ರಾಜ್ಯ

ಬೆಂಗಳೂರು ಬಿಸಿನೆಸ್ ಕಾರಿಡಾರ್ ಹಂತ-1: ವಿನ್ಯಾಸ ಬದಲಾವಣೆಯಿಂದ ಯೋಜನೆ ವೆಚ್ಚ 3,500 ಕೋಟಿ ರೂ ಗಳಷ್ಟು ಏರಿಕೆ; ಮತ್ತಷ್ಟು ಹೆಚ್ಚಳ ಸಾಧ್ಯತೆ..!

ಸುಮಾರು 73 ಕಿ.ಮೀ ಉದ್ದದ ಈ ಯೋಜನೆಯ ವೆಚ್ಚವು 2022–23ರಲ್ಲಿ 6,800 ರಿಂದ 7,000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ, ಇದೀಗ ಸುಮಾರು 10,500 ಕೋಟಿ ರೂ. ಗೆ ಏರಿಕೆಯಾಗಿದೆ.

ಬೆಂಗಳೂರು ಬಿಸಿನೆಸ್ ಕಾರಿಡಾರ್ ಹಂತ-1: ವಿನ್ಯಾಸ ಬದಲಾವಣೆಯಿಂದ ಯೋಜನೆ ವೆಚ್ಚ 3,500 ಕೋಟಿ ರೂ ಗಳಷ್ಟು ಏರಿಕೆ; ಮತ್ತಷ್ಟು ಹೆಚ್ಚಳ ಸಾಧ್ಯತೆ..!
Published On :

ಬೆಂಗಳೂರು: ಬೆಂಗಳೂರು ನಗರದಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾದ ಬೆಂಗಳೂರು ಬಿಸಿನೆಸ್ ಕಾರಿಡಾರ್ (BBC) ಮೊದಲ ಹಂತದ ವೆಚ್ಚದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

73 ಕಿಮೀ ಉದ್ದದ ಈ ಯೋಜನೆಯ ಹಂತ-1 ವೆಚ್ಚವು 2022–23ರಲ್ಲಿ ಅಂದಾಜು 6,800–7,000 ಕೋಟಿ ರೂ. ಇದ್ದದ್ದು, ಇದೀಗ ಸುಮಾರು 10,500 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ ಈಗಾಗಲೇ ಸುಮಾರು 3,500 ಕೋಟಿ ರೂ. ಹೆಚ್ಚಳವಾಗಿದೆ. ಮುಂದಿನ ಹಂತಗಳಲ್ಲಿ ಕಾಮಗಾರಿ ಮುಂದುವರಿದಂತೆ ವೆಚ್ಚ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಬಿಬಿಸಿಯ ಅಧ್ಯಕ್ಷ ಎಲ್.ಕೆ. ಅಥೀಕ್ ಅವರ ಮಾತನಾಡಿ, ಹೊಸ ವಿನ್ಯಾಸ ಬದಲಾವಣೆಗಳು ಮತ್ತು ಕಳೆದ ಮೂರು ವರ್ಷಗಳಲ್ಲಿ ದರಪಟ್ಟಿಯ ವಾರ್ಷಿಕ ಏರಿಕೆ (8 ರಿಂದ 10 ಶೇಕಡಾ) ಈ ವೆಚ್ಚ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.

ಈ ಮೊದಲು 50 ಮೀಟರ್ ಅಗಲದಲ್ಲಿ ಯೋಜನೆ ರೂಪಿಸಲಾಗಿದ್ದ ರಸ್ತೆ, ಇದೀಗ 65 ಮೀಟರ್ ಅಗಲಕ್ಕೆ ವಿಸ್ತರಿಸಲಾಗಿದೆ. ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆಗಳ ವ್ಯವಸ್ಥೆಯನ್ನೂ ಸೇರಿಸಲಾಗಿದೆ. ಹಿಂದೆ ಕೇವಲ ಮೂರು ಇಂಟರ್‌ಚೇಂಜ್‌ಗಳನ್ನು ಮಾತ್ರ ಯೋಜಿಸಲಾಗಿತ್ತು. ಈಗ ಕನಿಷ್ಠ ಎಂಟು ಪ್ರಮುಖ ಇಂಟರ್‌ಚೇಂಜ್‌ಗಳು, ಹಲವು ಫ್ಲೈಓವರ್‌ಗಳು ಹಾಗೂ ಪ್ಯಾಕೇಜ್-1ರಲ್ಲಿ ಸುಮಾರು 5 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಕೂಡ ಸೇರಿಸಲಾಗಿದೆ.

