ರಾಜ್ಯ

ಆನೆಯೊಂದಿಗೆ selfie ತೆಗೆಯಲು ಹೋಗಿ ಜೀವ ಕಳೆದುಕೊಂಡ ಉದ್ಯಮಿ; ಕನಕಪುರ ವನ್ಯಜೀವಿ ಅಭಯಾರಣ್ಯದಲ್ಲಿ ದುರಂತ..!

ಸೋಮವಾರ ಮುಂಜಾನೆ ಸುಮಾರು 1.30ರ ವೇಳೆಗೆ ಕನಕಪುರ ವನ್ಯಜೀವಿ ಅಭಯಾರಣ್ಯದ ಬಸವನಬೆಟ್ಟ ಸಮೀಪ, ಕರಬಗೆರೆ ಕೆರೆಯ ಬಳಿ ಈ ಘಟನೆ ನಡೆದಿದೆ.

ಆನೆಯೊಂದಿಗೆ selfie ತೆಗೆಯಲು ಹೋಗಿ ಜೀವ ಕಳೆದುಕೊಂಡ ಉದ್ಯಮಿ; ಕನಕಪುರ ವನ್ಯಜೀವಿ ಅಭಯಾರಣ್ಯದಲ್ಲಿ ದುರಂತ..!
ಎಐ ಸೃಷ್ಟಿತ ಚಿತ್ರ
Published On :

ಬೆಂಗಳೂರು: ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಕಾಡಾನೆ ಜೊತೆಗೆ ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಕನಕಪುರ ವನ್ಯಜೀವಿ ಅಭಯಾರಣ್ಯದಲ್ಲಿ ನಡೆದಿದೆ.

ಆರಂಭದಲ್ಲಿ ಸ್ನೇಹಿತರು ಆನೆ ಹಠಾತ್ ದಾಳಿ ಮಾಡಿದೆ ಎಂದು ಹೇಳಿದ್ದರೂ, ಅರಣ್ಯ ಇಲಾಖೆ ನಡೆಸಿದ ತನಿಖೆಯಲ್ಲಿ ಸೆಲ್ಫಿ ತೆಗೆಯುವ ಪ್ರಯತ್ನವೇ ದುರಂತಕ್ಕೆ ಕಾರಣವಾಗಿರುವುದು ಬೆಳಕಿಗೆ ಬಂದಿದೆ.

ಮೃತರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ, 52 ವರ್ಷದ ಉದ್ಯಮಿ ನರೇಂದ್ರ ಶಿಂಧೆ ಎಂದು ಗುರುತಿಸಲಾಗಿದೆ. ನರೇಂದ್ರ ಶಿಂಧೆ ಅವರು ತಮ್ಮ 10 ಸ್ನೇಹಿತರೊಂದಿಗೆ ರೆಸಾರ್ಟ್‌ಗೆ ತೆರಳಿದ್ದು, ಅಲ್ಲಿಂದ ಮೂರು ಕಾರುಗಳಲ್ಲಿ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಸೋಮವಾರ ಮುಂಜಾನೆ ಸುಮಾರು 1.30ರ ವೇಳೆಗೆ ಕನಕಪುರ ವನ್ಯಜೀವಿ ಅಭಯಾರಣ್ಯದ ಬಸವನಬೆಟ್ಟ ಸಮೀಪ, ಕರಬಗೆರೆ ಕೆರೆಯ ಬಳಿ ಈ ಘಟನೆ ನಡೆದಿದೆ.

ಸೋಲಿಗೆರೆ ಮತ್ತು ಹರಿಹರ ಗ್ರಾಮಗಳ ನಡುವಿನ ಅರಣ್ಯ ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸಿದ ಬಳಿಕ ಶಿಂಧೆ ಕಾರಿನಿಂದ ಕೆಳಗಿಳಿದಿದ್ದರು.

