ಹೈಕೋರ್ಟ್ ನಿರ್ದೇಶನ: ವೇತನ ಸಹಿತ ಮುಟ್ಟಿನ ರಜೆ ಜಾರಿಗೆ ತರಲು ಸರ್ಕಾರ ಬದ್ಧ; ಸಂತೋಷ್ ಲಾಡ್
ಔಪಚಾರಿಕವಾಗಿ ನಿಯಮ ಜಾರಿಗೆ ಬರುವವರೆಗೆ, ಮುಟ್ಟಿನ ರಜೆ ನೀತಿಯನ್ನು "ಕಟ್ಟುನಿಟ್ಟಾಗಿ ಮತ್ತು ನಿಷ್ಠೆಯಿಂದ" ಜಾರಿಗೆ ತರುವಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಬೆಂಗಳೂರು: ಹೈಕೋರ್ಟ್ ನಿರ್ದೇಶನದ ನಂತರ, ಎಲ್ಲಾ ವಲಯಗಳಲ್ಲಿ ವೇತನ ಸಹಿತ ಮುಟ್ಟಿನ ರಜೆ ನೀತಿಯನ್ನು ಸಾಧ್ಯವಾದಷ್ಟು ಬೇಗ ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಔಪಚಾರಿಕವಾಗಿ ನಿಯಮ ಜಾರಿಗೆ ಬರುವವರೆಗೆ, ಮುಟ್ಟಿನ ರಜೆ ನೀತಿಯನ್ನು "ಕಟ್ಟುನಿಟ್ಟಾಗಿ ಮತ್ತು ನಿಷ್ಠೆಯಿಂದ" ಜಾರಿಗೆ ತರುವಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ನಮ್ಮ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ನೀತಿಯಾದ 'ಋತುಚಕ್ರ ರಜೆ ನೀತಿ'ಗೆ ಪೂರಕವಾಗಿ ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ಸ್ವಾಗತಿಸುತ್ತೇನೆ. ಋತುಚಕ್ರ ರಜೆನೀತಿಯನ್ನು ಇಡೀ ದೇಶದಲ್ಲೇ ಸಮರ್ಪಕವಾಗಿ ಹಾಗೂ ಮಾದರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ.
ಘನ ನ್ಯಾಯಾಲಯದ ಅಭಿಪ್ರಾಯದಂತೆ "ಮುಟ್ಟಿನ ರಜೆಯು ಮಹಿಳೆಯರ ಘನತೆ, ನ್ಯಾಯಯುತ ಮತ್ತು ಅವರ ವಾಸ್ತವಿಕ ಬದುಕಿನ ಮಾನವೀಯ ಅರಿವು" ಎಂಬುದನ್ನು ಮೂಲ ಆಶಯವಾಗಿಟ್ಟುಕೊಂಡು ಅತಿ ಶೀಘ್ರದಲ್ಲಿ ಎಲ್ಲ ವಲಯಗಳಲ್ಲೂ ಸಹ ತಿಂಗಳಿಗೆ ಒಂದರಂತೆ ಒಟ್ಟು ವರ್ಷಕ್ಕೆ 12 ವೇತನ ಸಹಿತ ಋತುಚಕ್ರ ರಜೆ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸಂತೋಷ್ ಲಾಡ್ ಬರೆದುಕೊಂಡಿದ್ದಾರೆ.
ಎಲ್ಲಾ ವಲಯಗಳಲ್ಲಿ ಅದರ ಏಕರೂಪ, ಸ್ಥಿರ ಮತ್ತು ಕಠಿಣ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಸೂಕ್ತ ಮಾರ್ಗಸೂಚಿಗಳು, ಸುತ್ತೋಲೆಗಳು ಮತ್ತು ಆಡಳಿತಾತ್ಮಕ ಸೂಚನೆಗಳನ್ನು ನೀಡುವ ಮೂಲಕ ನೀತಿಯ ಪರಿಣಾಮಕಾರಿ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಹೇಳಿತ್ತು.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಮೂಡಲಗಿಯ ಹೋಟೆಲ್‌ನಲ್ಲಿ ಕೆಲಸ ಮಾಡುವ 41 ವರ್ಷದ ಚಂದ್ರವ್ವ ಹನುಮಂತ್ ಗೋಕಾವಿ ಅವರು ನವೆಂಬರ್ 20, 2025 ರಂದು, ಕೆಲಸ ಮಾಡುವ ಎಲ್ಲಾ ಮಹಿಳೆಯರಿಗೆ ಒಂದು ದಿನದ ಮುಟ್ಟಿನ ರಜೆ ನೀಡುವ ಸರ್ಕಾರದ ಆದೇಶವನ್ನು ಜಾರಿಗೆ ತರುವಂತೆ ಕೋರಿ ಧಾರವಾಡ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ನಿರ್ದೇಶನ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



