ಅಮೃತ್ ಭಾರತ್ ಯೋಜನೆಗೆ ವೇಗದ ಕೊರತೆ? ಕರ್ನಾಟಕದ 61 ರೈಲು ನಿಲ್ದಾಣಗಳಲ್ಲಿ 12 ಮಾತ್ರ ಮೇಲ್ದರ್ಜೆಗೆ
ದೇಶಾದ್ಯಂತ ಒಟ್ಟು 1,340 ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ. ಈ ಪೈಕಿ 261 ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ನಿಲ್ದಾಣಗಳಲ್ಲಿ..
ಚಿತ್ರದುರ್ಗ: ಕರ್ನಾಟಕದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ರೈಲು ನಿಲ್ದಾಣಗಳ ಪುನರ್ ಅಭಿವೃದ್ಧಿ ಕಾಮಗಾರಿಗಳ ವೇಗ ನಿಧಾನಗತಿಯಲ್ಲಿರುವುದು ಕಂಡುಬಂದಿದ್ದು, ರಾಜ್ಯದಲ್ಲಿ ಈ ಯೋಜನೆಯಡಿ ಗುರುತಿಸಲಾಗಿರುವ 61 ನಿಲ್ದಾಣಗಳ ಪೈಕಿ ಇದುವರೆಗೆ ಕೇವಲ 12 ನಿಲ್ದಾಣಗಳ ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ.
ಆಗಸ್ಟ್ 7ರಂದು ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, 'ದೇಶಾದ್ಯಂತ ಒಟ್ಟು 1,340 ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ' ಎಂದು ತಿಳಿಸಿದ್ದಾರೆ.
ಈ ಪೈಕಿ 261 ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ನಿಲ್ದಾಣಗಳಲ್ಲಿ ಕಾಮಗಾರಿಗಳು ಅನುಷ್ಠಾನ, ಟೆಂಡರ್ ಹಾಗೂ ಮಾಸ್ಟರ್ ಪ್ಲ್ಯಾನಿಂಗ್‌ನ ವಿವಿಧ ಹಂತಗಳಲ್ಲಿವೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಈ ಯೋಜನೆಯಡಿ 61 ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಚಿತ್ರದುರ್ಗ, ದಾವಣಗೆರೆ, ಹರಿಹರ, ಹೊಸಪೇಟೆ, ಬಳ್ಳಾರಿ, ಶಿವಮೊಗ್ಗ, ತುಮಕೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ವಿಜಯಪುರ, ರಾಯಚೂರು, ಕಲಬುರಗಿ, ಹಾಸನ ಮತ್ತು ಬೆಂಗಳೂರು ಕಂಟೋನ್ಮೆಂಟ್ ಸೇರಿದಂತೆ ಹಲವು ನಿಲ್ದಾಣಗಳು ಇದರ ವ್ಯಾಪ್ತಿಯಲ್ಲಿವೆ.
ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿರುವ 12 ನಿಲ್ದಾಣಗಳೆಂದರೆ ಅಳ್ನಾವರ, ಬಾದಾಮಿ, ಬಾಗಲಕೋಟೆ, ಬಂಟ್ವಾಳ, ಧಾರವಾಡ, ಗದಗ, ಗೋಕಾಕ್ ರೋಡ್, ಹೊಸಪೇಟೆ, ಕೊಪ್ಪಳ, ಮುನಿರಾಬಾದ್, ರಾಣೆಬೆನ್ನೂರು ಮತ್ತು ಸುಬ್ರಹ್ಮಣ್ಯ ರೋಡ್ ಎಂದು ಮಾಹಿತಿ ನೀಡಿದರು.
ಕಾಮಗಾರಿ ಪ್ರಗತಿಯಲ್ಲಿದೆ
ರಾಜ್ಯದ ಹಲವು ಪ್ರಮುಖ ರೈಲು ನಿಲ್ದಾಣಗಳಲ್ಲಿ ಇನ್ನೂ ಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ. ಚಿತ್ರದುರ್ಗ ರೈಲು ನಿಲ್ದಾಣದಲ್ಲಿ ಹೊಸ ನಿಲ್ದಾಣ ಕಟ್ಟಡ, ಪ್ರವೇಶ ದ್ವಾರ, ಪ್ರಯಾಣಿಕರ ನಿರೀಕ್ಷಣಾ ಹಾಲ್, ಶೌಚಾಲಯ ಹಾಗೂ ಟಿಕೆಟ್ ಬುಕಿಂಗ್ ಕಚೇರಿ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ. ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿ, ಪಾರ್ಕಿಂಗ್ ವ್ಯವಸ್ಥೆ ಹಾಗೂ ವಿಶೇಷಚೇತನ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದೂ ಪುನರ್ ಅಭಿವೃದ್ಧಿ ಯೋಜನೆಯ ಭಾಗವಾಗಿದೆ ಎಂದು ವೈಷ್ಣವ್ ತಿಳಿಸಿದ್ದಾರೆ.
