ಬೆಂಗಳೂರು ನಗರಾಭಿವೃದ್ಧಿ ಯೋಜನೆಗಳ ಮರುಕಲ್ಪನೆ ಮಾಡಿ: ನಾಗರಿಕ ಸಂಘಟನೆಗಳ ಆಗ್ರಹ
ಪ್ರತಿಭಟನಾಕಾರರು ಈ ಯೋಜನೆಗಳನ್ನು ಮೂರ್ಖ ಯೋಜನೆಗಳು ಎಂದು ಕರೆದರು. ಯೋಜನಾ ಸ್ಥಳಗಳ ಸಮೀಪ ಪ್ರತಿಭಟಿಸಿ ಈ ಕುರಿತು ಸಾರ್ವಜನಿಕರ ಗಮನ ಸೆಳೆದರು.

ಬೆಂಗಳೂರು: ಪ್ರಸ್ತುತ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಕೈಗೊಳ್ಳಲು ಉದ್ದೇಶಿಸಿರುವ ಅನೇಕ ಯೋಜನೆಗಳು ನಾಗರಿಕ ವಿರೋಧಿಯಾಗಿವೆ ಎಂದು ಗ್ರೀನ್‌ಪೀಸ್ ಇಂಡಿಯಾ ಮತ್ತು ಬೆಂಗಳೂರು ರೈಸಿಂಗ್ ಅಭಿಯಾನದ ಭಾಗವಾಗಿರುವ ಹಲವು ನಾಗರಿಕ ಸಂಘಟನೆಗಳು ನಗರದ ವಿವಿಧ ಭಾಗಗಳಲ್ಲಿ ನಿನ್ನೆ ಏಪ್ರಿಲ್ 1ರ ಮೂರ್ಖರ ದಿನ ಪ್ರತಿಭಟನೆ ನಡೆಸಿದವು.
ಪ್ರತಿಭಟನಾಕಾರರು ಈ ಯೋಜನೆಗಳನ್ನು ಮೂರ್ಖ ಯೋಜನೆಗಳು ಎಂದು ಕರೆದರು. ಯೋಜನಾ ಸ್ಥಳಗಳ ಸಮೀಪ ಪ್ರತಿಭಟಿಸಿ ಈ ಕುರಿತು ಸಾರ್ವಜನಿಕರ ಗಮನ ಸೆಳೆದರು. ನಾಲ್ಕು ವರ್ಷಕ್ಕೂ ಹೆಚ್ಚುಕಾಲದಿಂದ ಸ್ಥಗಿತಗೊಂಡಿರುವ ರಾಜರಾಜೇಶ್ವರಿ ನಗರದ ಕಮಾನಿನ ಬಳಿಯ ಫ್ಲೈಓವರ್ ಮತ್ತು ಸುಮಾರು ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದೊಮ್ಮಸಂದ್ರ ಫ್ಲೈಓವರ್ ಬೃಹತ್ ಯೋಜನೆಗಳು ಪೂರ್ಣವಾಗದೆ ನಗರದ ಜನರ ದೈನಂದಿನ ಜೀವನಕ್ಕೆ ಅಡ್ಡಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರೀನ್‌ಪೀಸ್ ಇಂಡಿಯಾದ ಹವಾಮಾನ ಮತ್ತು ಇಂಧನ ವಿಭಾಗದ ಕ್ಯಾಂಪೇನರ್ ಅಮೃತಾ ಎಸ್.ಎನ್, ಇವು ದೈನಂದಿನ ಜನಜೀವನಕ್ಕೆ ಅಡ್ಡಿ ಉಂಟುಮಾಡುವ, ವಿಳಂಬಗತಿಯಲ್ಲಿ ಸಾಗುವ, ಭರಿಸಲಾಗದ ವೆಚ್ಚಗಳ ಹೊರೆಯಿಂದ ಕೂಡಿರುವ, ಇನ್ನೂ ಪೂರ್ಣಗೊಳ್ಳದ ಅಥವಾ ಉದ್ಧೇಶಿತ ಸಮಸ್ಯೆಗಳನ್ನೇ ಪರಿಹರಿಸಲು ವಿಫಲವಾಗುವ ಯೋಜನೆಗಳಾಗಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ದ ಚುನಾವಣೆಗೆ ಉಮೇದುವಾರ ಅಭ್ಯರ್ಥಿಗಳು, ನಾಗರಿಕರು ವಿರೋಧಿಸುತ್ತಿರುವ ಈ ಸಮಸ್ಯೆಗಳನ್ನು ಚುನಾವಣೆಗೆ ಮುನ್ನವೇ ಬಗೆಹರಿಸಬೇಕು. ಬೆಂಗಳೂರು ಜಾಗತಿಕ ಮಟ್ಟದಲ್ಲಿ ನಗೆಪಾಟಲಾಗುವುದನ್ನು ತಡೆಯಬೇಕು ಎಂದರು.
