ರಾಜ್ಯದಲ್ಲಿ ಇಂಧನ ಪೂರೈಕೆ ಸ್ಥಿರ, ಆತಂಕಪಡುವ ಅಗತ್ಯವಿಲ್ಲ: PIB, OMC ಸ್ಪಷ್ಟನೆ
ರಾಜ್ಯದಲ್ಲಿ 15 ಎಂಎಂಟಿಪಿಎ (ವಾರ್ಷಿಕವಾಗಿ ಮಿಲಿಯನ್ ಮೆಟ್ರಿಕ್ ಟನ್) ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯವಿರುವ ಸಂಸ್ಕರಣಾಗಾರವಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜಿನಲ್ಲಿ ಯಾವುದೇ ಕೊರತೆ ಇಲ್ಲ.

ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷ ಹಿನ್ನೆಲೆ ರಾಜ್ಯದಲ್ಲಿ ಇಂಧನ ಕೊರತೆ ಉಂಟಾಗಬಹುದು ಎಂಬ ಆತಂಕಗಳ ನಡುವೆಯೇ, ಕರ್ನಾಟಕದಲ್ಲಿ ಇಂಧನ ಸರಬರಾಜು ಸಂಪೂರ್ಣ ಸ್ಥಿರವಾಗಿದೆ. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (PIB) ಬೆಂಗಳೂರು ಹಾಗೂ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಸುದ್ದಿಗೋಷ್ಠಿ ನಡೆಸಿ, ಈ ಮಾಹಿತಿ ನೀಡಿವೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್) ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಕರ್ನಾಟಕ ತೈಲ ಮಾರುಕಟ್ಟೆ ಕಂಪನಿಗಳ ನೋಡಲ್ ಅಧಿಕಾರಿ ಸಿದ್ಧಾರ್ಥ ಅಗರ್ವಾಲ್ ಅವರು ಮಾತನಾಡಿ, ರಾಜ್ಯದಲ್ಲಿ 15 ಎಂಎಂಟಿಪಿಎ (ವಾರ್ಷಿಕವಾಗಿ ಮಿಲಿಯನ್ ಮೆಟ್ರಿಕ್ ಟನ್) ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯವಿರುವ ಸಂಸ್ಕರಣಾಗಾರವಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜಿನಲ್ಲಿ ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಪ್ಯಾನಿಕ್ ಖರೀದಿ ಹೆಚ್ಚಾದ ಹಿನ್ನೆಲೆಯಲ್ಲಿ ಎಲ್'ಪಿಜಿ ಸಿಲಿಂಡರ್‌ಗಳ ಬೇಡಿಕೆ ದಿನಕ್ಕೆ 3.75 ಲಕ್ಷಕ್ಕೆ ಏರಿಕೆಯಾದರೂ, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ದಿನಕ್ಕೆ 3.06 ಲಕ್ಷ ಬುಕ್ಕಿಂಗ್‌ಗೆ ಇಳಿಕೆಯಾಗಿದೆ. ವಾಣಿಜ್ಯ ಎಲ್'ಪಿಜಿ ಸರಬರಾಜಿನಲ್ಲಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರಿಗೆ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಾಮಾನ್ಯ ಜನರು ಕಾಳಸಂತೆ ಕಡೆ ಮುಖ ಮಾಡುವ ಬದಲು 5 ಕೆಜಿ ಸಿಲಿಂಡರ್‌ಗಳನ್ನು ಬಳಸುವಂತೆಯೂ ಸಲಹೆ ನೀಡಿದ್ದಾರೆ.
ಈ ಸಿಲಿಂಡರ್‌ಗಳ ಬೆಲೆ ಸುಮಾರು ರೂ.550ರಿಂದ ರೂ.600ರವರೆಗೆ ಇರುತ್ತದೆ. ಇದು ಆರ್ಥಿಕವಾಗಿ ಹಿಂದುಳಿದವರು ಹಾಗೂ ವಲಸೆ ಕಾರ್ಮಿಕರಿಗೆ ಹೆಚ್ಚು ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಹಾಗೂ ತೈಲ ಕಂಪನಿಗಳು ಸೇರಿ 3,700ಕ್ಕೂ ಹೆಚ್ಚು ತಪಾಸಣೆ ನಡೆಸಿದ್ದು, ಅತಿಯಾಗಿ ಸಂಗ್ರಹಣೆ ಮತ್ತು ಕಪ್ಪುಮಾರುಕಟ್ಟೆ ಆರೋಪದ ಮೇಲೆ 35 FIR ದಾಖಲಿಸಿ, 37 ಮಂದಿಯನ್ನು ಬಂಧಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದ್ದಾರೆ.
GAIL ಪ್ರಧಾನ ವ್ಯವಸ್ಥಾಪಕ ಸಂಜಯ್ ಕುಮಾರ್ ಸಿಂಗ್ ಮಾತನಾಡಿ, ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಕೆಯನ್ನು ಉತ್ತೇಜಿಸಬೇಕು ಎಂದು ಹೇಳಿದ್ದಾರೆ.
ಇದು ಕಡಿಮೆ ವೆಚ್ಚ ಹಾಗೂ ಅನುಕೂಲಕರವಾಗಿದ್ದು, ಈಗಾಗಲೇ 5.01 ಲಕ್ಷ ಸಂಪರ್ಕಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಟೋ ಚಾಲಕರಲ್ಲಿ ಉಂಟಾದ ಆತಂಕವನ್ನು ತಣಿಸಲು ಆಟೋ LPG ಸರಬರಾಜು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 67 ಸಾರ್ವಜನಿಕ ವಲಯದ ಆಟೋ LPG ಸ್ಟೇಷನ್‌ಗಳಿದ್ದು, 300ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ತೈಲ ಕಂಪನಿಗಳ ಪಾಲು ಕೇವಲ 20% ಇದ್ದರೂ, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



