ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ: IAS ಅಧಿಕಾರಿ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್; 'ಹೈ' ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ..!
ಹೈಕೋರ್ಟ್ ತನ್ನ ಹಿಂದಿನ ಆದೇಶದಲ್ಲಿ, ರೋಹಿಣಿ ಸಿಂಧೂರಿ ವಿರುದ್ಧ ಎಫ್ಐಆರ್ ದಾಖಲಿಸಲು ಅಗತ್ಯ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಆ ಆದೇಶವನ್ನು ಪ್ರಶ್ನಿಸಿ ಸಿಂಧೂರಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಬೆಂಗಳೂರು: ಕೈಚೀಲ ಅಕ್ರಮ ಖರೀದಿ ಆರೋಪದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ನಡೆಸಲು ಈ ಹಿಂದೆ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ತಡೆ ನೀಡಿದ್ದು, ಈ ಮೂಲಕ ಐಎಎಸ್ ಅಧಿಕಾರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಈ ಪ್ರಕರಣವು 2021ರಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ನಡೆದಿದೆ ಎನ್ನಲಾದ ಬಟ್ಟೆ ಬ್ಯಾಗ್ ಖರೀದಿಯಲ್ಲಿನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ.
ಹೈಕೋರ್ಟ್ ತನ್ನ ಹಿಂದಿನ ಆದೇಶದಲ್ಲಿ, ರೋಹಿಣಿ ಸಿಂಧೂರಿ ವಿರುದ್ಧ ಎಫ್ಐಆರ್ ದಾಖಲಿಸಲು ಅಗತ್ಯ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಆ ಆದೇಶವನ್ನು ಪ್ರಶ್ನಿಸಿ ಸಿಂಧೂರಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಮತ್ತು ಸತೀಶ್ ಚಂದ್ರ ಶರ್ಮ ಅವರಿದ್ದ ಪೀಠ, ಸಿಂಧೂರಿ ಅವರ ಅರ್ಜಿಯನ್ನು ಪರಿಗಣಿಸಿ, ಹೈಕೋರ್ಟ್ ಆದೇಶಕ್ಕೆ ತಾತ್ಕಾಲಿಕ ತಡೆ ನೀಡುವುದರ ಜೊತೆಗೆ ದೂರುದಾರರು ಸೇರಿದಂತೆ ಸಂಬಂಧಿತ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿದೆ. ಇದರಿಂದ ಸದ್ಯಕ್ಕೆ ಸಿಂಧೂರಿ ವಿರುದ್ಧ ಕ್ರಿಮಿನಲ್ ತನಿಖೆ ಆರಂಭಿಸುವ ಪ್ರಕ್ರಿಯೆಗೆ ಬ್ರೇಕ್ ಬಿದ್ದಂತಾಗಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ನೀಡಿದ್ದ ಆದೇಶದಲ್ಲಿ, ಇಲಾಖಾ ತನಿಖೆಯಲ್ಲಿ ಅಧಿಕಾರಿಯನ್ನು ನಿರ್ದೋಷಿ ಎಂದು ಘೋಷಿಸಿದರೂ, ಅದೇ ವಿಚಾರದಲ್ಲಿ ಕ್ರಿಮಿನಲ್ ತನಿಖೆ ನಡೆಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅವರು ಭ್ರಷ್ಟಾಚಾರ ಆರೋಪಗಳ ವಿಚಾರದಲ್ಲಿ ಸತ್ಯಾಸತ್ಯತೆ ತಿಳಿಯಲು ತನಿಖೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದರು.
ಮೈಸೂರು ನಗರ ಪಾಲಿಕೆ ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗಾಗಿ ಪರಿಸರ ಸ್ನೇಹಿ ಬ್ಯಾಗ್ಗಳನ್ನು ರೂ.52 ದರದಲ್ಲಿ ಖರೀದಿಸಲಾಗಿತ್ತು. ಆದರೆ ಅದೇ ಬ್ಯಾಗ್ಗಳು ಮಾರುಕಟ್ಟೆಯಲ್ಲಿ ರೂ.13ಕ್ಕೆ ಲಭ್ಯವಿದ್ದವು ಎನ್ನಲಾಗಿದೆ.
ಇದರಿಂದ ಸರ್ಕಾರಕ್ಕೆ ಸುಮಾರು ರೂ.5.88 ಕೋಟಿ ನಷ್ಟವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅಲ್ಲದೆ, ಗ್ರಾಮ ಪಂಚಾಯತ್ಗಳ ಕಲ್ಯಾಣ ಯೋಜನೆಗಳಿಗೆ ಮೀಸಲಾಗಿದ್ದ ಹಣವನ್ನು ಈ ಖರೀದಿಗೆ ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಪ್ರಕರಣದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17A ಅನ್ವಯ, ಅಧಿಕೃತ ಕರ್ತವ್ಯದ ಭಾಗವಾಗಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಎಫ್ಐಆರ್ ದಾಖಲಿಸಲು ಸರ್ಕಾರದ ಅನುಮತಿ ಕಡ್ಡಾಯವಾಗಿದೆ. ಇದೇ ಅನುಮತಿಯನ್ನು ನೀಡಲು ಹೈಕೋರ್ಟ್ ಸೂಚಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಈಗ ಅದಕ್ಕೆ ತಾತ್ಕಾಲಿಕ ತಡೆ ನೀಡಿರುವುದರಿಂದ, ಮುಂದಿನ ವಿಚಾರಣೆ ತನಕ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ.
ಈ ದೂರನ್ನು ಮೈಸೂರು ಮೂಲದ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಎನ್.ಆರ್. ರವೀಂದ್ರಚಂದ್ರ ಗೌಡ ಅವರು ಸಲ್ಲಿಸಿದ್ದರು.
ಈ ಹಿಂದೆ ಎಸಿಬಿ (ಆಂಟಿ-ಕರಪ್ಷನ್ ಬ್ಯೂರೋ) ಈ ಪ್ರಕರಣದಲ್ಲಿ ತನಿಖೆ ಆರಂಭಿಸಲು ಅನುಮತಿ ಕೇಳಿದರೂ, ರಾಜ್ಯ ಸರ್ಕಾರ ಎರಡು ಬಾರಿ ಅದನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