ದಾವಣಗೆರೆ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಶೆಲ್ಟರ್, ಪ್ಲಾಟ್‌ಫಾರ್ಮ್ ಮೇಲ್ಮೈ ಸುಧಾರಣೆ, ಹೊಸ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಹಾಗೂ ವಿಶೇಷಚೇತನರಿಗೆ ಅಗತ್ಯ ಸೌಲಭ್ಯಗಳ ಕಾಮಗಾರಿ ಪೂರ್ಣಗೊಂಡಿದೆ. ಲಿಫ್ಟ್, ಎಸ್ಕಲೇಟರ್ ಹಾಗೂ 12 ಮೀಟರ್ ಅಗಲದ ಫುಟ್ ಓವರ್‌ಬ್ರಿಡ್ಜ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಹೊಸ ಡೈವರ್ಷನ್ ರಸ್ತೆ, ವಿದ್ಯುತ್ ಉಪಕೇಂದ್ರ ಹಾಗೂ 5 ಮೀಟರ್ ಅಗಲದ ಫುಟ್ ಓವರ್‌ಬ್ರಿಡ್ಜ್ ಕಾಮಗಾರಿ ಪೂರ್ಣಗೊಂಡಿದೆ. ಹೊಸ ನಿಲ್ದಾಣ ಕಟ್ಟಡ, ಏರ್ ಕಾನ್ಕೋರ್ಸ್ ಹಾಗೂ 12 ಮೀಟರ್ ಅಗಲದ ಫುಟ್ ಓವರ್‌ಬ್ರಿಡ್ಜ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಯಶವಂತಪುರದಲ್ಲಿ ಎಲಿವೇಟೆಡ್ ರಸ್ತೆ, ಆಗಮನ ಮತ್ತು ನಿರ್ಗಮನ ಪ್ಲಾಜಾ, ಬಹುಮಹಡಿ ಕಾರ್ ಪಾರ್ಕಿಂಗ್, ವಿದ್ಯುತ್ ಉಪಕೇಂದ್ರ, ಓವರ್‌ಹೆಡ್ ಟ್ಯಾಂಕ್ ಹಾಗೂ ಒಳಚರಂಡಿ ಸಂಸ್ಕರಣಾ ಘಟಕದ ಕಾಮಗಾರಿಗಳು ಪೂರ್ಣಗೊಂಡಿವೆ. ಇತರ ಕಾಮಗಾರಿಗಳು ಮುಂದುವರಿದಿವೆ..
ಮೂಲಸೌಕರ್ಯವೇ ಪ್ರಮುಖ ಗುರಿ
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ರೈಲು ನಿಲ್ದಾಣಗಳ ಮೂಲಸೌಕರ್ಯವನ್ನು ಸಮಗ್ರವಾಗಿ ಸುಧಾರಿಸುವ ಗುರಿ ಹೊಂದಲಾಗಿದೆ. ಉತ್ತಮ ಪ್ರವೇಶ ಮತ್ತು ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿ, ಸುಧಾರಿತ ನಿರೀಕ್ಷಣಾ ಹಾಲ್‌ಗಳು ಮತ್ತು ಶೌಚಾಲಯಗಳು, ಅಗಲವಾದ ಫುಟ್ ಓವರ್‌ಬ್ರಿಡ್ಜ್‌ಗಳು, ಲಿಫ್ಟ್‌ಗಳು ಮತ್ತು ಎಸ್ಕಲೇಟರ್‌ಗಳು, ಸುಧಾರಿತ ಪ್ಲಾಟ್‌ಫಾರ್ಮ್‌ಗಳು, ಪಾರ್ಕಿಂಗ್ ವ್ಯವಸ್ಥೆ, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಹಸಿರುಕರಣ ಹಾಗೂ ವಿಶೇಷಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.
ನಿಲ್ದಾಣಗಳ ಸ್ಥಿತಿ, ಪ್ರಯಾಣಿಕರ ಸಂಖ್ಯೆ, ಆದ್ಯತೆ ಹಾಗೂ ಲಭ್ಯವಿರುವ ಅನುದಾನದ ಆಧಾರದ ಮೇಲೆ ಪುನರ್ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಕಾನೂನುಬದ್ಧ ಅನುಮತಿಗಳು, ವಿವಿಧ ಉಪಯುಕ್ತತಾ ವ್ಯವಸ್ಥೆಗಳ ಸ್ಥಳಾಂತರ ಹಾಗೂ ರೈಲು ಸಂಚಾರಕ್ಕೆ ಅಡ್ಡಿಯಾಗದಂತೆ ಕಾಮಗಾರಿ ನಡೆಸಬೇಕಿರುವುದು ಯೋಜನೆಯ ವೇಗದ ಮೇಲೆ ಪರಿಣಾಮ ಬೀರುವ ಪ್ರಮುಖ ಸವಾಲುಗಳಾಗಿವೆ.
2026-27ನೇ ಸಾಲಿನಲ್ಲಿ ದಕ್ಷಿಣ ಪಶ್ಚಿಮ ರೈಲ್ವೆಗೆ ಪ್ಲ್ಯಾನ್ ಹೆಡ್-53 ಅಡಿಯಲ್ಲಿ ಪ್ರಯಾಣಿಕರ ಸೌಲಭ್ಯಗಳಿಗಾಗಿ ₹633 ಕೋಟಿ ಅನುದಾನ ನೀಡಲಾಗಿದೆ. ಈ ಪೈಕಿ 2026ರ ಜೂನ್‌ವರೆಗೆ ₹184 ಕೋಟಿ ಖರ್ಚು ಮಾಡಲಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


