ಭ್ರಷ್ಟಾಚಾರದಿಂದ ದೂರಿವಿರಿ, ಮಧ್ಯವರ್ತಿಗಳಿಗೆ ಅವಕಾಶ ಕೊಡದಿರಿ: KAS ಅಧಿಕಾರಿಗಳಿಗೆ ಸಿಎಂ ಮನವಿ
ಮಧ್ಯವರ್ತಿಗಳು ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಬೇಕು. ಅಧಿಕಾರಿಗಳು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ, ಶೀಘ್ರವಾಗಿ ಕಡತಗಳನ್ನು ವಿಲೇವಾರಿ ಮಾಡಬೇಕು.

ಬೆಂಗಳೂರು: ಭ್ರಷ್ಟಾಚಾರದಿಂದ ದೂರವಿದ್ದು, “ಮಧ್ಯವರ್ತಿಗಳ” ಹಸ್ತಕ್ಷೇಪವನ್ನು ಕಚೇರಿಗಳಿಂದ ಸಂಪೂರ್ಣವಾಗಿ ಹೊರಗಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಎಸ್ ಅಧಿಕಾರಿಗಳಿಗೆ ಸೋಮವಾರ ಸೂಚನೆ ನೀಡಿದ್ದಾರೆ.
ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಒಕ್ಕೂಟ ಸಂಘವು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಮಧ್ಯವರ್ತಿಗಳು ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಬೇಕು. ಅಧಿಕಾರಿಗಳು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ, ಶೀಘ್ರವಾಗಿ ಕಡತಗಳನ್ನು ವಿಲೇವಾರಿ ಮಾಡಬೇಕು. ವಿಳಂಬ ನೀತಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ ಎಂದು ಹೇಳಿದರು.
ಕೆಎಎಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಮಾಡಬೇಕು. ಕೆಎಎಸ್ ಅಧಿಕಾರಿಗಳ ಸಂಘಕ್ಕೆ ನೂರು ವರ್ಷಗಳ ಇತಿಹಾಸವಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ರಾಜ್ಯಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಸಾಮಾಜಿಕ, ಆರ್ಥಿಕ , ಮೂಲಭೂತ ಸೌಕರ್ಯಗಳು, ಕೈಗಾರಿಕೆಗಳ ಬೆಳವಣಿಗೆಗೆ ಕಾರಣೀಭೂತಗಿದ್ದಾರೆ. ಅವರ ಕಾಲದಲ್ಲಿ ದಿವಾನರಾಗಿದ್ದವರು ಸಂಘದ ಅಧ್ಯಕ್ಷರಾಗಿದ್ದರು ಎನ್ನುವುದು ಈ ಸಂಘದ ಹೆಗ್ಗಳಿಕೆ. ಅವರೆಲ್ಲರು ದಕ್ಷ ಆಡಳಿತದ ಮೂಲಕ ನಮಗೆ ದಾರಿದೀಪವಾಗಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಹಾಗೂ ಶಾಸಕಾಂಗ ಒಟ್ಟಾಗಿ ಕೆಲಸ ಮಾಡಬೇಕು. ಈ ಎರಡೂ ಜನರ ಪ್ರತಿನಿಧಿಗಳಾಗಿ ಜನರ ಹಿತವನ್ನು ಕಾಪಾಡುವುದು ನಮ್ಮ ಕರ್ತವ್ಯ. ನಿಮಗೆ ನಿವೃತ್ತರಾಗುವವರೆಗೆ ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶವಿದೆ. ಅಸಮಾನತೆ ಇರುವ ಸಮಾಜದಲ್ಲಿ ದುರ್ಬಲ ವರ್ಗಕ್ಕೆ ಸ್ಪಂದಿಸಬೇಕು. ಅಧಿಕಾರಿಗಳಿಗೆ ಕಾನೂನಿನ ಅರಿವಿನ ಜೊತೆಗೆ ಬಡವರ ಕಾಳಜಿ, ಸಮಾಜದ ಬಗ್ಗೆ ಅರಿವು ಇರಬೇಕು. ಆಗ ಮಾತ್ರ ಜನರಿಗೆ ಸ್ಪಂದಿಸಲು ಸಾಧ್ಯ ಎಂದು ತಿಳಿಸಿದರು.
ನಮ್ಮ ಕೆಲಸವನ್ನು ನಾವು ಪ್ರೀತಿಸಬೇಕು. ಗ್ರಾಮೀಣ ಜನರನ್ನು ಪ್ರೀತಿಯಿಂದ ಮಾತನಾಡಿಸಿ ಅವರ ಸಮಸ್ಯೆ ಅರ್ಥೈಸಿಕೊಂಡು ಬಗೆಹರಿಸಿದರೆ ಅವರು ನಿಮ್ಮನ್ನು ಮರೆಯುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ.
ಸರ್ಕಾರ ರೂಪಿಸುವ ನೀತಿಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳ ಪಾತ್ರ ಹಿರಿದು. ಜನಸೇವೆಗೆ ದೊರಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ತೃಪ್ತಿದಾಯಕವಾಗಿ ಕೆಲಸ ಮಾಡಿರುವುದಕ್ಕಿಂತ ದೊಡ್ಡ ಪ್ರಮಾಣಪತ್ರ ಇನ್ನೊಂದಿಲ್ಲ. ಈ ಬಗ್ಗೆ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜೀವನ ಸಾರ್ಥಕವಾಗಿ ಸೇವೆ ತೃಪಿಕರವಾಗಿ ಮಾಡಿದ್ದೇನೆ ಎಂಬ ಭಾವನೆ ನಿಮ್ಮಲ್ಲಿ ಇರಬೇಕು. ಪದೋನ್ನತಿ ಬಗ್ಗೆ ಕಂದಾಯ ಸಚಿವರು ಕಾರ್ಯೋನ್ಮುಖರಾಗಿದ್ದು, ಶ್ರೀಘ್ರವಾಗಿ ಪದೋನ್ನತಿ ಆಗಲಿದೆ. ಶೇ. 33% ಅಧಿಕಾರಿಗಳನ್ನು ಸಿಇಒಗಳಾಗಿ ಬಡ್ತಿ ನೀಡಲು ಸರ್ಕಾರ ಕ್ರಮ ವಹಿಸಲಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



