ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿ ಮಾಡಲು ಅಸಾರಾಂಗೆ ತಾತ್ಕಾಲಿಕ ಜಾಮೀನು ನಿರಾಕರಣೆ
ರಾಜಸ್ಥಾನದ ಜೋಧ್‌ಪುರ ಜೈಲಿನಲ್ಲಿರುವ ಆಸಾರಾಮ್‌ಗೆ, ನ್ಯಾಯಮೂರ್ತಿಗಳಾದ ಗೀತಾ ಗೋಪಿ ಮತ್ತು ಎಲ್.ಎಸ್. ಪಿರ್ಜಾದಾ ಅವರಿದ್ದ ವಿಭಾಗೀಯ ಪೀಠ ತಾತ್ಕಾಲಿಕ ಜಾಮೀನು ನೀಡಲು ನಿರಾಕರಿಸಿತು.

ಅಹಮದಾಬಾದ್: ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಪತ್ನಿಯನ್ನು ಭೇಟಿಯಾಗಲು, ಸ್ವಯಂಘೋಷಿತ ಧಾರ್ಮಿಕ ಗುರು ಆಸಾರಾಮ್ ಕೋರಿದ್ದ 20 ದಿನಗಳ ತಾತ್ಕಾಲಿಕ ಜಾಮೀನನ್ನು ಗುಜರಾತ್ ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ರಾಜಸ್ಥಾನದ ಜೋಧ್‌ಪುರ ಜೈಲಿನಲ್ಲಿರುವ ಆಸಾರಾಮ್‌ಗೆ, ನ್ಯಾಯಮೂರ್ತಿಗಳಾದ ಗೀತಾ ಗೋಪಿ ಮತ್ತು ಎಲ್.ಎಸ್. ಪಿರ್ಜಾದಾ ಅವರಿದ್ದ ವಿಭಾಗೀಯ ಪೀಠ ತಾತ್ಕಾಲಿಕ ಜಾಮೀನು ನೀಡಲು ನಿರಾಕರಿಸಿತು.
ತಮ್ಮ ಪತ್ನಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಲು ಅನುಮತಿ ಕೋರಿ ಜೈಲು ಅಧೀಕ್ಷಕರಿಗೆ ಮನವಿ ಸಲ್ಲಿಸಬಹುದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಅಹಮದಾಬಾದ್‌ನ ನರೋಡಾದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ, ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ 83 ವರ್ಷದ ಪತ್ನಿಯನ್ನು ಭೇಟಿಯಾಗುವ ಉದ್ದೇಶದಿಂದ ಅವರು ಜಾಮೀನು ಕೋರಿದ್ದರು. ಪತ್ನಿಯ ಆರೋಗ್ಯದ ಬಗ್ಗೆ ತಮಗಿರುವ ಕಳವಳವನ್ನು ವ್ಯಕ್ತಪಡಿಸಿ, ಮಾನವೀಯತೆಯ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಅವರು ಕೋರಿದ್ದರು.
ಗಾಂಧಿನಗರದ ನ್ಯಾಯಾಲಯವೊಂದು 2013ರ ಅತ್ಯಾಚಾರ ಪ್ರಕರಣವೊಂದರಲ್ಲಿ ಆಸಾರಾಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು ಮತ್ತು ಆ ತೀರ್ಪಿನ ವಿರುದ್ಧ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.
ಅಲ್ಲದೆ, 2013ರಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿರುವ ತಮ್ಮ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಮತ್ತೊಂದು ಪ್ರಕರಣದಲ್ಲೂ ಅವರು ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಆಸಾರಾಮ್ ಅವರ ಪತ್ನಿಯ ಅನಾರೋಗ್ಯದ ಕುರಿತು ಅರ್ಜಿಯಲ್ಲಿ ಉಲ್ಲೇಖಿಸಲಾದ ಕಾರಣವನ್ನು ಪರಿಶೀಲಿಸಲು ಸೂಚಿಸಲಾಗಿದ್ದ ವೈದ್ಯರು ಮತ್ತು ಸ್ಥಳೀಯ ಪೊಲೀಸರು ಸಲ್ಲಿಸಿದ ವರದಿಗಳನ್ನು ನ್ಯಾಯಾಲಯ ಗಮನಿಸಿತು. ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಎರಡು-ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
"ಪ್ರಸ್ತುತ ಜೋಧ್‌ಪುರ ಜೈಲಿನಲ್ಲಿರುವ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲು ನಮಗೆ ಯಾವುದೇ ಕಾರಣ ಕಂಡುಬರುತ್ತಿಲ್ಲ. ಆದಾಗ್ಯೂ, ಅರ್ಜಿದಾರರು ತಮ್ಮ ಪತ್ನಿಯೊಂದಿಗೆ ಸಂವಹನ ನಡೆಸಲು ಬಯಸಿದರೆ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಲು ಅನುಮತಿ ಕೋರಿ ಜೈಲು ಅಧೀಕ್ಷಕರಿಗೆ ಮನವಿ ಸಲ್ಲಿಸಬಹುದು," ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಒಂದು ತಿಂಗಳ ಅವಧಿಯಲ್ಲಿ ಹೈಕೋರ್ಟ್ ಅರ್ಜಿದಾರರಿಗೆ ತಾತ್ಕಾಲಿಕ ಜಾಮೀನು ನಿರಾಕರಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ಆಸಾರಾಮ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟರೆ ತಮ್ಮನ್ನು ಸಂಪರ್ಕಿಸಲು ಕಳೆದ ತಿಂಗಳು ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು ಮತ್ತು ಅವರಿಗೆ ದಿನದ 24 ಗಂಟೆಯೂ ಆರೈಕೆದಾರರ ಸೇವೆಯನ್ನು ಒದಗಿಸುವಂತೆ ಸೂಚಿಸಿತ್ತು. ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಅವರು ಸಲ್ಲಿಸಿರುವ ಮನವಿಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿದೆ. ಜನವರಿ 2023ರಲ್ಲಿ, ಗಾಂಧಿನಗರದ ನ್ಯಾಯಾಲಯವೊಂದು ಅತ್ಯಾಚಾರ ಪ್ರಕರಣವೊಂದರಲ್ಲಿ ಆಸಾರಾಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಹಮದಾಬಾದ್ ಸಮೀಪದ ಮೊಟೆರಾದಲ್ಲಿರುವ ತನ್ನ ಆಶ್ರಮದಲ್ಲಿ ವಾಸಿಸುತ್ತಿದ್ದಾಗ, 2001ರಿಂದ 2006ರ ಅವಧಿಯಲ್ಲಿ ಸೂರತ್ ಮೂಲದ ಮಹಿಳಾ ಶಿಷ್ಯೆಯೊಬ್ಬಳ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ ಆರೋಪದ ಮೇರೆಗೆ 2013ರಲ್ಲಿ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯವು ಆಸಾರಾಮ್ ಅವರನ್ನು ದೋಷಿ ಎಂದು ಘೋಷಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



