'ಅನ್ನರಾಮಯ್ಯ ಎನ್ನುವುದಕ್ಕಿಂತ ಕನ್ನರಾಮಯ್ಯ ಎನ್ನಬಹುದು; ರಾಜ್ಯದಲ್ಲಿ ಕೇಂದ್ರದ ಯೋಜನೆಗಳಿಗೆ ಸಿದ್ದರಾಮಯ್ಯ ಅಡ್ಡಿ': HDK
ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಿದ್ಧವಾಗಿದ್ದರೂ ಸಿದ್ದರಾಮಯ್ಯ ಸರ್ಕಾರ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂದು ಹೇಳಿದರು.

ದಾವಣಗೆರೆ: ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಕಾರ್ಖಾನೆಗಳ ಪುನರುಜ್ಜೀವನಕ್ಕೆ ರಾಜ್ಯ ಸರ್ಕಾರ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಿದ್ಧವಾಗಿದ್ದರೂ ಸಿದ್ದರಾಮಯ್ಯ ಸರ್ಕಾರ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರವು ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (KIOCL)ಗೆ 1,700 ಕೋಟಿ ರೂಪಾಯಿ ಮೂಲಧನ ನೀಡಿದರೂ, ರಾಜ್ಯ ಸರ್ಕಾರ ಯಾವುದೇ ಕಾರಣವಿಲ್ಲದೆ ಕಂಪನಿಯನ್ನು ಮುಳುಗಿಸಲು ಯೋಜಿಸಿದೆ ಎಂದು ಆರೋಪಿಸಿದರು.
ಅರಣ್ಯ ಕಾಯ್ದೆಯನ್ನು ಉಲ್ಲೇಖಿಸಿ ರಾಜ್ಯ ಸರ್ಕಾರವು ಹೆಚ್ ಎಂಟಿ ಪುನರುಜ್ಜೀವನಕ್ಕೂ ಅಡ್ಡಿಯಾಗಿದೆ ಎಂದು ಅವರು ಹೇಳಿದರು.
ಪಕ್ಕದ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ 35,000 ಕೋಟಿ ರೂಪಾಯಿ ಸಾಲ ಹೊಂದಿದ್ದ ಉಕ್ಕಿನ ಕಾರ್ಖಾನೆಯನ್ನು ನಾವು ಪುನರಾರಂಭಿಸಿದ್ದೇವೆ. ಅಲ್ಲದೆ 1.25 ಲಕ್ಷ ಕೋಟಿ ರೂಪಾಯಿ ಹೂಡಿಕೆಯಿಂದ ಹೊಸ ಕಾರ್ಖಾನೆಯನ್ನು ಸ್ಥಾಪಿಸಲಾಗುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವುದನ್ನು ನಿಲ್ಲಿಸಿ, ಸ್ನೇಹಪೂರ್ವಕವಾಗಿ ವರ್ತಿಸಿ. ಆಂಧ್ರ ಪ್ರದೇಶ ಸರ್ಕಾರವನ್ನು ನೋಡಿ ಪಾಠ ಕಲಿಯಿರಿ ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.
ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡರು ವೀಲ್ ಚೇರ್ ನಲ್ಲಿ ಸಂಸತ್ ಅಧಿವೇಶನಕ್ಕೆ ಹೋಗಿ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಎತ್ತಿನಹೊಳೆ ಯೋಜನೆಗಳ ಅಡೆತಡೆಗಳನ್ನು ನಿವಾರಿಸಿದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ಎಷ್ಟು ಬಾರಿ ಧ್ವನಿ ಎತ್ತಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಧಕ್ಕೆ ಉಂಟಾದಾಗ ಮಾತ್ರ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ನೆನಪಾಗುತ್ತಾರೆ, ತಮ್ಮ ಸ್ಥಾನ ಸುರಕ್ಷಿತವಾಗಿರುವಾಗ ಅವರು ಅಹಿಂದವನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಟೀಕಿಸಿದರು.
