 1,841ರಿಂದ 966ಕ್ಕೆ, ದಾವಣಗೆರೆಯಲ್ಲಿ 1,164ರಿಂದ 471ಕ್ಕೆ, ಕೆಜಿಎಫ್‌ನಲ್ಲಿ 1,068ರಿಂದ 496ಕ್ಕೆ, ದಕ್ಷಿಣ ಕನ್ನಡದಲ್ಲಿ 1,111ರಿಂದ 569ಕ್ಕೆ ಹಾಗೂ ಉಡುಪಿಯಲ್ಲಿ 1,154ರಿಂದ 673ಕ್ಕೆ ಇಳಿಕೆಯಾಗಿದೆ.
ಇನ್ನು ಬೆಂಗಳೂರು ನಗರದಲ್ಲಿ 7,320ರಿಂದ 6,952ಕ್ಕೆ ಹಾಗೂ ಕಲಬುರಗಿ ನಗರದಲ್ಲಿ 1,498ರಿಂದ 1,180ಕ್ಕೆ ಸಕ್ರಿಯ ರೌಡಿಶೀಟರ್‌ಗಳ ಸಂಖ್ಯೆ ಕಡಿಮೆಯಾಗಿದೆ.
ಆದರೆ, ಕೆಲವು ಪೊಲೀಸ್ ವ್ಯಾಪ್ತಿಗಳಲ್ಲಿ ಸಕ್ರಿಯ ರೌಡಿಶೀಟರ್‌ಗಳ ಸಂಖ್ಯೆ ಹೆಚ್ಚಾಗಿದೆ. ಹಾಸನದಲ್ಲಿ 1,416ರಿಂದ 1,625ಕ್ಕೆ, ತುಮಕೂರಿನಲ್ಲಿ 809ರಿಂದ 938ಕ್ಕೆ, ಗದಗದಲ್ಲಿ 514ರಿಂದ 525ಕ್ಕೆ ಮತ್ತು ಧಾರವಾಡದಲ್ಲಿ 268ರಿಂದ 280ಕ್ಕೆ ಏರಿಕೆಯಾಗಿದೆ. ಉಳಿದ ಬಹುತೇಕ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ಬದಲಾವಣೆ ಕಂಡುಬಂದಿದೆ.
2026ರಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ 265 ಹೊಸ ರೌಡಿಶೀಟ್‌ಗಳನ್ನು ತೆರೆಯಲಾಗಿದ್ದರೆ, 830ನ್ನು ಮುಚ್ಚಲಾಗಿದೆ. ಕಲಬುರಗಿ ಗ್ರಾಮಾಂತರದಲ್ಲಿ ಕೇವಲ 4 ಹೊಸ ರೌಡಿಶೀಟ್ ತೆರೆಯಲಾಗಿದ್ದು, 318ನ್ನು ಬಂದ್ ಮಾಡಲಾಗಿದೆ. ಕೆಜಿಎಫ್‌ನಲ್ಲಿ 18 ತೆರೆಯಲಾಗಿದ್ದು, 190 ರೌಡಿಶೀಟ್‌ಗಳನ್ನು ಮುಚ್ಚಲಾಗಿದೆ.
ರೌಡಿಶೀಟ್ ತೆರೆಯುವುದು, ಪರಿಶೀಲಿಸುವುದು ಹಾಗೂ ಮುಚ್ಚುವ ಪ್ರಕ್ರಿಯೆಗೆ ಕರ್ನಾಟಕ ಪೊಲೀಸ್ ಕೈಪಿಡಿಯ ಆದೇಶ ಸಂಖ್ಯೆ 1059 ಹಾಗೂ ಹೈಕೋರ್ಟ್ ಮಾರ್ಗಸೂಚಿಗಳನ್ನು ರಾಜ್ಯದಲ್ಲಿ ಪಾಲಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿರುವವರು, ಕೊಲೆ, ಕೊಲೆ ಯತ್ನ, ಸುಲಿಗೆ, ಅಪಹರಣ ಸೇರಿದಂತೆ ಗಂಭೀರ ಅಪರಾಧಗಳನ್ನು ಪದೇಪದೇ ಎಸಗುವವರು ಹಾಗೂ ಬೆದರಿಕೆ, ಕೋಮು ಹಿಂಸಾಚಾರ ಸೇರಿದಂತೆ ಇತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ರೌಡಿಶೀಟ್ ತೆರೆಯಬಹುದು. ಇದಕ್ಕಾಗಿ ಕನಿಷ್ಠ ಎರಡು ಗಂಭೀರ ಎಫ್‌ಐಆರ್‌ಗಳು ಅಥವಾ ಚಾರ್ಜ್‌ಶೀಟ್‌ಗಳು ಇರಬೇಕು ಹಾಗೂ ಡಿವೈಎಸ್‌ಪಿ ಅಥವಾ ಎಸಿಪಿಯ ಲಿಖಿತ ಅನುಮೋದನೆ ಅಗತ್ಯವಾಗಿದೆ.
ಎಸಿಪಿ ಅಥವಾ ಡಿವೈಎಸ್‌ಪಿ ಮಟ್ಟದ ಅಧಿಕಾರಿಗಳು ವರ್ಷಕ್ಕೊಮ್ಮೆ ರೌಡಿಶೀಟ್‌ಗಳನ್ನು ಪರಿಶೀಲಿಸುತ್ತಾರೆ. ವ್ಯಕ್ತಿಯು 10 ವರ್ಷಗಳ ಕಾಲ ಉತ್ತಮ ನಡವಳಿಕೆಯಿಂದಿದ್ದು ಯಾವುದೇ ಅಪರಾಧದಲ್ಲಿ ಭಾಗಿಯಾಗದಿದ್ದರೆ, ನ್ಯಾಯಾಲಯದಿಂದ ಖುಲಾಸೆಗೊಂಡಿದ್ದರೆ, ವೃದ್ಧಾಪ್ಯ ಅಥವಾ ಗಂಭೀರ ಅನಾರೋಗ್ಯದಿಂದ ಅಪರಾಧ ಚಟುವಟಿಕೆ ನಡೆಸಲು ಅಸಮರ್ಥನಾಗಿದ್ದರೆ ಅಥವಾ ಮೃತಪಟ್ಟಿದ್ದರೆ ರೌಡಿಶೀಟ್‌ನ್ನು ಮುಚ್ಚಬಹುದು.
ಮುಚ್ಚಲಾದ ರೌಡಿಶೀಟ್‌ಗಳನ್ನು ನಿಷ್ಕ್ರಿಯ ಕಡತಗಳಾಗಿ ಸಂರಕ್ಷಿಸಲಾಗುತ್ತದೆ. ವ್ಯಕ್ತಿ ಮತ್ತೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದರೆ, ಆ ರೌಡಿಶೀಟ್‌ನ್ನು ಪುನಃ ಸಕ್ರಿಯಗೊಳಿಸಲು ಅವಕಾಶವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



