ಎಚ್ಚೆತ್ತ ರಾಜ್ಯ ಸರ್ಕಾರ: ಮಣ್ಣಿನ ಕುಸಿತ ತಡೆಗೆ 99 ಕೋಟಿ ರೂ ಅನುದಾನ; ಉತ್ತರ ಕನ್ನಡ ಜಿಲ್ಲೆಗೆ ವಿಶೇಷ ಪ್ಯಾಕೇಜ್..!
ಕೆಲ ವರ್ಷಗಳ ಹಿಂದೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ನಡೆಸಿದ ಅಧ್ಯಯನದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 339ಕ್ಕೂ ಹೆಚ್ಚು ಮಣ್ಣಿನ ಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಲಾಗಿತ್ತು. ಈ ವರದಿ ಸರ್ಕಾರದ ಬಳಿ ಇದ್ದರೂ, ಇದೂವರೆಗೆ ಯಾವುದೇ ಸಮಗ್ರ ಕಾರ್ಯಯೋಜನೆ ರೂಪಿಸಿರಲಿಲ್ಲ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ವೇಳೆಯಲ್ಲಿ ಆಗಾಗ ಸಂಭವಿಸುವ ಮಣ್ಣಿನ ಕುಸಿತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ರಾಜ್ಯ ಸರ್ಕಾರ ಕೊನೆಗೂ ರೂ.99 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ವರ್ಷಗಳ ಕಾಲ ನಿರ್ಲಕ್ಷ್ಯಕ್ಕೊಳಗಾಗಿದ್ದ ಈ ಸಮಸ್ಯೆ ಇದೀಗ ಗಂಭೀರವಾಗಿ ಪರಿಗಣಿಸಲ್ಪಟ್ಟಿದ್ದು, ಮಳೆಗಾಲ ಮುನ್ನವೇ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಕೆಲ ವರ್ಷಗಳ ಹಿಂದೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ನಡೆಸಿದ ಅಧ್ಯಯನದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 339ಕ್ಕೂ ಹೆಚ್ಚು ಮಣ್ಣಿನ ಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಲಾಗಿತ್ತು. ಈ ವರದಿ ಸರ್ಕಾರದ ಬಳಿ ಇದ್ದರೂ, ಇದೂವರೆಗೆ ಯಾವುದೇ ಸಮಗ್ರ ಕಾರ್ಯಯೋಜನೆ ರೂಪಿಸಿರಲಿಲ್ಲ. ಪರಿಣಾಮವಾಗಿ, ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ ಸಂಚಾರ ವ್ಯತ್ಯಯ, ಮನೆಗಳ ಹಾನಿ ಮತ್ತು ಜನರಲ್ಲಿ ಆತಂಕದ ವಾತಾವರಣ ಮುಂದುವರಿದಿತ್ತು.
ಈ ಹಿನ್ನೆಲೆಯಲ್ಲಿ ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಸರ್ಕಾರ ಕ್ರಮ ಕೈಗೊಂಡಿದೆ. ಬಿಡುಗಡೆಗೊಂಡ ರೂ.99 ಕೋಟಿ ಅನುದಾನವನ್ನು ತುರ್ತು ಹಾಗೂ ದೀರ್ಘಕಾಲಿಕ ಪರಿಹಾರ ಕಾಮಗಾರಿಗಳಿಗೆ ಬಳಸಲಾಗುತ್ತದೆ.
ಬೆಟ್ಟಗಳ ಅಡಿಪಾಯ ಬಲಪಡಿಸುವುದು, ಮಣ್ಣು ಕುಸಿತವನ್ನು ತಡೆಯಲು ತಡೆಗೋಡೆಗಳ ನಿರ್ಮಾಣ, ನೀರಿನ ಹರಿವು ಸರಿಪಡಿಸುವ ಡ್ರೆನೆಜ್ ವ್ಯವಸ್ಥೆ ನಿರ್ಮಾಣ ಮತ್ತು ಅಪಾಯ ಪ್ರದೇಶಗಳಲ್ಲಿ ಭೂಮಿಯ ಸ್ಥಿರತೆ ಹೆಚ್ಚಿಸುವ ಕಾರ್ಯಗಳು ಪ್ರಮುಖವಾಗಿವೆ.
