ಬೇಸಿಗೆ ಹಿನ್ನೆಲೆ: ಬೆಂಗಳೂರು ನಗರದಾದ್ಯಂತ ಸಮರ್ಪಕ ನೀರು ಸರಬರಾಜು- BWSSB ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್
ಕಳೆದ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ತೊಂದರೆ ಅನುಭವಿಸಿದ್ದ ಕನಕಪುರ ರಸ್ತೆಯ ಹಲವು ಪ್ರದೇಶಗಳಿಗೆ ಇಂದು ಖುದ್ದು ಭೇಟಿ ನೀಡಿದ ಅವರು, ಪ್ರಸ್ತುತ ನೀರಿನ ಸರಬರಾಜು ಪರಿಸ್ಥಿತಿಯ ಕುರಿತು ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.

ಬೆಂಗಳೂರು: ಬೆಂಗಳೂರು ನಗರದಾದ್ಯಂತ ಪ್ರಸ್ತುತ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಎಲ್ಲಾದರೂ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ತಕ್ಷಣವೇ ಸ್ಪಂದಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ .
ಕಳೆದ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ತೊಂದರೆ ಅನುಭವಿಸಿದ್ದ ಕನಕಪುರ ರಸ್ತೆ ಭಾಗದ ಬನಗಿರಿನಗರ, ಭುವನೇಶ್ವರಿನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಇಂದು ಖುದ್ದು ಭೇಟಿ ನೀಡಿದ ಅವರು, ಪ್ರಸ್ತುತ ನೀರಿನ ಸರಬರಾಜು ಪರಿಸ್ಥಿತಿಯ ಕುರಿತು ಸ್ಥಳೀಯ ನಿವಾಸಿಗಳೊಂದಿಗೆ ಮುಕ್ತವಾಗಿ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಈ ಬಾರಿಯ ಬೇಸಿಗೆಯಲ್ಲಿ ನೀರಿನ ಪೂರೈಕೆ ಸುಧಾರಿಸಿರುವ ಬಗ್ಗೆ ಸ್ಥಳೀಯರು ಅಧ್ಯಕ್ಷರ ಬಳಿ ಸಂತಸ ಹಂಚಿಕೊಂಡರು. ಬನಗಿರಿ ನಗರದ ನಿವಾಸಿ ಸುಬ್ಬಮ್ಮ ಎಂಬುವವರು ಮಾತನಾಡಿ, "ಕಳೆದ ಬೇಸಿಗೆಯಲ್ಲಿ ನೀರಿಗೆ ಸಾಕಷ್ಟು ತೊಂದರೆಯಾಗಿತ್ತು. ಆದರೆ ಈ ಬಾರಿ ಜಲಮಂಡಳಿಯಿಂದ ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ಮೂಲಸೌಕರ್ಯಗಳನ್ನು ಒದಗಿಸಿರುವುದರಿಂದ ನಮಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದರು.
ಮತ್ತೋರ್ವ ನಿವಾಸಿ ಮಲ್ಲಪ್ಪ ಅವರು ಪ್ರತಿಕ್ರಿಯಿಸಿ, "ಮಿನಿ ಟ್ಯಾಂಕ್‌ಗಳ ಅಳವಡಿಕೆ ಹಾಗೂ ಕಾವೇರಿ ನೀರಿನ ಸಂಪರ್ಕ ಕಲ್ಪಿಸಿರುವುದರಿಂದ ನಮಗೆ ಬಹಳ ಅನುಕೂಲವಾಗಿದೆ. ಜಲಮಂಡಳಿ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆದರೆ, ನಮ್ಮ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಇನ್ನೂ ಕಲ್ಪಿಸಿಲ್ಲ, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರಿಗೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಡಾ. ರಾಮ್ ಪ್ರಸಾತ್ ಮನೋಹರ್, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ, ಜಲಮಂಡಳಿ ವ್ಯಾಪ್ತಿಯಲ್ಲಿ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಗರದಾದ್ಯಂತ ನೀರಿನ ಸರಬರಾಜು ಪರಿಸ್ಥಿತಿಯ ಕುರಿತು ನಾನು ಪ್ರತಿದಿನ ಅಧಿಕಾರಿಗಳಿಂದ ವರದಿ ಪಡೆಯುತ್ತಿದ್ದು, ಲೋಪಗಳಿದ್ದಲ್ಲಿ ತಕ್ಷಣವೇ ಸರಿಪಡಿಸಲು ಸೂಚನೆ ನೀಡುತ್ತಿದ್ದೇನೆ. ಸಂಚಾರಿ ಕಾವೇರಿ ಟ್ಯಾಂಕರ್‌ಗಳು ಹಾಗೂ ಮಿನಿ ಟ್ಯಾಂಕ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೇವೆ ಎಂದು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



