'ಅದೇ ಸಂಘ, ಭಾಷೆ ಮಾತ್ರ ಹೊಸದು', ಪದ ಬದಲಾದರೂ ನಿಮ್ಮ ಸಿದ್ಧಾಂತ ಬದಲಾಗುವುದಿಲ್ಲ: RSS-BJPಗೆ ಪ್ರಿಯಾಂಕ್ ಖರ್ಗೆ ಟಾಂಗ್
ಆರ್‌ಎಸ್‌ಎಸ್ ಮತ್ತು ಬಿಜೆಪಿ ತಮ್ಮ ಪದಪ್ರಯೋಗವನ್ನು ಬದಲಾಯಿಸಲು ಹರಸಾಹಸಪಡುತ್ತಿವೆ. ಆದರೆ, ದುರದೃಷ್ಟವಶಾತ್ ಅದರಿಂದ ಅವರ ಸಿದ್ಧಾಂತ ಬದಲಾಗುವುದಿಲ್ಲ.

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಬಿಜೆಪಿ ತಮ್ಮ ಭಾಷೆ ಮತ್ತು ಪದಗಳನ್ನು ಬದಲಾಯಿಸುತ್ತಿದ್ದರೂ ಅವರ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಹೊಸ ಪದಗಳನ್ನು ಬಳಸುವುದರಿಂದ ಅವರ ಮೂಲ ಸಿದ್ಧಾಂತ ಬದಲಾಗುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಟೀಕೆ ಮಾಡಿದ್ದಾರೆ.
ಮುಂಬೈಯ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಜನರೇಷನ್ ಝಡ್ (Gen Z) ಮತ್ತು ಜನರೇಷನ್ ಆಲ್ಫಾ (Gen Alpha) ಯುವಕರೊಂದಿಗೆ ಸಂವಾದ ನಡೆಸಿದ ಒಂದು ದಿನದ ಬಳಿಕ ಪ್ರಿಯಾಂಕ್ ಖರ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (X)ನಲ್ಲಿ ಪೋಸ್ಟ್ ಮಾಡಿರುವ ಅವರು, "ಆರ್‌ಎಸ್‌ಎಸ್ ಮತ್ತು ಬಿಜೆಪಿ ತಮ್ಮ ಪದಪ್ರಯೋಗವನ್ನು ಬದಲಾಯಿಸಲು ಹರಸಾಹಸಪಡುತ್ತಿವೆ. ಆದರೆ, ದುರದೃಷ್ಟವಶಾತ್ ಅದರಿಂದ ಅವರ ಸಿದ್ಧಾಂತ ಬದಲಾಗುವುದಿಲ್ಲ. ಜನರನ್ನು ವಿಭಜಿಸುವುದು, ಯುವಕರನ್ನು ದಾರಿ ತಪ್ಪಿಸುವುದು ಮತ್ತು ದ್ವೇಷವನ್ನು ಹೊಸ ರೂಪದಲ್ಲಿ ಮಂಡಿಸುವುದು ಮುಂದುವರಿದಿದೆ. ಅದೇ ಸಂಘ, ಭಾಷೆ ಮಾತ್ರ ಹೊಸದು" ಎಂದು ಟೀಕಿಸಿದ್ದಾರೆ.
ಇದರ ನಡುವೆ ಯುವ ಸಮಾವೇಶದಲ್ಲಿ ಮಾತನಾಡಿದ ಮೋಹನ್ ಭಾಗವತ್, ಸಮಾಜದಲ್ಲಿ ತಾರತಮ್ಯ ಸಂಪೂರ್ಣವಾಗಿ ನಿರ್ಮೂಲನೆಯಾಗುವವರೆಗೆ ಮೀಸಲಾತಿ ವ್ಯವಸ್ಥೆ ಮುಂದುವರಿಯಬೇಕು ಎಂದು ಹೇಳಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಉಲ್ಲೇಖಿಸಿದ ಅವರು, ಮೀಸಲಾತಿ ಸಾಮಾಜಿಕ ಕಾರಣಗಳಿಂದ ಜಾರಿಯಲ್ಲಿದ್ದು, ಸಮಾಜದಲ್ಲಿ ಅಸಮಾನತೆ ಇರುವವರೆಗೆ ಅದು ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
"ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯ ಬಗ್ಗೆ ಏನು ಹೇಳಿದ್ದರು ಎಂಬುದನ್ನು ನಾವು ಪ್ರಾಮಾಣಿಕವಾಗಿ ಅನುಸರಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಮೀಸಲಾತಿ ಸಾಮಾಜಿಕ ಕಾರಣಗಳಿಂದ ಬಂದಿದೆ. ಸಮಾಜದಲ್ಲಿ ತಾರತಮ್ಯ ಇರುವವರೆಗೆ ಅದು ಮುಂದುವರಿಯಲಿದೆ. ಈಗಾಗಲೇ ಅದರ ಲಾಭ ಪಡೆದವರು ಮುಂದೆ ಇತರರಿಗೂ ಅವಕಾಶ ಕಲ್ಪಿಸಬೇಕು" ಎಂದು ಹೇಳಿದ್ದಾರೆ.
ಮೀಸಲಾತಿಯ ಒಳವರ್ಗೀಕರಣ ಕುರಿತು ವಿವಿಧ ರಾಜ್ಯಗಳಲ್ಲಿ ಚರ್ಚೆಗಳು ನಡೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, ಕೆಲವು ರಾಜ್ಯಗಳಲ್ಲಿ ವರ್ಗೀಕರಣಕ್ಕೆ ಬೇಡಿಕೆಗಳು ಕೇಳಿಬರುತ್ತಿವೆ ಹಾಗೂ ಸುಪ್ರೀಂ ಕೋರ್ಟ್ ಕೂಡ ಈ ಕುರಿತು ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ ಎಂದು ಹೇಳಿದರು.

ಅಂಬೇಡ್ಕರ್ ರ ಮೀಸಲಾತಿ ತತ್ವ ಅನುಸರಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್; Video
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


