ಖಾತೆ ಹಂಚಿಕೆಗೂ ಮುನ್ನ ಸಚಿವ ನಾಗೇಂದ್ರಗೆ ಸಂಕಷ್ಟ! ವಿಶೇಷ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ
ನಾಗೇಂದ್ರ ಎರಡು ಬಾರಿ ದೆಹಲಿಗೆ ಭೇಟಿ ನೀಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದು, ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು: ಖಾತೆ ಹಂಚಿಕೆಗೂ ಮುನ್ನವೇ ಸಚಿವ ಬಿ. ನಾಗೇಂದ್ರ ಅವರಿಗೆ ಸಂಕಷ್ಟಗಳು ಮರುಕಳಿಸಿದಂತಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ಪಡೆಯುವಾಗ ವಿಧಿಸಲಾದ ಷರತ್ತುಗಳನ್ನು ಉಲ್ಲಂಘಿಸಿ, ಜನಪ್ರತಿನಿಧಿಗಳ ಪ್ರಕರಣಗಳನ್ನು ನಿರ್ವಹಿಸುವ ವಿಶೇಷ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯದೆ ನವದೆಹಲಿಗೆ ಪ್ರಯಾಣಿಸಿದ್ದಾರೆ ಎಂಬ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯ (ED) ಪರಿಶೀಲನೆ ನಡೆಸುತ್ತಿದೆ. ಜುಲೈ 15 ರಂದು ಸಂಜೆ 6.15 ರ ಸುಮಾರಿಗೆ ಹೊರಟ ಇಂಡಿಗೋ ವಿಮಾನದಲ್ಲಿ (6E 76034) ನಾಗೇಂದ್ರ ದೆಹಲಿಗೆ ಪ್ರಯಾಣಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಾಗೇಂದ್ರ ಎರಡು ಬಾರಿ ದೆಹಲಿಗೆ ಭೇಟಿ ನೀಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದು, ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ (MLC) ರವಿಕುಮಾರ್ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಕೂಡ ಇದೇ ರೀತಿಯ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಜುಲೈ 26 ರಂದು ಮಧ್ಯಾಹ್ನ 1.55 ಕ್ಕೆ ಇಂಡಿಗೋ ವಿಮಾನದಲ್ಲಿ (ಸಂಖ್ಯೆ 67840) ಅವರು ನವದೆಹಲಿಗೆ ಪ್ರಯಾಣಿಸಿದ್ದಾರೆ ಎಂಬ ಮಾಹಿತಿಯೂ EDಗೆ ಲಭ್ಯವಾಗಿದೆ.
ಲಾಬಿ ನಡೆಸಲು ದೆಹಲಿಗೆ ತೆರಳಿದ್ದ ಸಚಿವರು: ಸಚಿವರಾಗುವ ಮುನ್ನ ಸಂಪುಟದಲ್ಲಿ ಸ್ಥಾನ ಪಡೆಯಲು ಲಾಬಿ ನಡೆಸಲು ನಾಗೇಂದ್ರ ಹಲವು ಬಾರಿ ದೆಹಲಿಗೆ ಪ್ರಯಾಣಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಜುಲೈ 17 ರಂದು ಎಐಸಿಸಿ (AICC) ಪ್ರಧಾನ ಕಚೇರಿಯಲ್ಲಿ ವಿಜಯಾನಂದ ಕಾಶಪ್ಪನವರ್, ಅಜಯ್ ಸಿಂಗ್, ಎ.ಎಸ್. ಪೊನ್ನಣ್ಣ ಮತ್ತು ಎನ್.ಎಚ್. ಕೋನರೆಡ್ಡಿ ಅವರೊಂದಿಗೆ ಅವರು ಕ್ಯಾಮೆರಾದಲ್ಲಿ ಸೆರೆಯಾಗಿದ್ದರು. ಆದರೆ ಆಗ ಅವರು ನ್ಯಾಯಾಲಯದ ಷರತ್ತುಗಳನ್ನು ಪಾಲಿಸಿದ್ದರು; ಏಕೆಂದರೆ ನ್ಯಾಯಾಲಯವು ಅವರಿಗೆ ಏಪ್ರಿಲ್ 26 ರಿಂದ ಜೂನ್ 2 ರವರೆಗೆ, ಜೂನ್ 11 ರಿಂದ ಜುಲೈ 7 ರವರೆಗೆ ಮತ್ತು ಜುಲೈ 16 ರಿಂದ ಜುಲೈ 25 ರವರೆಗೆ ಮೂರು ಬಾರಿ ಕರ್ನಾಟಕದ ಹೊರಗೆ ಪ್ರಯಾಣಿಸಲು ಅನುಮತಿ ನೀಡಿತ್ತು. ಆದರೆ, ಅವರು ಜುಲೈ 15 ಮತ್ತು ಜುಲೈ 26 ರಂದು ಕೂಡ ದೆಹಲಿಗೆ ಪ್ರಯಾಣಿಸಿದ್ದಾರೆ ಎಂಬ ಮಾಹಿತಿ EDಗೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಜುಲೈ 26 ರಿಂದ ಆಗಸ್ಟ್ 10 ರವರೆಗೆ ರಾಜ್ಯದ ಹೊರಗೆ ಪ್ರಯಾಣಿಸಲು ಅನುಮತಿ ಕೋರಿ ನಾಗೇಂದ್ರ ಜುಲೈ 23 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅನುಮತಿ ನೀಡಲು ED ಆಕ್ಷೇಪ ವ್ಯಕ್ತಪಡಿಸಿತ್ತು. ಲಭ್ಯವಿರುವ ಮಾಹಿತಿಯನ್ನು ದೃಢೀಕರಿಸುವ ಸಾಕ್ಷ್ಯಗಳು ಸಿಕ್ಕರೆ, ಷರತ್ತುಗಳ ಉಲ್ಲಂಘನೆಯ ಕಾರಣದಿಂದಾಗಿ ಅವರ ಜಾಮೀನು ರದ್ದುಗೊಳಿಸಲು ಕೋರಿ ED ನ್ಯಾಯಾಲಯದ ಮೊರೆ ಹೋಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



