ಬಿಸಿಲ ಝಳ: ರಾಜ್ಯದ ಕೆರೆ-ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿತ, ಹೆಚ್ಚಿದ ಆತಂಕ..!
ರಾಜ್ಯದ ಕೆಲ ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ, ತಾಪಮಾನ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ಮಟ್ಟ ತಲುಪಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

ಬೆಂಗಳೂರು: ಕರ್ನಾಟಕದಲ್ಲಿ ತೀವ್ರಗೊಂಡಿರುವ ಬಿಸಿಲಿನ ಪರಿಣಾಮವಾಗಿ ರಾಜ್ಯದ ಕೆರೆಗಳು, ಜಲಾಶಯಗಳು, ನದಿಗಳು ಸೇರಿದಂತೆ ಇತರೆ ನೀರಿನ ಮೂಲಗಳಿಂದ ಸುಮಾರು 7 ಟಿಎಂಸಿಎಫ್‌ಟಿ ನೀರು ನಷ್ಟವಾಗುವ ಆತಂಕ ಶುರುವಾಗಿದೆ.
ಇದರ ಪರಿಣಾಮ ಕುಡಿಯುವ ನೀರು ಹಾಗೂ ಕೃಷಿ ಉದ್ದೇಶಗಳಿಗೆ ರೈತರು ಮತ್ತು ಜನರು ಅಂತರ್ಜಲದ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ರಾಜ್ಯದ ಕೆಲ ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ, ತಾಪಮಾನ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ಮಟ್ಟ ತಲುಪಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಾಜಿ ನಿರ್ದೇಶಕ ಜಿಎಸ್ ಶ್ರೀನಿವಾಸ್ ರೆಡ್ಡಿ ಅವರು ಮಾತನಾಡಿ, ಏಪ್ರಿಲ್ ತಿಂಗಳಲ್ಲಿ ದಿನಕ್ಕೆ ಸುಮಾರು 6 ಮಿ.ಮೀ. ನೀರು ಆವಿಯಾಗುವ ಸಾಧ್ಯತೆಗಳಿದ್ದು, ಮೇ ತಿಂಗಳಲ್ಲಿ ಇದು 150 ಮಿ.ಮೀ.ಗೆ ಏರಿಕೆಯಾಗುವ ಸಾಧ್ಯತೆಗಳಿವೆ. ಇದು ಎರಡು ತಿಂಗಳಲ್ಲಿ ಒಟ್ಟಾರೆ ಸುಮಾರು 1 ಅಡಿ ನೀರಿನ ಮಟ್ಟ ಕುಸಿತಕ್ಕೆ ಕಾರಣವಾಗುತ್ತದೆ. ನದಿ, ಕೆರೆ, ಜಲಾಶಯ ಯಾವುದೇ ನೀರಿನ ಮೂಲದವಾದರೂ ಬೇಸಿಗೆಯಲ್ಲಿ 1 ಅಡಿ ನೀಡು ಆವಿಯಾಗುತ್ತದೆ ಎಂದು ಹೇಳಿದ್ದಾರೆ.
ಹಲವೆಡೆ ರೈತರು ಇನ್ನೂ ಪ್ರವಾಹ (ಫ್ಲಡ್) ನೀರಾವರಿ ವಿಧಾನವನ್ನು ಬಳಸುತ್ತಿದ್ದಾರೆ. ಈ ವಿಧಾನದಲ್ಲಿ ಬೆಳೆಗಳಿಗೆ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿಸುವುದರಿಂದ ಆವಿಯಾಗುವಿಕೆ (evaporation) ಪ್ರಮಾಣವೂ ಹೆಚ್ಚಾಗಿ, ನೀರಿನ ನಷ್ಟ ಹೆಚ್ಚಾಗುತ್ತದೆ. ಸ್ಪ್ರಿಂಕ್ಲರ್ ಅಥವಾ ಡ್ರಿಪ್ ನೀರಾವರಿ ವಿಧಾನಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿದರೂ, ಅದರ ಅಳವಡಿಕೆ ಇನ್ನೂ ಸಂಪೂರ್ಣವಾಗಿ ಆಗಿಲ್ಲ ಎಂದು ತಿಳಿಸಿದ್ದಾರೆ.