ಮಲ್ಲೇಶ್ವರಂ ಸೋಶಿಯಲ್ ಸಂಸ್ಥೆ ಸದಸ್ಯ ಕೌಸ್ತುಭ್ ರಾವ್, ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರ ಮತ್ತು ಜೀವ ವೈವಿಧ್ಯತೆಗೆ ಪ್ರಾಧಾನ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ನಗರದಲ್ಲಿ ಈಗಿರುವ ಹಸಿರು ಆವರಣವನ್ನು ರಕ್ಷಿಸುವುದು ಮೊದಲ ಹೆಜ್ಜೆಯಾಗಬೇಕು.
ನಿಷ್ಕ್ರಿಯಗೊಂಡಿರುವ ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ಸಮೀಪದ ದಟ್ಟ ಅರಣ್ಯ ಪರಿಸರವು ಎಲ್ಲ ವರ್ಗದ ಜನರಿಗೆ ಉಪಯುಕ್ತವಾಗುವ ಸಾರ್ವಜನಿಕ ಬಳಕೆಯ ಸ್ಥಳವಾಗಬಹುದು. ಇದನ್ನು ಕನ್‌ವೆನ್‌ಷನ್ ಸೆಂಟರ್ ಆಗಿ ಪರಿವರ್ತಿಸುವುದು ಕೇವಲ ಕೆಲವೇ ವರ್ಗಗಳಿಗೆ ಉಪಯುಕ್ತವಾಗುತ್ತದೆ. ಇದು ಟ್ರಾಫಿಕ್, ಮಾಲಿನ್ಯ ಮತ್ತು ನಗರದ ತಾಪಮಾನವನ್ನು ಹೆಚ್ಚಿಸುತ್ತದೆಯೇ ಹೊರತು, ಜನರಿಗೆ ಬೇಕಾದ ಸಾರ್ವಜನಿಕ ಹಸಿರು ಸ್ಥಳಗಳ ಕೊರತೆಯನ್ನು ಬಗೆಹರಿಸುವುದಿಲ್ಲ ಎಂದು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು.
ನಗರದಾದ್ಯಂತ ನಡೆಸಲಾದ ಈ ಪ್ರತಿಭಟನೆಗಳು ಕಳೆದ ದಶಕದ ಅಭಿವೃದ್ಧಿ ಮಾದರಿಯ ವಿರುದ್ಧದ ಪ್ರತಿರೋಧವಾಗಿದ್ದು, ಈ ಮಾದರಿಗಳು ಪಾದಚಾರಿ ಮಾರ್ಗ, ಉಸಿರಾಡಲು ಶುದ್ಧ ಗಾಳಿ ಮತ್ತು ನಗರದ ಕಡಿಮೆಯಾಗುತ್ತಿರುವ “ಹಸಿರು-ನೀಲಿ” (ಕೆರೆಗಳು ಮತ್ತು ಉದ್ಯಾನಗಳು) ಪ್ರದೇಶಗಳಿಗಿಂತ ಫ್ಲೈಓವರ್‌ಗಳು ಮತ್ತು ರಸ್ತೆ ವಿಸ್ತರಣೆಗಳಿಗೆ ಆದ್ಯತೆ ನೀಡಿದ್ದನ್ನು ಪ್ರಶ್ನಿಸಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