'ಸಿದ್ದರಾಮಯ್ಯ ಅನ್ನರಾಮಯ್ಯ ಎನ್ನುವುದಕ್ಕಿಂತ ಕನ್ನರಾಮಯ್ಯ ಎನ್ನಬಹುದು'
ಕೇಂದ್ರದಿಂದ ಪಡಿತರ ಕೊಟ್ಟಿದ್ದು ನಾವು.ಸಿದ್ದರಾಮಯ್ಯ ಅನ್ನರಾಮಯ್ಯ ಎನ್ನುವುದಕ್ಕಿಂತ ಕನ್ನರಾಮಯ್ಯ ಎನ್ನಬಹುದು. 28 ಸಾವಿರ ಕೋಟಿ ಹಣ 15 ಲಕ್ಷ ಮನೆಗಳನ್ನು ಕಟ್ಟಲು ಬೇಕಾಗಿತ್ತು. ಆದರೆ ಈಗ ಅದೇ 15 ಲಕ್ಷ ಮನೆ ಕಟ್ಟಲು 2 ಸಾವಿರ ಕೋಟಿ ಇಟ್ಟಿದ್ದಾರೆ. ಗ್ಯಾಸ್ ಸಿಲಿಂಡರ್ಗಳ ಪೂರೈಕೆ ಕಷ್ಟ ಇದೆ. ಆದರೆ ಈ ಕಾಂಗ್ರೆಸ್ ಅವರು ಪ್ರಧಾನಿಗಳು ಪೂರೈಕೆ ಮಾಡುತ್ತಿಲ್ಲ ಎಂದು ಅರೋಪ ಮಾಡುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿನ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವುದು ಗೊತ್ತಿದೆ. ಆದರೆ ಪ್ರಧಾನಿಗಳು ಬೇರೆ ದೇಶಗಳ ಜೊತೆ ಇಟ್ಟುಕೊಂಡ ಸ್ನೇಹದಿಂದ ಅಲ್ಲಿಂದ ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದಾರೆ. ಹಾರ್ಮುಜ್ ಜಲಸಂಧಿಯ ಮೂಲಕ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ಯಾಸ್ ಆಮದು ಮಾಡಿಕೊಳ್ಳುತ್ತಿದ್ದಾರೆ ಎಂದರು.
ಸಿಎಂ, ಡಿಸಿಎಂ, ಸುರ್ಜೇವಾಲ ಮಾತನಾಡಿದ್ದು ನೋಡಿದ್ದೆ. ಕೇಂದ್ರದಿಂದ ಬರುವ ಪಡಿತರವನ್ನು ಕೊಟ್ಟು ನಾವು ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಸಿಎಂ ಖುರ್ಚಿ ಕದನ ನಡೆಯಿತ್ತಲೇ ಇವೆ. ಕಾರ್ಯಕರ್ತರ ಶಕ್ತಿಯ ಮೇಲೆ 40 ಸೀಟ್ ತೆಗೆದುಕೊಂಡಿದ್ದೇವೆ. ಪ್ರಾದೇಶಿಕ ಪಕ್ಷ ಕಟ್ಟಿ ನೀವು ಗೆಲ್ಲಿಸಿ ನೋಡಿ. ಕುಟುಂಬ ರಾಜಕಾರಣ ಎಂದು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತೀರಿ. ನೀವು ನಿಮ್ಮ ಮಗನನ್ನು ರಾಜಕೀಯಕ್ಕೆ ತರೆತಂದಿದ್ದಕ್ಕೆ ಏನು ಅಂತಾರೆ. ನಿಮ್ಮ ಮಗನನ್ನು ಟ್ರಾನ್ಫರ್ ಮಾಡಿಸಲು, ಬೇರೆ ಬೇರೆ ಕೆಲಸ ಮಾಡಲು ತಂದಿದ್ದೀರಾ ಎಂದು ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



