ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ; CWMA ಆದೇಶ ಪಾಲಿಸಲು ಸೂಚನೆ..!
ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, CWMA ಆದೇಶದಂತೆ ಕರ್ನಾಟಕ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನಡೆಯಾಗಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವ ಅದೇಶವನ್ನು ಮುಂದುವರಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಒಂದು ವಾರಕ್ಕೆ ಮುಂದೂಡಲಾಗಿದೆ.
ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, CWMA ಆದೇಶದಂತೆ ಕರ್ನಾಟಕ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಮತ್ತೆ ವಿವಾದ ತೀವ್ರಗೊಂಡಿದೆ.
ತಮಿಳುನಾಡಿನ ವಾದವೇನು?
ಕರ್ನಾಟಕದಿಂದ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ CWMA ಸೂಚನೆ ನೀಡಿದ್ದರೂ, ನಿರೀಕ್ಷಿತ ಪ್ರಮಾಣದ ನೀರು ತಮಿಳುನಾಡಿಗೆ ತಲುಪುತ್ತಿಲ್ಲ ಎಂದು ತಮಿಳುನಾಡು ನ್ಯಾಯಾಲಯಕ್ಕೆ ತಿಳಿಸಿದೆ.
ಸದ್ಯ ನಿತ್ಯ ಕೇವಲ 5ರಿಂದ 6 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದುಬರುತ್ತಿದ್ದು, ಇದುವರೆಗೆ ಸುಮಾರು 13ರಿಂದ 14 ಟಿಎಂಸಿ ನೀರು ಮಾತ್ರ ಲಭಿಸಿದೆ. ಹೀಗಾಗಿ CWMA ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕರ್ನಾಟಕಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿದೆ.
ಕರ್ನಾಟಕದ ವಾದವೇನು?
ಕರ್ನಾಟಕದ ಪರ ವಕೀಲರು, ಈಗಾಗಲೇ ಸುಮಾರು 3,500 ಕ್ಯೂಸೆಕ್ ನೀರು ಹರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. CWMA ಆದೇಶ ಪಾಲಿಸಲು ರಾಜ್ಯ ಪ್ರಯತ್ನಿಸುತ್ತಿದೆ ಎಂದು ವಾದಿಸಿದ್ದಾರೆ.
ಬಿಳಿಗುಂಡ್ಲು ಬಳಿ ನೀರಿನ ಹರಿವನ್ನು ಅಳೆಯಲಾಗುತ್ತದೆ. 12 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಅಲ್ಲಿ ದಾಖಲಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಕರ್ನಾಟಕದ ಪರವಾಗಿ ತಿಳಿಸಲಾಗಿದೆ.
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪರಿಸ್ಥಿತಿ ಅನಿಶ್ಚಿತವಾಗಿದ್ದು, ಈ ಪ್ರಮಾಣದಲ್ಲಿ ನಿರಂತರವಾಗಿ ನೀರು ಹರಿಸುವುದು ರಾಜ್ಯಕ್ಕೆ ಕಷ್ಟಕರವಾಗಿದೆ. ಆದರೂ CWMA ಆದೇಶ ಪಾಲಿಸಲು ಕರ್ನಾಟಕ ಪ್ರಯತ್ನಿಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ವಿಚಾರಣೆ ವೇಳೆ ಕರ್ನಾಟಕದ ಪರವಾಗಿ ಮೇಕೆದಾಟು ಆಣೆಕಟ್ಟು ಯೋಜನೆಯ ಅಗತ್ಯತೆಯನ್ನೂ ಪ್ರಸ್ತಾಪಿಸಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಇಂತಹ ಅನಿಶ್ಚಿತ ಪರಿಸ್ಥಿತಿ ಎದುರಾದಾಗ ಮೇಕೆದಾಟು ಯೋಜನೆಯಿಂದ ನೀರು ನಿರ್ವಹಣೆಗೆ ನೆರವಾಗಲಿದೆ ಎಂದು ವಾದಿಸಲಾಗಿದೆ.
ಆದರೆ, ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವನ್ನೂ ಕರ್ನಾಟಕದ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಇದರಂತೆ ವಾದ ಹಾಗೂ ಪ್ರತಿವಾದ ಆಲಿಸಿದ ನ್ಯಾಯಾಲಯ ಅಂತಿಮವಾಗಿ CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಿದ್ದು, ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವ ಆದೇಶವನ್ನು ಮುಂದುವರೆಸುವಂತೆ ತಿಳಿಸಿದ್ದು, ಪ್ರಕರಣದ ಮುಂದಿನ ವಿಚಾರಣೆ ಸೋಮವಾರಕ್ಕೆ ಮುಂದೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



