ಎಸ್‌ಐಆರ್ ವೇಳೆ ASDDO ಪಟ್ಟಿಯಲ್ಲಿ ಹೆಸರು ಇದೆಯೇ: ಮತದಾರರು ಏನು ಮಾಡಬೇಕು?
ಈ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಮತದಾರರು ತಮ್ಮ ಹೆಸರು ತಪ್ಪಾಗಿ ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ನಡೆದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ವೇಳೆ, ಕೆಲ ಮತದಾರರು ತಮ್ಮ ಸಹಿ ಮಾಡಿದ ಎಣಿಕೆ ನಮೂನೆ (Enumeration Form)ಯನ್ನು ಬೂತ್ ಮಟ್ಟದ ಅಧಿಕಾರಿಗೆ (BLO) ಸಲ್ಲಿಸಿದ್ದರೂ, ತಮ್ಮ ಹೆಸರು ASDDO (Absent, Shifted, Dead, Duplicate, Others) ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಮತದಾರರು ತಮ್ಮ ಹೆಸರು ತಪ್ಪಾಗಿ ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.
ನಾವು ವಿಧಾನಸಭಾ ಕ್ಷೇತ್ರವಾರು ಹಾಗೂ ಮತಗಟ್ಟೆವಾರು ಎಎಸ್‌ಡಿಡಿಒ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ನಮೂನೆ ಸಲ್ಲಿಸಿ ಸ್ವೀಕೃತಿ ಪತ್ರ (Acknowledgement) ಪಡೆದಿದ್ದರೂ, ನಿಮ್ಮ ಹೆಸರು ಎಎಸ್‌ಡಿಡಿಒ (ಹೊರಗಿಡುವ) ಪಟ್ಟಿಯಲ್ಲಿ ಇದ್ದರೆ, ತಕ್ಷಣವೇ ಬಿಎಲ್‌ಒ ಅವರನ್ನು ಸಂಪರ್ಕಿಸಿ 'ರೋಲ್‌ಬ್ಯಾಕ್' ಮಾಡಿಸಬೇಕು ಎಂದರು.
ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಿಸಿರುವ ಮಾಹಿತಿ ಪ್ರಕಾರ, ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಇರುವುದು ಮಾತ್ರಕ್ಕೆ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂಬ ಅರ್ಥವಲ್ಲ. ಪರಿಶೀಲನೆಗಾಗಿ ಮಾತ್ರ ಆ ದಾಖಲೆ ಗುರುತಿಸಲಾಗಿದೆ.
ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಕಂಡುಬಂದರೆ ಏನು ಮಾಡಬೇಕು?
CEO ಕರ್ನಾಟಕ ವೆಬ್‌ಸೈಟ್ ಅಥವಾ ನಿಮ್ಮ ಬೂತ್ ಮಟ್ಟದ ಅಧಿಕಾರಿ (BLO) ಮೂಲಕ ನಿಮ್ಮ ಹೆಸರು ಎಎಸ್‌ಡಿಡಿಒ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ.
ನಿಮ್ಮ ಹೆಸರು ಯಾವ ಕಾರಣಕ್ಕಾಗಿ ಗುರುತಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಕಾರಣಗಳು:
ಗೈರುಹಾಜರು (Absent)
ಸ್ಥಳಾಂತರ (Shifted)
ಮೃತ (Dead)
ನಕಲು (Duplicate)
ಇತರೆ (Others)
ಅಗತ್ಯ ದಾಖಲೆಗಳೊಂದಿಗೆ ಎಣಿಕೆ ನಮೂನೆಯನ್ನು (Enumeration Form) ಮರುಸಲ್ಲಿಸಿ ಅಥವಾ ಸರಿಪಡಿಸಿ.
ದಾಖಲೆ ಸಲ್ಲಿಸಿದ ನಂತರ, ಪರಿಶೀಲನೆ ಪೂರ್ಣಗೊಂಡು ನಿಮ್ಮ ಹೆಸರು ಸರಿಯಾಗಿ ನವೀಕರಿಸುವವರೆಗೆ ಬಿಎಲ್‌ಒ ಅಥವಾ ಮತದಾರರ ನೋಂದಣಿ ಅಧಿಕಾರಿ (ERO) ಅವರೊಂದಿಗೆ ನಿರಂತರ ಸಂಪರ್ಕದಲ್ಲಿರಿ.
ನೀವು ಶಾಶ್ವತವಾಗಿ ಬೇರೆ ಕ್ಷೇತ್ರಕ್ಕೆ ಸ್ಥಳಾಂತರವಾಗಿದ್ದರೆ, ನಮೂನೆ-6 (Form 6) ಅಥವಾ ಎಸ್‌ಐಆರ್ ಅಡಿಯಲ್ಲಿ ಅನ್ವಯಿಸುವ ಪ್ರಕ್ರಿಯೆಯ ಮೂಲಕ ಹೊಸ ವಿಳಾಸದಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳಿ.
'ರೋಲ್‌ಬ್ಯಾಕ್' ಸೌಲಭ್ಯ ಆಗಸ್ಟ್ 8ರವರೆಗೆ
ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರ ಪ್ರಕಾರ, ಬಿಎಲ್‌ಒ ನಮೂನೆಯನ್ನು ಸಂಗ್ರಹಿಸಿದ್ದರೂ ಅದನ್ನು ಡಿಜಿಟಲೀಕರಣ (Upload) ಮಾಡದಿದ್ದರೆ ಅಥವಾ ತಪ್ಪಾಗಿ ಎಎಸ್‌ಡಿಡಿಒ ಪಟ್ಟಿಗೆ ಸೇರಿಸಿದ್ದರೆ, BLO Appನಲ್ಲಿ 'ರೋಲ್‌ಬ್ಯಾಕ್' ಆಯ್ಕೆ ಇದೆ.
ಆಗಸ್ಟ್ 8ರವರೆಗೆ ಬಿಎಲ್‌ಒ ಅವರು ನಿಮ್ಮ ನಮೂನೆಯನ್ನು ಎಎಸ್‌ಡಿಡಿಒ ಪಟ್ಟಿಯಿಂದ ಡಿಜಿಟಲೀಕೃತ ನಮೂನೆಗಳ ಪಟ್ಟಿಗೆ ವರ್ಗಾಯಿಸಬಹುದು. ಬಳಿಕ ನಿಮ್ಮ ನಮೂನೆ ಡಿಜಿಟಲೀಕೃತ ಪಟ್ಟಿಗೆ ಸೇರಿರುವುದನ್ನು BLO Appನಲ್ಲೇ ಖಚಿತಪಡಿಸಿಕೊಳ್ಳಬೇಕು. ಈ ಪ್ರಕ್ರಿಯೆಗೆ ಪ್ರತ್ಯೇಕ ಸ್ವೀಕೃತಿ ಪತ್ರ ಸೃಷ್ಟಿಯಾಗುವುದಿಲ್ಲ.
"ನಿಮ್ಮ ಬಳಿ ಸ್ವೀಕೃತಿ ಪತ್ರ (Acknowledgement) ಇದ್ದು, ಜೊತೆಗೆ ನಿಮ್ಮ ಹೆಸರು ಎಎಸ್‌ಡಿಡಿಒ ಪಟ್ಟಿಯಲ್ಲಿ ಇಲ್ಲದಿದ್ದರೆ ಮಾತ್ರ ನಿಮ್ಮ ಎಸ್‌ಐಆರ್ ಎಣಿಕೆ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಪರಿಗಣಿಸಲಾಗುತ್ತದೆ" ಎಂದು ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