ದೊಡ್ಡಬಳ್ಳಾಪುರ ರಸ್ತೆ, ಹೆಣ್ಣೂರು ರಸ್ತೆ (ಬೈರತಿ ಬಳಿ), ವೈಟ್‌ಫೀಲ್ಡ್ ಮತ್ತು ಸರ್ಜಾಪುರ ಮುಂತಾದ ಪ್ರಮುಖ ಜಂಕ್ಷನ್‌ಗಳಲ್ಲಿ ಕ್ಲೋವರ್‌ಲೀಫ್ ಇಂಟರ್‌ಚೇಂಜ್‌ಗಳನ್ನು ನಿರ್ಮಿಸುವುದರಿಂದ ವೆಚ್ಚ ಹೆಚ್ಚಾಗಿದೆ. ಮೊದಲ ಹಂತವನ್ನು ಸುಮಾರು 21 ಕಿ.ಮೀ, 20 ಕಿ.ಮೀ ಮತ್ತು 30 ಕಿ.ಮೀ ಉದ್ದದ ಮೂರು ಪ್ಯಾಕೇಜ್‌ಗಳಾಗಿ ವಿಭಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಪಿಆರ್‌ಆರ್ ರೈತ ಹಾಗೂ ನಿವೇಶನದಾರರ ಸಂಘವು ಯೋಜನೆಯ ವೆಚ್ಚದಲ್ಲಿ ಉಂಟಾಗಿರುವ ತೀವ್ರ ಏರಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ.

ಅವರ ಪ್ರಕಾರ, ಮೊದಲಿಗೆ ಸುಮಾರು ರೂ.82 ಕೋಟಿ ಪ್ರತಿ ಕಿ.ಮೀ (100 ಮೀ ರಸ್ತೆ) ಇದ್ದ ನಿರ್ಮಾಣ ವೆಚ್ಚ, ಈಗ ಮೊದಲ ಪ್ಯಾಕೇಜ್‌ಗೆ ರೂ.230 ಕೋಟಿ ಪ್ರತಿ ಕಿ.ಮೀ (65 ಮೀ ರಸ್ತೆ) ಮಟ್ಟಕ್ಕೆ ಏರಿಕೆಯಾಗಿದೆ ಎಂದು ಆರೋಪಿಸಿದ್ದಾರೆ.

ಈ ದರಗಳನ್ನು ಪೂರ್ಣ 73 ಕಿ.ಮೀ ಉದ್ದದ ಯೋಜನೆಗೆ ಅನ್ವಯಿಸಿದರೆ, ಒಟ್ಟು ವೆಚ್ಚವು ಸುಮಾರು 180% ವರೆಗೆ ಏರಬಹುದು ಎಂದು ಸಂಘವು ಎಚ್ಚರಿಸಿದೆ. ಜೊತೆಗೆ ಪರಿಸರ ಅನುಮತಿ ಮತ್ತು ಸಂಪೂರ್ಣ ಡೀಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್ ಇಲ್ಲದೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.

ಆದರೆ, ಅತೀಕ್ ಅವರು ಈ ಆರೋಪಗಳನ್ನು ತಳ್ಳಿ ಹಾಕಿದ್ದು, ವಿನ್ಯಾಸ ಸುಧಾರಣೆಗಳಿಗೆ ಅನುಗುಣವಾಗಿ ವೆಚ್ಚ ಏರಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಪೂರ್ಣ ಯೋಜನೆಯ ವೆಚ್ಚವನ್ನು ಹೆಚ್ಚಾಗಿದೆ ಎಂದು ಹೇಳುವುದು ಸರಿಯಲ್ಲ; ವಾಸ್ತವಿಕ ಏರಿಕೆ ಸುಮಾರು ರೂ.3,500 ಕೋಟಿ ಮಾತ್ರ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.