ರಾಜ್ಯ

ಯೋಗೇಶ್ ಗೌಡ ಹತ್ಯೆ ಪ್ರಕರಣ: Congress ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ; ಮಹತ್ವದ ತೀರ್ಪು!

ಧಾರವಾಡ ಬಿಜೆಪಿ ನಾಯಕ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು Congress ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ನೀಡಿದೆ.

ಯೋಗೇಶ್ ಗೌಡ ಹತ್ಯೆ ಪ್ರಕರಣ: Congress ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ; ಮಹತ್ವದ ತೀರ್ಪು!
ವಿನಯ್ ಕುಲಕರ್ಣಿ
Published On :

ಬೆಂಗಳೂರು: ಧಾರವಾಡ ಬಿಜೆಪಿ ನಾಯಕ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು Congress ಶಾಸಕ ವಿನಯ್ ಕುಲಕರ್ಣಿಗೆ ಜೀವಾವಾಧಿ ಶಿಕ್ಷೆ ನೀಡಿದೆ. ಇದೇ ಪ್ರಕರಣದಲ್ಲಿ 15 ಅಪರಾಧಿಗಳಿಗೂ ಜೀವಾವಾಧಿ ಶಿಕ್ಷೆ ವಿಧಿಸಿರುವ ಕೋರ್ಟ್ 19ನೇ ಅಪರಾಧಿ ಚೆನ್ನಕೇಶವ ಟಿಂಗರಿಕರ್ ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ನ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ವಿನಯ್ ಕುಲಕರ್ಣಿ ಮತ್ತು ಇತರರಿಗೆ ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಸೇರಿದಂತೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಿದ್ದಾರೆ. ಇದೇ ವೇಳೆ ಯೋಗೇಶ್ ಗೌಡ ಮಕ್ಕಳಿಗೆ ಪರಿಹಾರವಾಗಿ 16 ಲಕ್ಷ ರೂಪಾಯಿ ನೀಡುವಂತೆ ಕೋರ್ಟ್ ಸೂಚಿಸಿದೆ.

ವಿನಯ್ ಕುಲಕರ್ಣಿ ಕಳೆದ 3 ದಿನದಿಂದ ಒಂದೇ ಬಟ್ಟೆಯಲ್ಲಿದ್ದಾರೆ. ಬಟ್ಟೆ ಬದಲಿಸಲು ಅನುಮತಿ ನೀಡುವಂತೆ ಶಾಸಕರ ಪರ ವಕೀಲ ಸುನಿಲ್ ಮನವಿ ಮಾಡಿದ್ದರು. ಅಪರಾಧಿಗಳಿಗೆ ಬಟ್ಟೆ ಒದಗಿಸಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೈಲು ಕೈಪಿಡಿಯಲ್ಲಿರುವಂತೆ ಬಟ್ಟೆ ಒದಗಿಸಲು ಜಡ್ಜ್‌ ಸೂಚನೆ ನೀಡಿದ್ದಾರೆ. ಇದರ ಜತೆಗೆ ಪ್ರತಿ ಸೆಕ್ಷನ್‌ಗೂ ಪ್ರತ್ಯೇಕವಾಗಿ ದಂಡ ವಿಧಿಸಲಾಗಿದೆ.

2016ರ ಜೂನ್ 15ರಂದು ಧಾರವಾಡದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್‌ ಗೌಡ ಅವರನ್ನು ಸಪ್ತಾಪುರ ಬಡಾವಣೆಯ ಜಿಮ್​​ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಧಾರವಾಡದ ಉಪನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸಿದ್ದರು. ಆಸ್ತಿ ವಿವಾದದ ವಿಚಾರಕ್ಕಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಹತ್ಯೆಯಾದ ಯೋಗೇಶ್‌ ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಬಳಿಕ ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂದು ಹೇಳಿತ್ತು. ಅಲ್ಲಿಂದ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು.

ಈ ಕೊಲೆಯಲ್ಲಿ ಶಾಸಕ ವಿನಯ್‌ ಕುಲಕರ್ಣಿ ಕೈವಾಡವಿರುವ ಅನುಮಾನ ವ್ಯಕ್ತವಾಗಿತ್ತು. 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು, ವಿನಯ್‌ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ಇದರ ನಂತರ ವಿನಯ್‌ ಕುಲಕರ್ಣಿ ಜಾಮೀನು ಪಡೆದು ಹೊರಗೆ ಬಂದಿದ್ದರು. ನಂತರದಲ್ಲಿ ಈ ಪ್ರಕರಣವನ್ನು ಜನಪ್ರತಿನಿಧಿ ಕೋರ್ಟ್​​ಗೆ ನೀಡಲಾಗಿತ್ತು. ಇದೀಗ ಈ ಅವರಿಗೆ ಶಿಕ್ಷೆಯನ್ನು ಘೋಷಣೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.