ಮೊದಲಿಗೆ ಅವರೊಂದಿಗೆ ಇದ್ದ ಸ್ನೇಹಿತರು, ಶಿಂಧೆ ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಇಳಿದಿದ್ದಾಗ ಕಾಡಾನೆ ದಾಳಿ ನಡೆಸಿದೆ ಎಂದು ಹೇಳಿದ್ದರು. ಆದರೆ, ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಈ ವಾದವನ್ನು ತಳ್ಳಿಹಾಕಿದ್ದಾರೆ.

ಅಧಿಕಾರಿಗಳ ಪ್ರಕಾರ, ಕೆರೆಯ ಸಮೀಪ ನಿಂತಿದ್ದ ಕಾಡಾನೆಯೊಂದಿಗೆ ಫೋಟೊ ಅಥವಾ ಸೆಲ್ಫಿ ತೆಗೆಯಲು ಶಿಂಧೆ ಕಾರಿನಿಂದ ಇಳಿದಿದ್ದರು. ಆನೆಯತ್ತ ಬೆನ್ನು ಮಾಡಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ.

ಆನೆಯ ದಂತಗಳು ಶಿಂಧೆ ಅವರ ಸೊಂಟ ಹಾಗೂ ಬೆನ್ನಿಗೆ ತಾಕಿದ್ದು, ಅವರು ತಪ್ಪಿಸಿಕೊಳ್ಳುವಷ್ಟರಲ್ಲಿ ಸಮೀಪದ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಆನೆ ದಾಳಿ ನಡೆಸಿದ ಕ್ಷಣದಿಂದ ಕೇವಲ ಮೂರರಿಂದ ಐದು ಸೆಕೆಂಡುಗಳಲ್ಲೇ ಅವರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಸ್ನೇಹಿತರು ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಕೆರೆಯಿಂದ ಹೊರತೆಗೆದು ಬೆಂಗಳೂರಿಗೆ ಕೊಂಡೊಯ್ಯಲು ಪ್ರಯತ್ನಿಸಿದ್ದರು. ಆದರೆ, ಅರಣ್ಯ ಸಿಬ್ಬಂದಿ ಗೇಟ್ ಬಳಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ರಾಮನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎಂ. ರಾಮಕೃಷ್ಣಪ್ಪ ಮಾತನಾಡಿ, ಘಟನೆ ನಡೆದ ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಕಾರು ನಿಲ್ಲಿಸಿದ್ದ ಸ್ಥಳದಿಂದ ಕೆರೆಯವರೆಗೆ ಸುಮಾರು 50 ಮೀಟರ್ ದೂರವಿದ್ದು, ಆನೆ ದಾಳಿ ನಡೆಸಿದಾಗ ಶಿಂಧೆ ಅವರಿಗೆ ತಪ್ಪಿಸಿಕೊಳ್ಳುವ ಯಾವುದೇ ಅವಕಾಶ ಇರಲಿಲ್ಲ ಎಂದು ಹೇಳಿದ್ದಾರೆ.

ಈ ಅರಣ್ಯ ಪ್ರದೇಶದಲ್ಲಿ ಸೆಲ್ಫಿ ಅಥವಾ ಫೋಟೊ ತೆಗೆಯುವ ಪ್ರಯತ್ನದ ವೇಳೆ ಕಾಡಾನೆ ದಾಳಿಯಿಂದ ಸಂಭವಿಸಿದ ಮೊದಲ ಸಾವು ಇದಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಈ ನಡುವೆ ಅರಣ್ಯಾಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಕಾಡು ಪ್ರಾಣಿಗಳ ಸಮೀಪ ಹೋಗುವುದು, ಫೋಟೊ ಅಥವಾ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುವುದು ಜೀವಕ್ಕೆ ಅಪಾಯಕಾರಿಯಾಗಬಹುದು ಎಂದು ಮನವಿ ಮಾಡಿದ್ದಾರೆ. ವನ್ಯಜೀವಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ಅವರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.