ಜಿಲ್ಲಾ ಆಡಳಿತವು ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಳೆದ ವರ್ಷ ಮಣ್ಣಿನ ಕುಸಿತದಿಂದ ಉಂಟಾದ ಅನಾಹುತಗಳ ಅನುಭವದ ಹಿನ್ನೆಲೆಯಲ್ಲಿ, ಅಪಾಯ ಪ್ರದೇಶಗಳಲ್ಲಿ ‘ಸ್ಪಾಟರ್’ಗಳನ್ನು ನಿಯೋಜಿಸಿ ನಿರಂತರ ನಿಗಾವಹಿಸಲಾಗುತ್ತಿದೆ. ಭಾರೀ ಮಳೆಯ ಸಂದರ್ಭದಲ್ಲಿ ಯಾವುದೇ ಸೂಚನೆ ದೊರೆತ ಕೂಡಲೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಶಾಲೆಗಳು ಮತ್ತು ಅಂಗನವಾಡಿಗಳನ್ನು ತಾತ್ಕಾಲಿಕ ರಕ್ಷಣಾ ಕೇಂದ್ರಗಳಾಗಿ ಸಿದ್ಧಪಡಿಸಲಾಗಿದೆ.
ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿ 66ರ ವಿವಿಧ ಭಾಗಗಳಲ್ಲಿ — ಸುಂಕ್ರಬಾಗ್, ಹರವಾಡ, ಅಂಕೋಲಾ ಬಳಿ, ಕಾರವಾರ ಬಳಿಯ ಬಿನಾಗಾ, ಶಿರೂರು, ಬಾರ್ಗಿ, ಕುಮಟಾ ಬಳಿಯ ಮಿರ್ಜನ್ ರಸ್ತೆ ಪ್ರದೇಶಗಳಲ್ಲಿ ಅಪಾಯ ಹೆಚ್ಚು ಇದೆ. ಹೆದ್ದಾರಿ ನಿರ್ಮಾಣಕ್ಕಾಗಿ ಬೆಟ್ಟಗಳನ್ನು ಕಡಿದಿರುವುದರಿಂದ ಮಣ್ಣು ಸಡಿಲಗೊಂಡು ಕುಸಿತ ಸಾಧ್ಯತೆ ಹೆಚ್ಚಾಗಿದೆ.
ಇದರ ಜೊತೆಗೆ ಕುಲ್ವಿ, ಮಂಜುಗಿಣಿ ಮತ್ತು ಅರ್ಬೈಲ್ ಘಾಟ್‌ಗಳು, ಶಿರಸಿ-ಕುಮ್ಟಾ ರಸ್ತೆಯಲ್ಲಿರುವ ದೇವಿಮನೆ ಘಾಟ್‌ಗಳು, ಸಿದ್ದಾಪುರ ಬಳಿಯ ಕಾನ್ಸೂರು, ಅನ್ಶಿ ಘಾಟ್‌ಗಳಲ್ಲಿನ ಉಳವಿ ಮತ್ತು ಅನ್ಶಿ ವಿಭಾಗಗಳು, ದಾಂಡೇಲಿ-ಜೋಯಿಡಾ ರಸ್ತೆ ವಿಭಾಗ, ಗೇರುಒಪ್ಪ-ಹೊನ್ನಾವರ ವಿಭಾಗ ಮತ್ತು ಶರಾವತಿ ಕಣಿವೆ ಪ್ರದೇಶಗಳನ್ನೂ ಅಪಾಯ ಪ್ರದೇಶಗಳು ಎಂದು ಜಿಎಸ್‌ಐ ಗುರುತಿಸಿದೆ.
ಕಳೆದ ವರ್ಷ ಶಿರೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಭವಿಸಿದ ಮಣ್ಣಿನ ಕುಸಿತದಿಂದ ರಸ್ತೆ ಸಂಚಾರ ಸ್ಥಗಿತಗೊಂಡು, ಜನರು ತೀವ್ರ ಸಂಕಷ್ಟ ಅನುಭವಿಸಿದ್ದರು. ಈ ಹಿನ್ನೆಲೆ ಈ ಬಾರಿ ಸರ್ಕಾರ ಶಾಶ್ವತ ಪರಿಹಾರಕ್ಕೆ ಒತ್ತು ನೀಡಿರುವುದು ಗಮನಾರ್ಹವಾಗಿದೆ.
ಆದರೆ, ತಜ್ಞರ ಪ್ರಕಾರ ಅನುದಾನ ಬಿಡುಗಡೆ ಮಾತ್ರ ಸಾಕಾಗುವುದಿಲ್ಲ. ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು, ಗುಣಮಟ್ಟ ಕಾಪಾಡುವುದು ಹಾಗೂ ನಿರಂತರ ನಿಗಾವಹಿಸುವುದು ಅತ್ಯಗತ್ಯ. ಇಲ್ಲವಾದರೆ ಪ್ರತಿ ವರ್ಷ ಇದೇ ಸಮಸ್ಯೆ ಮರುಕಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



