ರಾಜ್ಯ

ಭೂ ದಾಖಲೆ ಸ್ಕ್ಯಾನಿಂಗ್ ಬಗ್ಗೆ ಅಸಡ್ಡೆ: ತಹಶೀಲ್ದಾರ್ ಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಗರಂ!

ಸ್ಕ್ಯಾನಿಂಗ್ ಕೆಲಸಕ್ಕೆ ಪ್ರತಿ ತಾಲೂಕಿಗೆ ತಲಾ 8 ಜನ ಡೇಟಾ ಆಪರೇಟರ್ ನೀಡಿದರೂ ಕೆಲ ತಾಲೂಕುಗಳಲ್ಲಿ ಪ್ರಗತಿ ಕುಂಠಿತವಾಗಿದೆ ಎಂದರು.

ಭೂ ದಾಖಲೆ ಸ್ಕ್ಯಾನಿಂಗ್ ಬಗ್ಗೆ ಅಸಡ್ಡೆ: ತಹಶೀಲ್ದಾರ್ ಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಗರಂ!
ಕೃಷ್ಣ ಬೈರೇಗೌಡ
Published On :

ಬೆಂಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ಶುಕ್ರವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ತಹಶೀಲ್ದಾರ್ ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಭೂ ಸುರಕ್ಷಾ ಯೋಜನೆ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದರು.

ಭೂ ದಾಖಲೆ ಸ್ಕ್ಯಾನಿಂಗ್ ಬಗ್ಗೆ ಅಸಡ್ಡೆ ತೋರುತ್ತಿರುವ ತಹಶೀಲ್ದಾರರುಗಳ ವಿರುದ್ಧ ಗರಂ ಆದ ಸಚಿವರು, ದಿನಕ್ಕೆ ಸರಾಸರಿ 12,000 ಪುಟ ಸ್ಕ್ಯಾನ್ ಮಾಡಬೇಕು ಎಂಬುದು ಗುರಿ. ಆದರೆ, ಕೆಲ ತಾಲೂಕುಗಳಲ್ಲಿ ಸ್ಕ್ಯಾನಿಂಗ್ 8,000 ಪುಟ ದಾಟುತ್ತಿಲ್ಲ. ಸ್ಕ್ಯಾನಿಂಗ್ ಕೆಲಸಕ್ಕೆ ಪ್ರತಿ ತಾಲೂಕಿಗೆ ತಲಾ 8 ಜನ ಡೇಟಾ ಆಪರೇಟರ್ ನೀಡಿದರೂ ಕೆಲ ತಾಲೂಕುಗಳಲ್ಲಿ ಪ್ರಗತಿ ಕುಂಠಿತವಾಗಿದೆ ಎಂದರು. ಅಸಮರ್ಪಕ ಉತ್ತರ ನೀಡಿದ ಗದಗ ಜಿಲ್ಲೆ ಶಿರಹಟ್ಟಿ ತಹಶೀಲ್ದಾರ್ ಗೆ ಕ್ಲಾಸ್ ತೆಗೆದುಕೊಂಡರು.

ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಹಾಗೂ ಹಿಂದುಳಿದ ಜಿಲ್ಲೆಗಳಾದ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸ್ಕ್ಯಾನಿಂಗ್ ಕೆಲಸ ಸಂಪೂರ್ಣ ಮುಗಿದಿದೆ. ಆದರೆ, ಬೆಂಗಳೂರು ನಗರ, ಶ್ರೀರಂಗಪಟ್ಟಣ, ಮದ್ದೂರು, ಪಾಂಡವಪುರ ಮೈಸೂರಿನ ಇತರೆ ತಾಲೂಕಿನಲ್ಲಿ ಈ ಕೆಲಸ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ನಾಲ್ಕೂ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರು ಕಡಿಮೆ ಸ್ಕ್ಯಾನ್ ಆಗುತ್ತಿರುವ ತಾಲೂಕುಗಳ ಮೇಲೆ ನಿಗಾವಹಿಸಲು ಸೂಚಿಸಿದರು.

19 ಲಕ್ಷ ಪುಟ ಭೂ ದಾಖಲೆಗಳನ್ನು ಜನ ಈಗಾಗಲೇ ಆನ್ಲೈನ್ ಮೂಲಕ ಪಡೆದಿದ್ದಾರೆ. ಭೂ ದಾಖಲೆಗಳಿಗಾಗಿ ಜನ ನಮ್ಮ ಕಚೇರಿಗೆ ಬರಬೇಡಿ ಎಂದು ತಹಶೀಲ್ದಾರರು ಜನರಲ್ಲಿ ಅರಿವು ಮೂಡಿಸಿ. ಜನ ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಕಡಿಮೆಯಾದರೆ, ಅಧಿಕಾರಿಗಳ ಕೆಲಸದ ಒತ್ತಡ ಕಡಿಮೆಯಾಗುತ್ತೆ, ಮಧ್ಯವರ್ತಿಗಳ ಹಾವಳಿಯೂ ಕಡಿಮೆಯಾಗುತ್ತದೆ ಎಂದರು.