ಇದಲ್ಲದೆ ಸಸ್ಯಗಳ ಭಾಷ್ಪವಿಸರ್ಜನೆ (Transpiration) ಪ್ರಕ್ರಿಯೆಯಿಂದಲೂ ನೀರಿನ ನಷ್ಟವಾಗುತ್ತದೆ. ಸಸ್ಯಗಳು ತಮ್ಮ ಬೇರುಗಳ ಮೂಲಕ ಹೀರಿದ ನೀರನ್ನು, ಎಲೆಗಳ ಮೇಲಿರುವ ಸಣ್ಣ ರಂಧ್ರಗಳ (ಪತ್ರರಂಧ್ರಗಳು) ಮೂಲಕ ಬಿಡುಗಡೆ ಮಾಡುತ್ತೇವೆ. ಇದರಿಂದ ಮಣ್ಣು ಬೇಗ ಒಣಗುತ್ತದೆ. ಬಳಿಕ ಬೆಳೆಗಳಿಗೆ ಮತ್ತೆ ಮತ್ತೆ ನೀರು ಒದಗಿಸುವ ಅಗತ್ಯ ಹೆಚ್ಚುತ್ತದೆ. ಇದರಿಂದ ಒಟ್ಟಾರೆ ನೀರಿನ ಬಳಕೆ ಹೆಚ್ಚಾಗಿ, ಸಂಪನ್ಮೂಲಗಳ ಮೇಲೆ ಒತ್ತಡ ಉಂಟಾಗುತ್ತದೆ.
ಮೇಲ್ಮೈ ನೀರಿನ ಮೂಲಗಳು ಕಡಿಮೆಯಾಗುತ್ತಿರುವ ಹಿನ್ನೆಲೆ, ಜನರು ಅಂತರ್ಜಲದತ್ತ ಮುಖಮಾಡುತ್ತಿದ್ದಾರೆ, ಇದರಿಂದ ಅಂತರ್ಜಲ ಬತ್ತುವ ಆತಂಕ ಹೆಚ್ಚಾಗಿದೆ. ಕಳೆದ ವರ್ಷ ಪ್ರೀ-ಮಾನ್‌ಸೂನ್ ಮಳೆಯು ಉತ್ತಮವಾಗಿದ್ದರಿಂದ ಆವಿಯಾಗುವ ಪ್ರಮಾಣ ಸ್ವಲ್ಪ ಕಡಿಮೆ ಇತ್ತು. ಆದರೆ ಈ ವರ್ಷ ನೀರಿನ ಲಭ್ಯತೆ ಕಡಿಮೆಯಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ದಕ್ಷಿಣ ಒಳನಾಡು ಹಾಗೂ ಉತ್ತರ ಕರ್ನಾಟಕದ ರೈತರು ಬೇಸಿಗೆ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಬೆಳೆ ಉತ್ತಮವಾಗಿದ್ದರೆ ನೀರಿನ ಬಳಕೆ ಮತ್ತು ಆವಿಯಾಗುವ ಪ್ರಮಾಣವೂ ಹೆಚ್ಚಾಗುತ್ತದೆ. ಸರ್ಕಾರ ಕುಡಿಯುವ ನೀರಿಗೆ ಆದ್ಯತೆ ನೀಡುತ್ತಿದ್ದರೂ, ರೈತರು ಕಾಲುವೆ ಹಾಗೂ ಇತರೆ ಮೂಲಗಳಿಂದ ನೀರನ್ನು ಬಳಸುತ್ತಿದ್ದಾರೆಂದು ಹೇಳಿದ್ದಾರೆ.
ಕೆಎಸ್‌ಎನ್‌ಡಿಎಂಸಿ ದತ್ತಾಂಶದ ಪ್ರಕಾರ, ಆವಿಯಾಗುವಿಕೆಯಿಂದಾಗಿ ರಾಜ್ಯದ ಅನೇಕ ಪ್ರಮುಖ ಅಣೆಕಟ್ಟುಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಪ್ರಮಾಣ ಕಡಿಮೆ ಇದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



