'ಕಾನೂನಿನ ಪ್ರಕಾರ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುತ್ತೇವೆ': NICE ಯೋಜನೆ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿಕೆ; Video
ಜೆಡಿಎಸ್ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, NICE ಯೋಜನೆಯನ್ನು ಸರ್ಕಾರವೇ ವಹಿಸಿಕೊಂಡು, ‘ಅನಧಿಕೃತ’ವಾಗಿ ನಡೆಯುತ್ತಿರುವ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.

ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆದು, ಟೋಲ್ ಸಂಗ್ರಹವನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮನವಿಗೆ ಸಂಬಂಧಿಸಿದಂತೆ ಕಾನೂನಿನ ಪ್ರಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಕುಮಾರಸ್ವಾಮಿ ಅವರ ಬೇಡಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಡಿ ಕೆ ಶಿವಕುಮಾರ್, “ಕಾನೂನಿನ ಪ್ರಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ. ಅವರು ಪತ್ರ ಬರೆದಿರುವ ವಿಷಯ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಪತ್ರವನ್ನು ಪರಿಶೀಲಿಸುತ್ತೇನೆ,” ಎಂದು ಹೇಳಿದರು.
ಜೆಡಿಎಸ್ ಅಧ್ಯಕ್ಷರೂ ಆಗಿರುವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, NICE ಯೋಜನೆಯನ್ನು ಸರ್ಕಾರವೇ ವಹಿಸಿಕೊಂಡು, ‘ಅನಧಿಕೃತ’ವಾಗಿ ನಡೆಯುತ್ತಿರುವ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಬಿಎಂಐಸಿ (ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್) ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಮತ್ತು ಅನುಷ್ಠಾನದ ಕುರಿತು ಜುಲೈ 29ರಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ ತೀರ್ಪನ್ನು ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಫ್ರೇಮ್‌ವರ್ಕ್ ಅಗ್ರಿಮೆಂಟ್ (FWA) ಮತ್ತು ಪ್ರಾಜೆಕ್ಟ್ ಟೆಕ್ನಿಕಲ್ ಅಗ್ರಿಮೆಂಟ್‌ನ ಹಲವು ನಿಯಮಗಳನ್ನು NICE ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದ್ದು, ಭೂ ಬಳಕೆ, ಟೋಲ್ ಸಂಗ್ರಹ ಹಾಗೂ ಯೋಜನಾ ಮೂಲಸೌಕರ್ಯ ನಿರ್ಮಾಣಕ್ಕೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ರೈತರ ಭೂಮಿಯನ್ನು ಪರಿಹಾರ ನೀಡದೆ ಸ್ವಾಧೀನಪಡಿಸಿಕೊಂಡಿರುವುದು ಹಾಗೂ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಮೂಲ ಉದ್ದೇಶಕ್ಕೆ ಹೊರತಾದ ಚಟುವಟಿಕೆಗಳಿಗೆ ಬಳಸಿರುವುದರ ಕುರಿತು ಹೈಕೋರ್ಟ್ ವ್ಯಕ್ತಪಡಿಸಿರುವ ಕಳವಳಗಳನ್ನು ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಂವಿಧಾನದ 300ಎ ವಿಧಿಯಡಿ ಕಡ್ಡಾಯವಾಗಿ ನೀಡಬೇಕಾದ ಪರಿಹಾರವನ್ನು ನೀಡದೆ ರೈತರ ಭೂಮಿ ಹಾಗೂ ತಲೆತಲಾಂತರದ ಜೀವನೋಪಾಯವನ್ನು ಕಸಿದುಕೊಂಡಿರುವುದನ್ನು ಹೊರತುಪಡಿಸಿದರೆ, NICE ಯೋಜನೆಯಲ್ಲಿ ‘ನೈಸ್’ ಎನ್ನುವಂಥದ್ದೇನೂ ಇಲ್ಲ ಎಂದು ಹೇಳಿದ್ದಾರೆ.
ಬಿಎಂಐಸಿ ಯೋಜನೆಯು ಕರ್ನಾಟಕ ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿರಬಹುದು ಎಂಬ ಹೈಕೋರ್ಟ್‌ನ ಅಭಿಪ್ರಾಯವನ್ನೂ ಅವರು ಉಲ್ಲೇಖಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಹಾಗೂ ಪರಿಸರ ಪರಿಗಣನೆಗಳಿಗಿಂತ ಖಾಸಗಿ ಹಿತಾಸಕ್ತಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಾಕಷ್ಟು ಭೂಮಿ NICE ಬಳಿ ಇದ್ದರೂ, ಪ್ರಸ್ತಾಪಿತ ರಸ್ತೆ ಜಾಲದ ಒಂದು ಸಣ್ಣ ಭಾಗವಷ್ಟೇ ಪೂರ್ಣಗೊಂಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಉಳಿಕೆ ಭೂಮಿಯನ್ನು ಸರ್ಕಾರ ಮರಳಿ ವಶಪಡಿಸಿಕೊಳ್ಳಬೇಕು, ಅನಧಿಕೃತ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಹಾಗೂ ಫ್ರೇಮ್‌ವರ್ಕ್ ಅಗ್ರಿಮೆಂಟ್ ವ್ಯಾಪ್ತಿಯ ಹೊರಗೆ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಸಂಬಂಧಿಸಿದ ಅಧಿಸೂಚನೆಗಳನ್ನು ಹಿಂಪಡೆಯಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಫ್ರೇಮ್‌ವರ್ಕ್ ಅಗ್ರಿಮೆಂಟ್ ಮತ್ತು ಪ್ರಾಜೆಕ್ಟ್ ಟೆಕ್ನಿಕಲ್ ಅಗ್ರಿಮೆಂಟ್‌ಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ, ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಲು ಅಗತ್ಯ ಕಾನೂನು ರೂಪಿಸುವಂತೆ ಕುಮಾರಸ್ವಾಮಿ ಅವರು ಶಿವಕುಮಾರ್ ಅವರನ್ನು ಆಗ್ರಹಿಸಿದ್ದಾರೆ.
ಮೂಲತಃ NICE ಯೋಜನೆಯ ಉದ್ದೇಶ ಬೆಂಗಳೂರು ಮತ್ತು ಮೈಸೂರನ್ನು ಸಂಪರ್ಕಿಸುವ ಮೂಲಸೌಕರ್ಯ ಕಾರಿಡಾರ್ ನಿರ್ಮಿಸುವುದಾಗಿತ್ತು. ಇದರಲ್ಲಿ ಎಕ್ಸ್‌ಪ್ರೆಸ್‌ವೇ, ಪೆರಿಫೆರಲ್ ಹಾಗೂ ಲಿಂಕ್ ರಸ್ತೆಗಳು ಮತ್ತು ಐದು ಟೌನ್‌ಶಿಪ್‌ಗಳ ನಿರ್ಮಾಣವನ್ನು ಒಳಗೊಂಡಿತ್ತು.

ತಕ್ಷಣವೇ ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ನಿಲ್ಲಿಸಿ: ಸಿಎಂ ಡಿ.ಕೆ ಶಿವಕುಮಾರ್ ಗೆ ಎಚ್.ಡಿ ಕುಮಾರಸ್ವಾಮಿ ಪತ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



