ರಾಜ್ಯ

ಮಂಡ್ಯ: ಕಾರು ಅಪಘಾತದಲ್ಲಿ ಯುವತಿ ಅನುಮಾನಾಸ್ಪದ ಸಾವು; ಬರ್ತ್‌ಡೇ ಪಾರ್ಟಿಗೆ ಕರೆದು ರೇಪ್‌ಗೆ ಯತ್ನಿಸಿ, ಕೊಲೆ ಆರೋಪ!

ಮೃತಪಟ್ಟ ಯುವತಿಯನ್ನು ಹೊನ್ನೆಮಡು ಗ್ರಾಮದ 19 ವರ್ಷದ ನವೀನಾ ಎಂದು ಗುರುತಿಸಲಾಗಿದ್ದು, ಮಂಡ್ಯ ನಗರದ ಹಣ್ಣಿನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡು ಪಿಜಿಯಲ್ಲಿ ವಾಸವಿದ್ದರು ಎನ್ನಲಾಗಿದೆ.

ಮಂಡ್ಯ: ಕಾರು ಅಪಘಾತದಲ್ಲಿ ಯುವತಿ ಅನುಮಾನಾಸ್ಪದ ಸಾವು; ಬರ್ತ್‌ಡೇ ಪಾರ್ಟಿಗೆ ಕರೆದು ರೇಪ್‌ಗೆ ಯತ್ನಿಸಿ, ಕೊಲೆ ಆರೋಪ!
ಅಪಘಾತವಾದ ಕಾರು ಹಾಗೂ ಯುವತಿ
Published On :

ಮಂಡ್ಯ: ಮಂಡ್ಯದಲ್ಲಿ ಕಾರು ಅಪಘಾತದಲ್ಲಿ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಹುಟ್ಟುಹಬ್ಬ ಆಚರಣೆಗೆಂದು ಕರೆದು ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದಾರೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಮೃತಪಟ್ಟ ಯುವತಿಯನ್ನು ಹೊನ್ನೆಮಡು ಗ್ರಾಮದ 19 ವರ್ಷದ ನವೀನಾ ಎಂದು ಗುರುತಿಸಲಾಗಿದ್ದು, ಮಂಡ್ಯ ನಗರದ ಹಣ್ಣಿನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡು ಪಿಜಿಯಲ್ಲಿ ವಾಸವಿದ್ದರು ಎನ್ನಲಾಗಿದೆ.

ಕಳೆದ ಭಾನುವಾರ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅಂದು ಮನೆಗೆ ಹೋಗುವುದಾಗಿ ಪಿಜಿ ಮಾಲೀಕರಿಗೆ ತಿಳಿಸಿದ್ದ ನವೀನಾ, ತನ್ನ ಸ್ನೇಹಿತರಾದ ಅಶ್ವಿನಿ, ವಿಷ್ಣು ಹಾಗೂ ಶಿವಕುಮಾರ್ ಜೊತೆ ಕೊಮ್ಮೇರಹಳ್ಳಿ ಬೆಟ್ಟಕ್ಕೆ ಕಾರಿನಲ್ಲಿ ತೆರಳಿದ್ದಳು.

ಈ ವೇಳೆ ಕೊಮ್ಮೇರಹಳ್ಳಿ ಬಳಿ ಕಾರು ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ ನವೀನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಈ ಅಪಘಾತ ಸಾಲು ಸಾಲು ಅನುಮಾನಗಳಿಗೆ ಕಾರಣವಾಗಿದೆ.

ಸಂಜೆ ನಡೆದ ಅಪಘಾತದ ಬಗ್ಗೆ ರಾತ್ರಿ 11 ಗಂಟೆಯ ಸುಮಾರಿಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ. ಇದೇ ವಿಷಯ ಈಗ ಮೃತಳ ಕುಟುಂಬಸ್ಥರಲ್ಲಿ ಅನುಮಾನ ಮೂಡಿಸಿದೆ. ಮೇಲ್ನೋಟಕ್ಕೆ ಇದು ಅಪಘಾತದಂತೆ ಕಂಡರೂ, ಕೊಲೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಕರೆದೊಯ್ದ ಸ್ನೇಹಿತರೇ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ನವೀನಾ ಇದಕ್ಕೆ ಒಪ್ಪದಿದ್ದಾಗ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ಅಪಘಾತವೆಂದು ಬಿಂಬಿಸಿದ್ದಾರೆ. ಕೊಲೆ ಮಾಡಿದ ನಂತರ ನವೀನಾಳ ಶವವನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಕೂರಿಸಿ, ಲೈಟ್ ಕಂಬಕ್ಕೆ ಡಿಕ್ಕಿ ಹೊಡೆಸಿದ್ದಾರೆ ಎಂದು ನವೀನಾಳ ತಾಯಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಂಡ್ಯ ಎಸ್‌ಪಿ ಡಾ.ಶೋಭರಾಣಿ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಅಶ್ವಿನಿ ಹಾಗೂ ನವೀನಾ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ವಿಷ್ಣು ಹಾಗೂ ಶಿವಕುಮಾರ್ ಕಾರ್ಪೇಂಟರ್ ಕೆಲಸ ಮಾಡುತ್ತಿದ್ದರು. ಹುಟ್ಟುಹಬ್ಬ ಆಚರಣೆಗೆಂದು ಕಾರಿನಲ್ಲಿ ಒಟ್ಟಿಗೆ ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.