ಗ್ರೇಟರ್ ಬೆಂಗಳೂರು ಬಳಿಕ ಪೊಲೀಸ್ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆ; 5 ವಿಭಾಗಗಳಾಗಿ ವಿಭಜಿಸಲು ಕರಡು ಸಿದ್ಧ, ಅಪರಾಧ ನಿಯಂತ್ರಣಕ್ಕೆ ಹೊಸ ತಂತ್ರ..!
ಪ್ರತಿ ವಿಭಾಗಕ್ಕೂ ಐಜಿಪಿ (IGP) ಅಥವಾ ಡಿಐಜಿಪಿ (DIGP) ಹುದ್ದೆಯ ಪೊಲೀಸ್ ಆಯುಕ್ತರನ್ನು ನೇಮಕ ಮಾಡಲಾಗುತ್ತದೆ. ಅವರು ತಮ್ಮ ವ್ಯಾಪ್ತಿಯ ಅಪರಾಧ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ.

ಬೆಂಗಳೂರು: ವೇಗವಾಗಿ ವಿಸ್ತರಿಸುತ್ತಿರುವ ನಗರದಲ್ಲಿ ಅಪರಾಧ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಾದರಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಮಧ್ಯ (Central), ಉತ್ತರ (North), ದಕ್ಷಿಣ (South), ಪೂರ್ವ (East) ಹಾಗೂ ಪಶ್ಚಿಮ (West) ಎಂದು ಐದು ವಿಭಾಗಗಳಾಗಿ ಮರುರಚಿಸುವ ಕರಡು ಪ್ರಸ್ತಾವನೆ ಸಿದ್ಧವಾಗಿದ್ದು,ನಗರ ಪೊಲೀಸರು ಆಗಸ್ಟ್ 1ರಂದು ಕರಡು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ಈ ಹೊಸ ವ್ಯವಸ್ಥೆಯ ಮೂಲಕ ಅಪರಾಧ ನಿಯಂತ್ರಣ, ತನಿಖೆ ಮತ್ತು ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಪ್ರಸ್ತಾವನೆಯಂತೆ, ಪೊಲೀಸ್ ಮಹಾನಿರ್ದೇಶಕ (DGP) ಹುದ್ದೆಯ ಮುಖ್ಯ ಪೊಲೀಸ್ ಆಯುಕ್ತ (Chief Commissioner) ಅವರ ನೇತೃತ್ವದಲ್ಲಿ ಐದು ವಿಭಾಗಗಳು ಕಾರ್ಯನಿರ್ವಹಿಸಲಿವೆ.
ಪ್ರತಿ ವಿಭಾಗಕ್ಕೂ ಐಜಿಪಿ (IGP) ಅಥವಾ ಡಿಐಜಿಪಿ (DIGP) ಹುದ್ದೆಯ ಪೊಲೀಸ್ ಆಯುಕ್ತರನ್ನು ನೇಮಕ ಮಾಡಲಾಗುತ್ತದೆ. ಅವರು ತಮ್ಮ ವ್ಯಾಪ್ತಿಯ ಅಪರಾಧ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ.
ಇದರ ಜೊತೆಗೆ ಕೇಂದ್ರ ಅಪರಾಧ ವಿಭಾಗ (CCB), ಗುಪ್ತಚರ ವಿಭಾಗ, ಅಪರಾಧ ಮತ್ತು ಸೈಬರ್ ಕ್ರೈಂ ವಿಭಾಗ, ಆಡಳಿತ, ವಿಐಪಿ ಭದ್ರತೆ ಹಾಗೂ ಸಂಚಾರ ವಿಭಾಗ ನೇರವಾಗಿ ಮುಖ್ಯ ಪೊಲೀಸ್ ಆಯುಕ್ತರ ಅಧೀನದಲ್ಲಿರಲಿವೆ.
ಪೂರ್ವ ವಿಭಾಗವನ್ನು ಹೊರತುಪಡಿಸಿ ಉಳಿದ ನಾಲ್ಕು ವಿಭಾಗಗಳಲ್ಲಿ ಕಾನೂನು ಸುವ್ಯವಸ್ಥೆಗೆ ತಲಾ ಮೂರು ಡಿಸಿಪಿಗಳು ಹಾಗೂ ಸಂಚಾರಕ್ಕೆ ಒಬ್ಬ ಡಿಸಿಪಿ ಇರಲಿದ್ದಾರೆ. ಐದು ವಿಭಾಗಗಳಲ್ಲೂ ಮಹಿಳಾ, ಸೈಬರ್, ಆರ್ಥಿಕ ಮತ್ತು ಮಾದಕ ವಸ್ತು (CEN) ಅಪರಾಧಗಳಿಗಾಗಿ ಪ್ರತ್ಯೇಕ ಪೊಲೀಸ್ ಠಾಣೆ ಸ್ಥಾಪಿಸುವ ಪ್ರಸ್ತಾವನೆಯೂ ಇದೆ. ಈ ಪುನರ್‌ರಚನೆಗೆ ಸುಮಾರು ರೂ.764 ಕೋಟಿಗೂ ಹೆಚ್ಚು ವೆಚ್ಚವಾಗುವ ಅಂದಾಜು ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, "ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಆದರೆ, ಇನ್ನೂ ಯಾವುದೇ ಅಂತಿಮ ಪ್ರಸ್ತಾವನೆ ಸಿದ್ಧವಾಗಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಸ್ತುತ 800 ಚದರ ಕಿಲೋಮೀಟರ್ ವ್ಯಾಪ್ತಿ ಹಾಗೂ 118 ಪೊಲೀಸ್ ಠಾಣೆಗಳೊಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯ ಕಾರ್ಯನಿರ್ವಹಿಸುತ್ತಿದೆ. ಹಲವು ವರ್ಷಗಳಿಂದ ಇದರ ಪುನರ್‌ರಚನೆ ಕುರಿತು ಚರ್ಚೆ ನಡೆಯುತ್ತಿದ್ದು, ನಗರದ ವಿಸ್ತರಣೆ ಮತ್ತು ಜನಸಂಖ್ಯೆ ಹೆಚ್ಚಳದಿಂದ ಇದು ಅನಿವಾರ್ಯವಾಗಿದೆ ಎನ್ನಲಾಗಿದೆ.
ಆದರೆ, ಕೆಲವು ನಿವೃತ್ತ ಐಪಿಎಸ್ ಅಧಿಕಾರಿಗಳು ಈ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸ್ ವ್ಯವಸ್ಥೆಯನ್ನು ಜಿಬಿಎ ಮಾದರಿಯಲ್ಲಿ ವಿಭಜಿಸುವುದು ಸೂಕ್ತವಲ್ಲ. ಇದರಿಂದ ಮುಖ್ಯ ಪೊಲೀಸ್ ಆಯುಕ್ತರ ಅಧಿಕಾರ ದುರ್ಬಲವಾಗಬಹುದು, ಅಧಿಕಾರ ವ್ಯಾಪ್ತಿಯಲ್ಲಿ ಗೊಂದಲ ಹಾಗೂ ಹೊಣೆಗಾರಿಕೆಯ ಕೊರತೆ ಉಂಟಾಗಬಹುದು. ಐದು ವಿಭಾಗಗಳ ಬದಲು ಎರಡು ಅಥವಾ ಮೂರು ವಿಭಾಗಗಳಾಗಿ ಮರುರಚನೆ ಮಾಡುವುದು ಹೆಚ್ಚು ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



