ರಾಜ್ಯ

ಮಕ್ಕಳ ಡಿಜಿಟಲ್ ವ್ಯಸನಕ್ಕೆ ಸರ್ಕಾರ ಮದ್ದು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿನಿತ್ಯ 10-15 ನಿಮಿಷ ಪತ್ರಿಗೆ ಓದುವುದು ಕಡ್ಡಾಯ..!

ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಫೋನ್, ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್ನೆಟ್ ವ್ಯಸನಕ್ಕೆ ತುತ್ತಾಗುತ್ತಿರುವುದನ್ನು ಗಮನಿಸಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (KSCPCR) ಈ ಕುರಿತು ಶಿಫಾರಸು ಮಾಡಿತ್ತು.

ಮಕ್ಕಳ ಡಿಜಿಟಲ್ ವ್ಯಸನಕ್ಕೆ ಸರ್ಕಾರ ಮದ್ದು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿನಿತ್ಯ 10-15 ನಿಮಿಷ ಪತ್ರಿಗೆ ಓದುವುದು ಕಡ್ಡಾಯ..!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಮಕ್ಕಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವ್ಯಸನವನ್ನು ನಿಯಂತ್ರಿಸಲು ಶಿಕ್ಷಣ ಇಲಾಖೆ ಹೊಸ ಕ್ರಮ ಕೈಗೊಂಡಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ಕ್ರಮದಿಂದ ವಿದ್ಯಾರ್ಥಿಗಳ ಓದುವ ಅಭ್ಯಾಸವನ್ನು ಉತ್ತೇಜಿಸಿ, ಡಿಜಿಟಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಫೋನ್, ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್ನೆಟ್ ವ್ಯಸನಕ್ಕೆ ತುತ್ತಾಗುತ್ತಿರುವುದನ್ನು ಗಮನಿಸಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (KSCPCR) ಈ ಕುರಿತು ಶಿಫಾರಸು ಮಾಡಿತ್ತು.

ಈ ಶಿಫಾರಸಿನ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ಧಾರಕ್ಕೆ ಅನುಮೋದನೆ ನೀಡಿದ್ದಾರೆ. ಮಕ್ಕಳನ್ನು ಮತ್ತೆ ಓದಿನ ಕಡೆಗೆ ಸೆಳೆಯುವುದು ಮತ್ತು ಅವರಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸುವುದು ಇದರ ಮುಖ್ಯ ಗುರಿಯಾಗಿದೆ.

ಶಿಕ್ಷಣ ಇಲಾಖೆಯ ಆದೇಶದಂತೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೂ ಈ ನಿಯಮ ಅನ್ವಯಿಸುತ್ತದೆ. ಅಷ್ಟೇ ಅಲ್ಲದೆ, ವಸತಿ ಶಾಲೆಗಳು, ಮೊರಾರ್ಜಿ ದೇಸಾಯಿ, ಸಂತ ರೋಷಾ, ಮತ್ತು ಎಲ್ಲಾ ಹಾಸ್ಟೆಲ್‌‌ಗಳಲ್ಲೂ ಈ ಕ್ರಮ ಕಡ್ಡಾಯವಾಗಿದೆ. ಆದೇಶ ಉಲ್ಲಂಘಿಸಿದ ಶಾಲೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಪ್ರತಿದಿನ ಬೆಳಗಿನ ಪ್ರಾರ್ಥನೆಯ ನಂತರ ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ವಿದ್ಯಾರ್ಥಿಗಳು ಕನ್ನಡ ದಿನಪತ್ರಿಕೆಯನ್ನು ಓದಬೇಕು. ಈ ಸಮಯದಲ್ಲಿ ಪತ್ರಿಕಾ ವಾಚನಕ್ಕೆ ಪ್ರತ್ಯೇಕ ಕಾಲಾವಕಾಶವನ್ನು ವೇಳಾಪಟ್ಟಿಯಲ್ಲಿ ನಮೂದಿಸಬೇಕು. ವಿದ್ಯಾರ್ಥಿಗಳು ತಮ್ಮ ಇಷ್ಟದ ಯಾವುದೇ ಕನ್ನಡ ದಿನಪತ್ರಿಕೆಯಾದರೂ ಆರಿಸಿಕೊಳ್ಳಬಹುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಿದ್ದು, ಅದರ ಮುಂದಿನ ಭಾಗವಾಗಿ ಈ ಶೈಕ್ಷಣಿಕ ಸುಧಾರಣೆ ಜಾರಿಗೆ ಬಂದಿದೆ.

ಈ ನೂತನ ನಿಯಮವು ಮಕ್ಕಳನ್ನು ಬಾಹ್ಯ ಜಗತ್ತಿನ ವಿದ್ಯಮಾನಗಳೊಂದಿಗೆ ಸಂಪರ್ಕಿಸಲು ಮತ್ತು ಅವರಲ್ಲಿ ಓದುವ ಆಸಕ್ತಿ ಮೂಡಿಸಲು ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.