ಹಲ್ದ್ವಾನಿ 'ಶುದ್ಧೀಕರಣ' ವಿವಾದ: ನಿಷ್ಪಕ್ಷಪಾತ ತನಿಖೆಗೆ ಸಚಿವ ಮುನಿಯಪ್ಪ ಆಗ್ರಹ
ಅಸ್ಪೃಶ್ಯತೆ ಹಾಗೂ ಜಾತಿ ಆಧಾರಿತ ಅವಮಾನವನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದಲಿತರ ಘನತೆ, ಅವರ ಸಾಂವಿಧಾನಿಕ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯವನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ.

ಬೆಂಗಳೂರು: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ ಬಳಿಕ ಸ್ಥಳವನ್ನು ಶುದ್ಧೀಕರಿಸಿದ ಘಟನೆಗೆ ಸಚಿವ ಕೆ.ಎಚ್. ಮುನಿಯಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಶಾಸಕರಾದ ಶರತ್ ಬಚ್ಚೇಗೌಡ ಹಾಗೂ ಡಾ. ಎನ್.ಟಿ. ಶ್ರೀನಿವಾಸ್ ಅವರು ಈ ವಿಚಾರ ಪ್ರಸ್ತಾಪಿಸಿ, ಖರ್ಗೆ ಅವರು ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬಳಿಕ ಉತ್ತರಾಖಂಡದಲ್ಲಿ ನಡೆದ ಸ್ಥಳ ಶುದ್ಧೀಕರಣದ ಕ್ರಮವನ್ನು ಖಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮುನಿಯಪ್ಪ, ಇಂತಹ ಘಟನೆ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಹೇಳಿದರು.
ಅಸ್ಪೃಶ್ಯತೆ ಹಾಗೂ ಜಾತಿ ಆಧಾರಿತ ಅವಮಾನವನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದಲಿತರ ಘನತೆ, ಅವರ ಸಾಂವಿಧಾನಿಕ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯವನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ದಶಕಗಳ ಕಾಲ ಸಂವಿಧಾನಾತ್ಮಕ ಹಾಗೂ ಸಾಮಾಜಿಕ ಪ್ರಗತಿ ಸಾಧಿಸಿದ್ದರೂ ದೇಶದಲ್ಲಿ ಜಾತಿ ತಾರತಮ್ಯ ಮುಂದುವರಿದಿರುವುದು ಆತಂಕಕಾರಿ ಸಂಗತಿ.
ಈ ಕುರಿತು ಖರ್ಗೆ ಅವರು ಸಂಸತ್ತಿನಲ್ಲೂ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ನೀರಿಗಾಗಿ ಹೋರಾಡಬೇಕಾಯಿತು, ಬಾಬು ಜಗಜೀವನ್ ರಾಮ್ ಅವಮಾನ ಎದುರಿಸಬೇಕಾಯಿತು. ಇದೀಗ ಖರ್ಗೆ ಅವರೂ ತಮ್ಮ ನೋವಿನ ಬಗ್ಗೆ ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ. ಇದು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಚಾರವಲ್ಲ, ಭಾರತೀಯ ಸಮಾಜ ಹಾಗೂ ಸಂವಿಧಾನದ ಘನತೆಗೆ ಸಂಬಂಧಿಸಿದ ಪ್ರಶ್ನೆಯಾಗಿದೆ ಎಂದು ಹೇಳಿದರು.
“ಸ್ಥಳಗಳನ್ನು ಶುದ್ಧೀಕರಿಸುವ ಅಗತ್ಯವಿಲ್ಲ, ಮನಸ್ಸುಗಳನ್ನು ಶುದ್ಧೀಕರಿಸುವ ಅಗತ್ಯವಿದೆ,” ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



