ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಾಫಿ ಸಾಕ್ಷಿಯಾಗಲು A-14 ಪ್ರದೋಷ್ ಅರ್ಜಿ; ನಟ ದರ್ಶನ್‌ಗೆ ಹೆಚ್ಚಿದ ಸಂಕಷ್ಟ..!
ತಾನು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ನ್ಯಾಯಾಲಯದ ಮುಂದೆ ಸತ್ಯವಾಗಿ ತಿಳಿಸಲು ಸಿದ್ಧನಿದ್ದು, ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಪ್ರಕರಣದ 14ನೇ ಆರೋಪಿ (ಎ-14) ಪ್ರದೋಷ್ ತನ್ನನ್ನು 'ಮಾಫಿ ಸಾಕ್ಷಿ'ಯಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದ ಕುರಿತು ಸತ್ಯಾಂಶಗಳನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಲು ಸಿದ್ಧನಿದ್ದೇನೆ ಎಂದು ಪ್ರದೋಷ್ ಮನವಿ ಮಾಡಿದ್ದಾನೆಂದು ತಿಳಿದುಬಂದಿದೆ.
ಪ್ರದೋಷ್ ಪರ ವಕೀಲರು ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ, ತಾನು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ನ್ಯಾಯಾಲಯದ ಮುಂದೆ ಸತ್ಯವಾಗಿ ತಿಳಿಸಲು ಸಿದ್ಧನಿದ್ದು, ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿದ್ದಾರೆ.
ಈ ಅರ್ಜಿಯ ವಿಚಾರಣೆಗಾಗಿ ಪ್ರದೋಷ್ ಅವರನ್ನು ಇಂದು ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಲಿನಿಂದಲೇ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಈ ವೇಳೆ ನ್ಯಾಯಾಲಯ ಅವರ ಮನವಿಯನ್ನು ಪರಿಶೀಲಿಸಿ. ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.
ಈ ನಡುವೆ ಪ್ರದೋಷ್ ಪರ ವಕೀಲರು ಮತ್ತೊಂದು ಮನವಿಯನ್ನೂ ಸಲ್ಲಿಸಿದ್ದು, ವಿಚಾರಣೆ ವೇಳೆ ದರ್ಶನ್ ಇರುವ ಕೊಠಡಿಯಿಂದ ಬೇರ್ಪಡಿಸಿ, ಪ್ರತ್ಯೇಕ ಜೈಲು ಕೊಠಡಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವಂತೆ ಕೋರಿದ್ದಾರೆ.
ಪ್ರಕರಣದ ಇತರ ಆರೋಪಿಗಳಿಂದ ಪ್ರಭಾವ ಅಥವಾ ಒತ್ತಡ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಅರ್ಜಿ ಕುರಿತು ನ್ಯಾಯಾಲಯ ಸರ್ಕಾರದ ಪರ ವಕೀಲರ (ಪ್ರಾಸಿಕ್ಯೂಷನ್) ಅಭಿಪ್ರಾಯ ಕೇಳಿದ್ದು, ಅವರ ನಿಲುವು ಸಲ್ಲಿಸಲು ಸೂಚನೆ ನೀಡಿದೆ.
ಪ್ರದೋಷ್ ವಿರುದ್ಧದ ಆರೋಪವೇನು?
ಪೊಲೀಸರ ಆರೋಪಗಳ ಪ್ರಕಾರ, ಪ್ರದೋಷ್ ಘಟನೆ ನಡೆದ ವೇಳೆ ಸ್ಥಳದಲ್ಲಿದ್ದ ಆರೋಪಿಗಳಲ್ಲೊಬ್ಬನಾಗಿದ್ದು, ರೇಣುಕಾಸ್ವಾಮಿ ಮೇಲಿನ ಹಲ್ಲೆ ನಡೆಯುವ ವೇಳೆ ಅಲ್ಲೇ ಇದ್ದರು ಎನ್ನಲಾಗಿದೆ.
ಮೃತದೇಹ ಸಾಗಿಸುವ ಸಂಬಂಧವೂ ಅವರು ಕೆಲವು ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಆರೋಪವನ್ನು ತನಿಖಾ ಸಂಸ್ಥೆ ದಾಖಲಿಸಿದೆ. ಆದರೆ, ಈ ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಅಂತಿಮವಾಗಿ ಸಾಬೀತಾಗಬೇಕಿದೆ.
ಪ್ರದೋಷ್ ಮಾಫಿ ಸಾಕ್ಷಿಯಾದರೆ ಪ್ರಕರಣದ ಮೇಲೆ ಪರಿಣಾಮವೇನು?
ಪ್ರದೋಷ್ ಅವರನ್ನು ನ್ಯಾಯಾಲಯ ಮಾಫಿ ಸಾಕ್ಷಿಯಾಗಿ ಪರಿಗಣಿಸಿದರೆ, ಅವರು ನೀಡುವ ಹೇಳಿಕೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಸಾಕ್ಷ್ಯವಾಗುವ ಸಾಧ್ಯತೆ ಇದೆ. ಆದರೆ, ಅವರ ಅರ್ಜಿಯನ್ನು ಅಂಗೀಕರಿಸಬೇಕೇ ಅಥವಾ ಬೇಡವೇ ಎಂಬುದನ್ನು ನ್ಯಾಯಾಲಯ ಹಾಗೂ ಕಾನೂನು ಪ್ರಕ್ರಿಯೆಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುತ್ತದೆ.
ದರ್ಶನ್ ಮತ್ತು ಪವಿತ್ರಾಗೆ ಹೆಚ್ಚಿದ ಸಂಕಷ್ಟ
ಇನ್ನು ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲನೇ ಆರೋಪಿ (A1)ಯಾಗಿದ್ದರೆ, ನಟ ದರ್ಶನ್ ಎರಡನೇ ಆರೋಪಿ (A2) ಆಗಿದ್ದಾರೆ.
ಈಗ ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ನಟ ದರ್ಶನ್‌ಗೆ ದೊಡ್ಡ ಸಂಕಷ್ಟ ತಂದೊಡ್ಡಲಿದೆ. ಪ್ರದೋಷ್ ನೀಡುವ ಹೇಳಿಕೆಗಳು ಈ ಪ್ರಕರಣದ ತನಿಖೆಯಲ್ಲಿ ಅತ್ಯಂತ ನಿರ್ಣಾಯಕವಾಗಲಿವೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



