ರಾಜ್ಯ

ಡಾಂಬರು ಬೆಲೆ ಗಗನಕ್ಕೆ: ಸಿಲಿಕಾನ್ ಸಿಟಿಯಲ್ಲಿ 1,000 ಕೋಟಿ ರೂ ರಸ್ತೆ ಕಾಮಗಾರಿ ಬಂದ್..!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣದಿಂದಾಗಿ ಬಿಟುಮಿನ್ ಬೆಲೆ ಕ್ವಿಂಟಾಲ್‌ಗೆ 45,000 ರೂಪಾಯಿಯಿಂದ ನೇರವಾಗಿ 92,000 ರೂಪಾಯಿಗೆ ಏರಿಕೆಯಾಗಿದೆ.

ಡಾಂಬರು ಬೆಲೆ ಗಗನಕ್ಕೆ: ಸಿಲಿಕಾನ್ ಸಿಟಿಯಲ್ಲಿ 1,000 ಕೋಟಿ ರೂ ರಸ್ತೆ ಕಾಮಗಾರಿ ಬಂದ್..!
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ನಗರದಲ್ಲಿ ಇನ್ಮುಂದೆ ರಸ್ತೆ ಗುಂಡಿ ಮುಚ್ಚುವ ಹಾಗೂ ಡಾಂಬರೀಕರಣದ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ.

ಯುಎಸ್ ಮತ್ತು ಇರಾನ್ ನಡುವಿನ ಸಂಘರ್ಷದ ಪರಿಣಾಮವಾಗಿ ಬಿಟುಮಿನ್ (ಡಾಂಬರು) ಬೆಲೆ ಗಗನಕ್ಕೇರಿದ್ದು, ಬಿಬಿಎಂಪಿ ಗುತ್ತಿಗೆದಾರರು ನಗರದಾದ್ಯಂತ ಸುಮಾರು 1,000 ಕೋಟಿ ರೂಪಾಯಿ ಮೌಲ್ಯದ ನಾಗರಿಕ ಕಾಮಗಾರಿಗಳನ್ನು ಕೈಬಿಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣದಿಂದಾಗಿ ಬಿಟುಮಿನ್ ಬೆಲೆ ಕ್ವಿಂಟಾಲ್‌ಗೆ 45,000 ರೂಪಾಯಿಯಿಂದ ನೇರವಾಗಿ 92,000 ರೂಪಾಯಿಗೆ ಏರಿಕೆಯಾಗಿದೆ. ಕೇವಲ ಡಾಂಬರು ಮಾತ್ರವಲ್ಲದೆ, ರಸ್ತೆ ನಿರ್ಮಾಣಕ್ಕೆ ಬಳಸುವ ಸಿಮೆಂಟ್, ಜಲ್ಲಿಕಲ್ಲು ಹಾಗೂ ಕಬ್ಬಿಣದ ಬೆಲೆಗಳೂ ಸಹ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರೂ.1,000 ಕೋಟಿಗೂ ಅಧಿಕ ಮೌಲ್ಯದ ನಾಗರಿಕ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಗುತ್ತಿಗೆದಾರರು ಸ್ಥಗಿತಗೊಳಿಸಿದ್ದಾರೆ.

ಈಗಾಗಲೇ ಟೆಂಡರ್‌ ಆಗಿರುವ ಕಾಮಗಾರಿಗಳಿಗೂ ‘ಸ್ಟಾರ್‌ ರೇಟ್‌’ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಗ್ರೇಟರ್‌ ಬೆಂಗಳೂರು ಸಿಟಿ ಕಾರ್ಪೊರೇಷನ್ಸ್‌ ಕಾಂಟ್ರಾಕ್ಟರ್ಸ್‌ ಅಸೋಸಿಯೇಷನ್‌ ಸರ್ಕಾರವನ್ನು ಒತ್ತಾಯಿಸಿದೆ.

ಗುತ್ತಿಗೆ ನೀಡುವ ವೇಳೆ ನಿಗದಿಪಡಿಸಿದ್ದ ದರದಲ್ಲೇ ಕಾಮಗಾರಿ ನಡೆಸುತ್ತಿರುವುದರಿಂದ ಭಾರೀ ನಷ್ಟವಾಗುತ್ತಿದೆ ಎಂದು ಗುತ್ತಿಗೆದಾರರು ಹೇಳಿದ್ದಾರೆ.

ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್‌ ಅವರು ಟಿಎನ್‌ಐಇಗೆ ಮಾಹಿತಿ ನೀಡಿದ್ದು, ಹೊಸ ಕಾಮಗಾರಿಗಳಷ್ಟೇ ಅಲ್ಲದೆ ಈಗಾಗಲೇ ಟೆಂಡರ್‌ ಆಗಿರುವ ಯೋಜನೆಗಳಿಗೂ ‘ಸ್ಟಾರ್‌ ರೇಟ್‌’ ಅನ್ವಯಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು

“ಅಮೆರಿಕ-ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ಬಿಟುಮೆನ್‌ ಬೆಲೆ ಕ್ವಿಂಟಲ್‌ಗೆ ರೂ.45,000ದಿಂದ ರೂ.92,000ಕ್ಕೆ ಏರಿಕೆಯಾಗಿದೆ. ಸಿಮೆಂಟ್‌, ಜಲ್ಲಿ, ಉಕ್ಕು ಸೇರಿದಂತೆ ಇತರ ನಿರ್ಮಾಣ ಸಾಮಗ್ರಿಗಳ ಬೆಲೆಯೂ ಹೆಚ್ಚಾಗಿದೆ. ಟೆಂಡರ್‌ ನೀಡಿದಾಗ ನಿಗದಿಪಡಿಸಿದ್ದ ದರದಲ್ಲೇ ಕಾಮಗಾರಿ ನಡೆಸುವುದರಿಂದ ಗುತ್ತಿಗೆದಾರರಿಗೆ ಭಾರೀ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಡಾಂಬರೀಕರಣ, ಗುಂಡಿ ಮುಚ್ಚುವಿಕೆ, ವೈಟ್‌ಟಾಪಿಂಗ್‌ ಸೇರಿದಂತೆ ಹಲವು ಕಾಮಗಾರಿಗಳನ್ನು ಗುತ್ತಿಗೆದಾರರು ಸ್ಥಗಿತಗೊಳಿಸಿದ್ದಾರೆ ಎಂದು ತಿಳಿಸಿದರು.

ಕಾಮಗಾರಿಗಳು ವಿಳಂಬವಾದರೆ ನಗರದ ರಸ್ತೆ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆಯಿದ್ದು, ರಸ್ತೆಗಳಲ್ಲಿ ಗುಂಡಿಗಳ ಸಮಸ್ಯೆ ಉಲ್ಬಣಿಸಬಹುದು ಎಂದು ಗುತ್ತಿಗೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಮೂರು ತಿಂಗಳಿಗೆ ಸ್ಟಾರ್‌ ರೇಟ್‌ ಆದೇಶ

ಇದೇ ವೇಳೆ ಡಾಂಬರೀಕರಣ ಕಾಮಗಾರಿಗಳಿಗೆ ಮೂರು ತಿಂಗಳ ಅವಧಿಗೆ ಸ್ಟಾರ್‌ ರೇಟ್‌ ಜಾರಿಗೊಳಿಸುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆದೇಶಿಸಿದೆ. ಆದರೆ, ಸ್ಟಾರ್‌ ರೇಟ್‌ ಅನ್ನು ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ಜಿಬಿಎ ಅಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ.

ಹಳೆಯ ಕಾಮಗಾರಿಗಳು ಈಗಾಗಲೇ ಟೆಂಡರ್‌ ಆಗಿರುವುದರಿಂದ ಈ ಸಮಸ್ಯೆಗೆ ಸರ್ಕಾರದ ಮಧ್ಯಪ್ರವೇಶವೇ ಪರಿಹಾರ. ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಿಟುಮೆನ್‌ ಹಾಗೂ ನಿರ್ಮಾಣ ಸಾಮಗ್ರಿಗಳ ದರವನ್ನು ಪರಿಷ್ಕರಿಸಬೇಕು. ಹೆಚ್ಚುವರಿ ವೆಚ್ಚವನ್ನು ಸಂಪೂರ್ಣವಾಗಿ ಗುತ್ತಿಗೆದಾರರೇ ಭರಿಸುವಂತಾಗಬಾರದು ಎಂದು ನಂದಕುಮಾರ್‌ ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಸಂಘದ ನಿಯೋಗವು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾಗಿ ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದೆ. ತಮ್ಮ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ನಂದಕುಮಾರ್‌ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.