ಹಂಪಿಯಲ್ಲಿ ಮುಂದುವರಿದ ಉತ್ಖನನ ಕೌತುಕ: ವಿಜಯನಗರ ಕಾಲದ ಅಪರೂಪದ ಗರುಡ, ನಾಗಿಣಿ ವಿಗ್ರಹಗಳು ಪತ್ತೆ!
ಈ ಶಿಲ್ಪಗಳ ಪತ್ತೆಯು ಐತಿಹಾಸಿಕ ಹಂಪಿಯ ಧಾರ್ಮಿಕ ಆಚರಣೆಗಳು, ಕಲಾ ಪರಂಪರೆ ಹಾಗೂ ವಿವಿಧ ಧಾರ್ಮಿಕ ಸಂಪ್ರದಾಯಗಳ ನಡುವಿನ ಸಾಂಸ್ಕೃತಿಕ ಸಂಪರ್ಕಗಳ ಕುರಿತು ಮಹತ್ವದ ಸುಳಿವುಗಳನ್ನು ಒದಗಿಸುವ ನಿರೀಕ್ಷೆಯಿದೆ.

ಹಂಪಿ: ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಂಪಿಯ ಇತಿಹಾಸಕ್ಕೆ ಮತ್ತೊಂದು ರೋಮಾಂಚನಕಾರಿ ಗರಿ ಸೇರ್ಪಡೆಯಾಗಿದೆ.
ಹಂಪಿಯ ಜೈನ ದೇವಸ್ಥಾನದ ಸಂಕೀರ್ಣದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನಡೆಸುತ್ತಿರುವ ಉತ್ಖನನ ಕಾರ್ಯದಲ್ಲಿ ಅತ್ಯಂತ ಅಪರೂಪದ ಶಿಲ್ಪಗಳು ಪತ್ತೆಯಾಗಿವೆ.
ಇವುಗಳಲ್ಲಿ ಒಂದು ನಾಗಿಣಿ ಹಾಗೂ ಮತ್ತೊಂದು ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಪೌರಾಣಿಕ ಗರುಡನ ಶಿಲ್ಪ ಎಂದು ಗುರುತಿಸಲಾಗಿದೆ.
ಈ ಶಿಲ್ಪಗಳ ಪತ್ತೆಯು ಐತಿಹಾಸಿಕ ಹಂಪಿಯ ಧಾರ್ಮಿಕ ಆಚರಣೆಗಳು, ಕಲಾ ಪರಂಪರೆ ಹಾಗೂ ವಿವಿಧ ಧಾರ್ಮಿಕ ಸಂಪ್ರದಾಯಗಳ ನಡುವಿನ ಸಾಂಸ್ಕೃತಿಕ ಸಂಪರ್ಕಗಳ ಕುರಿತು ಮಹತ್ವದ ಸುಳಿವುಗಳನ್ನು ಒದಗಿಸುವ ನಿರೀಕ್ಷೆಯಿದೆ.
ಪತ್ತೆಯಾಗಿರುವ ಒಂದು ಶಿಲ್ಪವು ಮಾನವ ಮತ್ತು ಸರ್ಪದ ಲಕ್ಷಣಗಳನ್ನು ಹೊಂದಿರುವ ಸ್ತ್ರೀ ರಕ್ಷಕ ರೂಪವಾದ ನಾಗಿಣಿಯನ್ನು ಚಿತ್ರಿಸುತ್ತದೆ. ಮತ್ತೊಂದು ಶಿಲ್ಪವು ತಲೆಯಿಲ್ಲದ ಹದ್ದಿನ ರೂಪದ ದೈವಿಕ ಆಕೃತಿಯಾಗಿ ಕಾಣುವ ಗರುಡನದ್ದಾಗಿದೆ.
ಗರುಡ ಶಿಲ್ಪವು 32 ಸೆಂ.ಮೀ. ಅಗಲ ಹಾಗೂ 37 ಸೆಂ.ಮೀ. ಉದ್ದವಿದೆ. ನಾಗಿಣಿ ಶಿಲ್ಪವು 30 ಸೆಂ.ಮೀ. ಅಗಲ ಹಾಗೂ 51 ಸೆಂ.ಮೀ. ಉದ್ದವಿದೆ.