ಕೋರ್ಟ್ ಕೇಸ್ : ತಹಶೀಲ್ದಾರ್ ಕೋರ್ಟ್ ಕೇಸ್ ವಿಲೇವಾರಿಯಲ್ಲಿ ಉತ್ತಮ ಪ್ರಗತಿಯಾಗಿದೆ. ಹಳೆಯ ಬಹುತೇಕ ಪ್ರಕರಣ ವಿಲೇವಾರಿಯಾಗಿದೆ. ಆದರೂ, ಶಿಗ್ಗಾಂವ್,ಶಿರಾ, ಮುಳಬಾಗಿಲು ಸೇರಿ ಕೆಲ ತಾಲೂಕುಗಳಲ್ಲಿ ಮಾತ್ರ 90 ದಿನಕ್ಕೆ ಮೀರಿದ ಪ್ರಕರಣ ಬಾಕಿ. ಅದನ್ನೂ ಶೀಘ್ರ ವಿಲೇವಾರಿಗೊಳಿಸಬೇಕು. ಕೋರ್ಟ್ ಕೇಸ್ ಗಳನ್ನು 10700 ರಿಂದ 140ಕ್ಕೆ ಇಳಿಸಲಾಗಿದೆ. ಈ ಪ್ರಕರಣಗಳನ್ನೂ ಶೀಘ್ರ ವಿಲೇವಾರಿಯಾಗಬೇಕಿದೆ ಎಂದು ಸೂಚಿಸಿದರು.

ಫೌತಿಖಾತೆ: ಕುಟುಂಬದ ವ್ಯಾಜ್ಯಗಳಿಲ್ಲದ ಆಸ್ತಿಗಳನ್ನು ಸಾಧ್ಯವಾದಷ್ಚು ಶೀಘ್ರದಲ್ಲಿ ಫೌತಿಖಾತೆ ಮಾಡಲು ಸಚಿವರು ಸೂಚಿಸಿದರು. ಬೆಂಗಳೂರು ಗ್ರಾಮಾಂತರ, ರಾಯಚೂರು, ಹಾವೇರಿ ಜಿಲ್ಲೆಗಳಲ್ಲೂ ಅಧಿಕ ಪ್ರಕರಣ ಬಾಕಿಯಿವೆ. ಇವುಗಳನ್ನು ಆದಷ್ಟು ಬೇಗ ಮುಗಿಸಬೇಕು ಎಂದು ತಹಸೀಲ್ದಾರ್ ಗೆ ಸೂಚಿಸಿದರು.

ಪೋಡಿ ದುರಸ್ಥಿ: 1 ರಿಂದ 10 ಮಂಜೂರಿದಾರಷ್ಟೇ ಇರುವ ಎಲ್ಲಾ ಸರ್ವೇ ನಂಬರ್ ಗಳ 1 to 5 ಕೆಲಸವನ್ನು ಮುಂದಿನ ಒಂದು ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ಎಲ್ಲಾ ತಹಶೀಲ್ದಾರರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಂದಾಯ ಗ್ರಾಮ: ಆಲೂರು, ನಂಜನಗೂಡು ಯಲಹಂಕ, ಚಿಟಗುಪ್ಪ, ಯಳಂದೂರು, ಹರಪನಹಳ್ಳಿ, ಹಡಗಲಿ, ಕೂಡ್ಲಿಗಿ, ಕೊಳ್ಳೆಗಾಲ, ಜೇವರ್ಗಿ, ಹನೂರು ತಾಲೂಕುಗಳಲ್ಲಿ ಕಂದಾಯ ಗ್ರಾಮಗಳ ರಿಜಿಸ್ಟ್ರೇಷನ್ ಕಡಿಮೆ ಆಗಿದೆ.

ಇದು ಬಡವರ ಕೆಲಸ, ಅರ್ಧಂಬರ್ದ ಮಾಡಿಕೊಟ್ಟರೆ ಜನರಿಗೆ ಅನ್ಯಾಯವಾಗುತ್ತೆ. ಹೀಗಾಗಿ ಕಂದಾಯ ಗ್ರಾಮಗಳ ಕೆಲಸ ಪೂರ್ತಿ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೆಲವರು ಎಷ್ಟೇ ಕಷ್ಟ ಇದ್ದರೂ ಚಾಲೆಂಜಿಂಗ್ ಆಗಿ ತಗೊಂಡು ಕೆಲಸ ಮಾಡಿದ್ದಾರೆ. ಆದರೆ, ಬೇರೆಯವರು ಸರಿಯಾಗಿ ಮಾಡ್ತಾ ಇಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು. ಬಡವರ ಕೆಲಸ ದಯವಿಟ್ಚು ಉದಾಸೀನ ಮಾಡಬೇಡಿ ಎಂದು ಮನವಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.