ಉತ್ಖನನ ಪ್ರದೇಶದಲ್ಲಿ ಪತ್ತೆಯಾದ ಈ ಎರಡೂ ಶಿಲ್ಪಗಳು ತುಸು ಉತ್ತಮ ಸ್ಥಿತಿಯಲ್ಲಿದ್ದು, ಜೈನ ದೇವಾಲಯದ ಸುತ್ತ ನಡೆಯುತ್ತಿರುವ ಪುರಾತತ್ವ ಅಧ್ಯಯನದ ಭಾಗವಾಗಿ ಅವುಗಳನ್ನು ದಾಖಲಿಸಲಾಗುತ್ತಿದೆ.
ಹಂಪಿ ವೃತ್ತದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಕೆ. ರಾಮಕೃಷ್ಣ ರೆಡ್ಡಿ ಅವರು ಟಿಎನ್‌ಐಇಗೆ ಮಾಹಿತಿ ನೀಡಿದ್ದು, ಪತ್ತೆಯಾಗಿರುವ ಶಿಲ್ಪಗಳು ಹಂಪಿಯ ಪುರಾತತ್ವ ದಾಖಲೆಗಳಿಗೆ ಮಹತ್ವದ ಸೇರ್ಪಡೆಯಾಗಿವೆ ಎಂದು ಹೇಳಿದ್ದಾರೆ.
“ಉತ್ಖನನದಲ್ಲಿ ವಿಭಿನ್ನ ಧಾರ್ಮಿಕ ಹಾಗೂ ಕಲಾ ಪರಂಪರೆಗಳನ್ನು ಪ್ರತಿನಿಧಿಸುವ ಶಿಲ್ಪಗಳು ಪತ್ತೆಯಾಗಿವೆ. ಅವುಗಳ ಶಿಲ್ಪಲಕ್ಷಣಗಳು ಮತ್ತು ಪತ್ತೆಯಾದ ಸ್ಥಳವನ್ನು ವಿವರವಾಗಿ ಅಧ್ಯಯನ ಮಾಡಲಾಗುವುದು. ಈ ಮೂಲಕ ಅವು ಆ ಪ್ರದೇಶದಲ್ಲಿರುವ ಕಟ್ಟಡಗಳೊಂದಿಗೆ ಹೊಂದಿರುವ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲಿ ಹಿಂದೂ ಮತ್ತು ಜೈನ ಧಾರ್ಮಿಕ ಪ್ರಭಾವ ಸೇರಿದಂತೆ ಹಲವು ಧಾರ್ಮಿಕ ಪರಂಪರೆಗಳನ್ನು ಪ್ರತಿಬಿಂಬಿಸುವ ಸ್ಮಾರಕಗಳು ಹಾಗೂ ಪುರಾತತ್ವ ಅವಶೇಷಗಳಿವೆ.
ಸಂರಕ್ಷಿತ ಪಾರಂಪರಿಕ ಪ್ರದೇಶದ ಸುತ್ತಮುತ್ತ ನಡೆಯುತ್ತಿರುವ ಉತ್ಖನನಗಳಲ್ಲಿ ಕಟ್ಟಡಗಳ ಅವಶೇಷಗಳು, ಶಿಲ್ಪಗಳು, ವಾಸ್ತುಶಿಲ್ಪದ ತುಣುಕುಗಳು ಹಾಗೂ ಇತರ ಪುರಾತತ್ವ ವಸ್ತುಗಳು ನಿರಂತರವಾಗಿ ಪತ್ತೆಯಾಗುತ್ತಿವೆ.
ಹೊಸದಾಗಿ ಪತ್ತೆಯಾಗಿರುವ ಶಿಲ್ಪಗಳನ್ನು ಸಮರ್ಪಕವಾಗಿ ದಾಖಲಿಸಿ, ಅವುಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸಲಾಗುವುದು. ಶಿಲ್ಪಗಳ ಕಾಲಮಾನ ಹಾಗೂ ಅವು ಮೂಲತಃ ಯಾವ ಸ್ಥಳದಲ್ಲಿ ಸ್ಥಾಪಿತವಾಗಿದ್ದವು ಎಂಬುದರ ಕುರಿತು ಹೆಚ್ಚಿನ ಸಂಶೋಧನೆಯ ಬಳಿಕವಷ್ಟೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



